ಸೋಮವಾರಪೇಟೆ: ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆ

| Published : Aug 29 2025, 01:00 AM IST

ಸಾರಾಂಶ

ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಂದುಕೊರತೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆ ಇನ್ಸ್ಪೆಕ್ಟರ್ ಮುದ್ದು ಮಾದೇವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆ 7ರಿಂದಲೇ ಮದ್ಯ ಮಾರಾಟವನ್ನು ಖಾಸಗಿ ಅಂಗಡಿ ಮತ್ತು ಮನೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಗಮನಕ್ಕೆ ತಂದರೂ, ಇಂದಿಗೂ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಸಭೆಯಲ್ಲಿ ಹಲವರು ದೂರಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಬಜೆಗುಂಡಿ, ಬಾಣಾವಾರ, ಅಬ್ಬೂರುಕಟ್ಟೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮದ್ಯಮಾರಾಟ ಹೆಚ್ಚಾಗಿದೆ. ಪರಿಶಿಷ್ಟ ಪಂಗಡದವರೇ ಇರುವ ಸ್ಥಳಗಳಲ್ಲಿ ಹೆಚ್ಚು ಮದ್ಯಮಾರಾಟವಾಗುತ್ತಿದೆ. ಗಾಂಧಿನಗರದಲ್ಲಿ ರಾತ್ರಿ 10ರ ನಂತರ ಹೆಚ್ಚು ಮದ್ಯವನ್ನು ಸ್ಥಳೀಯರು ಮತ್ತು ಹೊರಗಿನ ಯುವಕರು ತಂದು ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಚೌಡ್ಲು ಗ್ರಾಮದ ಪ್ರತಾಪ್ ಮನವಿ ಮಾಡಿದರು. ಪಟ್ಟಣದ ಜೂನಿಯರ್ ಕಾಲೇಜು ಬಳಿಯಲ್ಲಿ ಮದ್ಯ ಮತ್ತು ಗಾಂಜಾ ಮಾರಾಟ ಮಾಡಲಾಗುತ್ತಿದೆ. ಸಂಜೆಯಾಗುತ್ತಲೆ ಯುವಕರ ಗುಂಪೇ ಅಲ್ಲಿರುತ್ತೆ. ಪೊಲೀಸರು ಇದನ್ನು ನಿಯಂತ್ರಿಸಬೇಕು ಎಂದು ಹಣಕೋಡು ಗ್ರಾಮದ ಮಹೇಶ್ ತಿಳಿಸಿದರು.ಬಾಣಾವಾರ ಗ್ರಾಮ, ಎರಪಾರೆ ಗ್ರಾಮ ಸೇರಿದಂತೆ ಹಲವೆಡೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಮೊದಲು ಇಲ್ಲಿ ನಿಯಂತ್ರಿಸಬೇಕಿದೆ ಎಂದು ಬೋವಿ ಸಮಾಜದ ಜಿಲ್ಲಾಧ್ಯಕ್ಷ ಸುಜಿತ್ ತಿಳಿಸಿದರು.ಈಗಾಗಲೇ ಹಲವೆಡೆಗಳಲ್ಲಿ ದಾಳಿ ನಡೆಸಿ 25 ದೂರುಗಳನ್ನು ದಾಖಲಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡಿದ 75 ಜನರ ಮೇಲೆ ದೂರು ದಾಖಲಿಸಲಾಗಿದೆ. ಮದ್ಯ ಮಾರಾಟ ಮತ್ತು ಮಾರಲು ಸರಬರಾಜು ಮಾಡಿದ ಇಬ್ಬರ ಮೇಲೂ ದೂರುಗಳನ್ನು ದಾಖಲಿಸಲಾಗುತ್ತಿದೆ. ಈಗಾಗಲೇ ಮದ್ಯ ಸರಬರಾಜು ಮಾಡಿದ ಅಂಗಡಿ ಮಾಲೀಕ, ಮಾರಾಟ ಮಾಡಿದವರ ಮೇಲೂ ದೂರು ದಾಖಲಾಗಿದೆ. ಆದುದ್ದರಿಂದ ಮದ್ಯವನ್ನು ಅನಧಿಕೃತ ಅಂಗಡಿ ಮುಂಗಟ್ಟುಗಳಲ್ಲಿ ಇಟ್ಟು ಮಾಡುವುದು ಕಾನೂನು ಬಾಹಿರವಾಗಿದೆ. ಎಲ್ಲೆಡೆ ಸಾರ್ವಜನಿಕರು ಕೈ ಜೋಡಿಸದ ಹೊರತು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು. ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಾಗುತ್ತಿದೆ. ಗೂಡ್ಸ್ ವಾಹನಗಳು ಮತ್ತು ಆಟೋಗಳನ್ನು ತಾಲೂಕು ಕಚೇರಿ ಬಳಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದಾರೆ. ಇದನ್ನು ವ್ಯವಸ್ಥಿತವಾಗಿ ವಾಹನಗಳನ್ನು ನಿಲ್ಲಿಸಲು ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಕೀಲರಾದ ಬಿ.ಈ. ಜಯೇಂದ್ರ ತಿಳಿಸಿದರು.ಕರ್ಕಳ್ಳಿ ಗ್ರಾಮದಲ್ಲಿ ರಾತ್ರಿ 10ರ ನಂತರ ಕುಡಿದು ಗಲಾಟೆಗಳು ಹೆಚ್ಚಾಗುತ್ತಿವೆ. ಎಲ್ಲೆಡೆ ಇಲಾಖೆಯ 112 ವಾಹನವನ್ನು ರೌಂಡ್ ಹೊಡೆಯಲು ವ್ಯವಸ್ಥೆ ಮಾಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ಗಲಾಟೆಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋಹಿನಿ ತಿಳಿಸಿದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಎಚ್.ಎ. ನಾಗರಾಜು, ಚೌಡ್ಲು ಗ್ರಾಮದ ಚಿಂತು, ಮಂಜುನಾಥ್, ಶಾಂತಳ್ಳಿ ಪ್ರತಾಪ್ ಮತ್ತಿತರರು ಇದ್ದರು.