ಸಾರಾಂಶ
ತಾಲೂಕಿನಾದ್ಯಂತ ಮಳೆ ತೀವ್ರತೆ ಕಡಿಮೆಯಾಗಿದೆ. ಕಕ್ಕೆಹೊಳೆಯಲ್ಲಿ ನೀರು ಹರಿದು ಮನೆಯಲ್ಲಿ ಅಪಾರ ವಸ್ತುಗಳು ಹಾನಿಯಾಗಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನಾದ್ಯಂತ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ, ಶುಕ್ರವಾರ ಸುರಿದ ಭಾರಿ ಮಳೆಗೆ ಕಿರಗಂದೂರು- ಮಾದಾಪುರ ರಸ್ತೆಯು ನಂದಿಮೊಟ್ಟೆ ಹೊಳೆ ರಸ್ತೆಯ ಮೇಲೆ ಎರಡು ಅಡಿಗೂ ಮೇಲೆ ಹರಿದಿದ್ದರಿಂದ ಎರಡು ದಿನಗಳು ಸಂಚಾರ ಬಂದ್ ಆಗುವುದರೊಂದಿಗೆ ನಾಗರಿಕರಿಗೆ ತೊಂದರೆಯಾಯಿತು.ಸೋಮವಾರಪೇಟೆಯ ಆಲೆಕಟ್ಟೆ ರಸ್ತೆಯ ಕಾವೇರಿ ಬಡಾವಣೆ ನಿವಾಸಿ ಕೃಷ್ಣ ಅವರ ಮನೆಗೆ ಕಕ್ಕೆಹೊಳೆ ನೀರು ಹರಿದು ಮನೆಯಲ್ಲಿ ಅಪಾರ ವಸ್ತುಗಳು ಹಾನಿಯಾಗಿರುವ ಘಟನೆ ವರದಿಯಾಗಿದೆ.
ಯಡವನಾಡು ಗ್ರಾಮದ ಸಮೀಪ ಸೋಮವಾರಪೇಟೆ-ಕೂಡಿಗೆ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸೋಮವಾರಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಛಾವಣಿ ಷೀಟುಗಳು ಭಾರಿ ಗಾಳಿ ಮಳೆಗೆ ಒಡೆದು ಹೋಗಿರುವ ಪರಿಣಾಮ ಮಳೆ ನೀರು ಸಭಾಂಗಣವನ್ನು ತುಂಬಿತ್ತು. ಗ್ರಾಮಗಳಲ್ಲಿ ಇನ್ನೂ ಕೂಡ ವಿದ್ಯುತ್ ಸಂಪರ್ಕ ಸಿಗದೆ ಗ್ರಾಮೀಣ ಪ್ರದೇಶದ ಜನತೆ ಪರದಾಡುವಂತಾಗಿದೆ. ಮೊಬೈಲ್ ಫೋನ್‌ಗಳಿಗೆ ಛಾರ್ಜರ್ ಮಾಡಲೂ ಕೂಡ ಸಾಧ್ಯವಾಗದೇ ಗ್ರಾಮೀಣ ಪ್ರದೇಶ ಸಂಪೂರ್ಣ ಸಂಪರ್ಕಕ್ಕೆ ಸಿಗದಂತಾಗಿದೆ. ಸೋಮವಾರಪೇಟೆ ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿಗೂ ಕೂಡ ತತ್ವಾರವಾಗಿದ್ದು, ಭಾರೀ ಮಳೆಯಲ್ಲೂ ಟ್ಯಾಂಕರ್‌ಗಳ ಮುಖಾಂತರ ನೀರನ್ನು ಜನತೆ ತರಿಸುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಮಳೆ ಕಡಿಮೆಯಿದ್ದರೂ, ಭಾರಿ ಗಾಳಿಯಿಂದಾಗಿ ಮರಗಳು ಹೆಚ್ಚು ಬೀಳುತ್ತಿರುವುದರಿಂದ ರಸ್ತೆ ಸಂಚಾರ ಮತ್ತು ವಿದ್ಯುತ್ ಸಂಪರ್ಕ ಒದಗಿಸಲು ಇಲಾಖಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.