ಪಟ್ಟಣದ ಮಹಿಳಾ ಸಮಾಜದಲ್ಲಿ ಗಣಹೋಮ ಮತ್ತು ಮಾತೃವಂದನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸೋಮವಾರಪೇಟೆ ಕಾರ್ಯಕ್ಷೇತ್ರಕ್ಕೆ ಒಳಪಡುವ ಪ್ರಗತಿಬಂಧು ಸ್ವಸಹಾಯ ಗುಂಪುಗಳ ನೇತೃತ್ವದಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ಗಣಹೋಮ ಮತ್ತು ಮಾತೃ ವಂದನಾ ಕಾರ್ಯಕ್ರಮ ನಡೆಯಿತು.ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಮುಳ್ಳೂರು ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಅವರು, ತಾಯಿ ತನ್ನ ನಡವಳಿಕೆ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಸಂಸ್ಕಾರದ ಕೊಂಡಿ ಕಳಚಿದರೆ ಸಮಾಜಕ್ಕೆ ಭವಿಷ್ಯವಿಲ್ಲ. ಕುಟುಂಬ ವ್ಯವಸ್ಥೆ ಬಲಗೊಳ್ಳುವುದೇ ಮನೆಯ ತಾಯಿಯಿಂದ ಎಂದ ಅವರು, ಕೌಟುಂಬಿಕ ಸಂಬಂಧಗಳು ಉತ್ತಮಗೊಳ್ಳಬೇಕು. ಇಂಗ್ಲೀಷ್ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣವೂ ಅತ್ಯಗತ್ಯ ಎಂದು ಪ್ರತಿಪ್ರಾದಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕ್ಷೇತ್ರದಿಂದ ಮಹಿಳಾ ಸಬಲೀಕರಣ, ರೈತರು, ವೃದ್ಧರು, ವಿದ್ಯಾರ್ಥಿಗಳು, ಅಶಕ್ತರ ಶ್ರೇಯೋಭಿವೃದ್ಧಿಗೆ ಹಲವಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದನ್ನು ಸಹಿಸದ ಕಿಡಿಗೇಡಿಗಳು ಕ್ಷೇತ್ರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಎಂದರು.ಮತ್ತೋರ್ವ ಅತಿಥಿ, ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿ, ದೇಶದ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಿಸಿದರು.ವೇದಿಕೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಜನಜಾಗೃತಿ ಸಮಿತಿಯ ಸದಸ್ಯ ಮಸಗೋಡು ಸುರೇಶ್, ಸೋಮೇಶ್, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಪೂಜಾ ಸಮಿತಿ ಅಧ್ಯಕ್ಷೆ ಪೌಲಿನಾ ಸಿಕ್ವೇರಾ, ಒಕ್ಕೂಟದ ಅಧ್ಯಕ್ಷರಾದ ರವಿಕುಮಾರ್, ಚೇತನ್, ಲತಾ ಅಣ್ಣಪ್ಪ, ಲತಾ ರಾಮದಾಸ್, ರೂಪಾ ಹರೀಶ್, ಮುತ್ತಮ್ಮ ಅವರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಹಾಗೂ ಮಾತೃವಂದನೆ ನಡೆಯಿತು.