ಕುಡಿದ ನಶೆಯಲ್ಲಿ ಯುವಕನೊಬ್ಬ ತನ್ನ ಹೆತ್ತ ತಾಯಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿದ್ದಲ್ಲದೇ, ತಾಯಿ ಕೊಂದಿದ್ದು ತಾನೇ ಎಂಬುದಾಗಿ ಸಹೋದರಿಯ ಬಳಿ ಹೇಳಿಕೊಂಡು ವಿಕೃತಿ ಮೆರೆದ ಘಟನೆ ತಾಲೂಕಿನ ಆರನೇ ಮೈಲಿಕಲ್ಲು ಗ್ರಾಮದಲ್ಲಿ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕುಡಿದ ನಶೆಯಲ್ಲಿ ಯುವಕನೊಬ್ಬ ತನ್ನ ಹೆತ್ತ ತಾಯಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿದ್ದಲ್ಲದೇ, ತಾಯಿ ಕೊಂದಿದ್ದು ತಾನೇ ಎಂಬುದಾಗಿ ಸಹೋದರಿಯ ಬಳಿ ಹೇಳಿಕೊಂಡು ವಿಕೃತಿ ಮೆರೆದ ಘಟನೆ ತಾಲೂಕಿನ ಆರನೇ ಮೈಲಿಕಲ್ಲು ಗ್ರಾಮದಲ್ಲಿ ವರದಿಯಾಗಿದೆ.

ತಾಲೂಕಿನ ಆರನೇ ಮೈಲಿಕಲ್ಲು ಗ್ರಾಮದ ಪ್ರೇಮಾ(60 ವರ್ಷ) ತನ್ನ ಮಗ ಆನಂದ ಎಂಬಾತನಿಂದಲೇ ಹತ್ಯೆಯಾದ ದುರ್ದೈವಿ ತಾಯಿ. 15 ವರ್ಷದ ಹಿಂದೆ ಪ್ರೇಮಾ ಪತಿ ಮೃತಪಟ್ಟಿದ್ದು, ಆಗಿಂದಲೂ ತನ್ನ ಎರಡು ಹೆಣ್ಣು ಮಕ್ಕಳು, ಓರ್ವ ಮಗನನ್ನು ಕಂಡವರ ಹೊಲದಲ್ಲಿ ಕೂಲಿ ಕೆಲಸ, ಪಾತ್ರೆ ತೊಳೆಯುವುದೂ ಸೇರಿದಂತೆ ಮನೆಗೆಲಸ ಮಾಡಿಕೊಂಡು ಸಾಕಿದ್ದ ಪ್ರೇಮಾ ತಾನು ಉಪವಾಸವಿದ್ದರೂ ಮಕ್ಕಳಿಗೆ ಒಂದಿಷ್ಟೂ ಕೊರತೆಯಾಗದಂತೆ ಸಾಕಿದ್ದರು.

3 ವರ್ಷದ ಹಿಂದೆ ಓರ್ವ ಹೆಣ್ಣು ಮಗಳು ಸಾವನ್ನಪ್ಪಿದ್ದು, ಮತ್ತೊಬ್ಬ ಮಗಳನ್ನು ಆರನೇ ಮೈಲಿಕಲ್ಲು ಗ್ರಾಮದಲ್ಲೇ ಮದುವೆ ಮಾಡಿಕೊಟ್ಟಿದ್ದರು. ಇನ್ನು ಮಗ ಆನಂದ ದುಡಿಮೆಯನ್ನೂ ಮಾಡದೇ, ಮನೆಗೆ ಮಗನೂ ಅನಿಸಿಕೊಳ್ಳದೇ, ಕುಡಿತದ ಚಟಕ್ಕೆ ದಾಸನಾಗಿದ್ದನು. ಕೆಲಸಕ್ಕೆಂದು ಊರೂರು ಸುತ್ತುತ್ತಿದ್ದ ಆನಂದ ಮುಪ್ಪಿನ ಕಾಲದಲ್ಲಿ ತನ್ನನ್ನು ಸಾಕುತ್ತಾನೆಂಬ ನಿರೀಕ್ಷೆ ತಾಯಿ ಪ್ರೇಮಾಗೆ ಇತ್ತು. ಆದರೆ, ಊರೂರು ಅಲೆಯುತ್ತಿದ್ದ ಆನಂದ ತಿಂಗಳಿಗೊಮ್ಮೆ ಸ್ವಗ್ರಾಮಕ್ಕೆ ಬಂದು ಹೋಗುತ್ತಿದ್ದ. ಬಂದವನು ತಾಯಿ ಜೊತೆಗೆ ಚನ್ನಾಗಿರದೇ, ಕುಡಿದ ನಶೆಯಲ್ಲಿ ಜಗಳ ಮಾಡುತ್ತಾ, ಆಕೆ ದುಡಿದು ತಂದ ಹಣ ಕಿತ್ತುಕೊಂಡು ಹಲ್ಲೆ ಮಾಡುತ್ತಿದ್ದ ಎಂದು ದೂರಲಾಗಿದೆ.

ಗಣೇಶನ ಹಬ್ಬಕ್ಕೆಂದು ಊರಿಗೆ ಬಂದಿದ್ದ ಆನಂದ ಗುುರವಾರ ರಾತ್ರಿಯೂ ಕುಡಿದ ಮತ್ತಿನಲ್ಲಿ ತಾಯಿ ಜೊತೆಗೆ ಜಗಳ ಮಾಡಿ, ಹಲ್ಲೆ ಮಾಡಿದ್ದಾನೆ. ಆತನ ಹೊಡೆತಕ್ಕೆ ಬಡಪಾಯಿ ತಾಯಿ ಪ್ರೇಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕಸ್ಮಿಕವಾಗಿ ಪ್ರೇಮಾ ಮಗಳು ರೂಪಾ ಮನೆಗೆ ಬಂದಾಗ ತಾಯಿಯನ್ನು ಕೊಂದಿದ್ದಾಗಿ ಆನಂದ ದರ್ಪದಿಂದ ಹೇಳುತ್ತಿದ್ದಂತೆ ಆಕೆ ಜೋರಾಗಿ ಕಿರುಚಿದ್ದರಿಂದ ನೆರೆ ಹೊರೆಯವರು, ಬಂಧುಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಪ್ರತಿ ಸಲವೂ ಊರಿಗೆ ಬಂದಾಗ ತನ್ನ ತಾಯಿ ಪ್ರೇಮಾ ಮೇಲೆ ಆರೋಪಿ ಆನಂದ ಕುಡಿದ ನಶೆಯಲ್ಲಿ ಕ್ರೌರ್ಯ ಮೆರೆಯುತ್ತಿದ್ದನಂತೆ. ಈ ಬಗ್ಗೆ ಗ್ರಾಮಸ್ಥರು, ಹಿರಿಯರು ಸಾಕಷ್ಟು ಬುದ್ಧಿ ಹೇಳಿದ್ದಾರೆ. ಆದರೂ ಆತ ತನ್ನ ಹಳೆ ಚಾಳಿ ಮುಂದುವರಿಸಿದ್ದ. ವಾರದ ಹಿಂದಷ್ಟೇ ಪ್ರೇಮಾ ಮೇಲೆ ಹಲ್ಲೆ ಮಾಡಿದ್ದ ಮಗ ಆನಂದ ಈಗ ತನ್ನ ಕುಡಿತಕ್ಕೆ ಹೆತ್ತ ತಾಯಿಯನ್ನೇ ಬಲಿ ಪಡೆದಿದ್ದಾನೆ. ವಾರದ ಹಿಂದೆಯೇ ಆನಂದನ ಮೇಲೆ ಹದಡಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಗ್ರಾಮಸ್ಥರು ಹೇಳಿದರೂ ಹೆತ್ತ ಕರುಳು ಪ್ರೇಮಾ ಒಪ್ಪಿರಲಿಲ್ಲ. ಈಗ ಅದೇ ಹೆತ್ತ ಕರುಳೇ ಇಲ್ಲದಂತೆ ಆನಂದ ಮಾಡಿದ್ದಾನೆಂಬ ಆಕ್ರೋಶ ಜನರಲ್ಲಿ ಮಡುವುಗಟ್ಟಿತ್ತು.

ಎಷ್ಟು ಸಲ ಬುದ್ಧಿ ಹೇಳಿದರೂ ಆನಂದ ತಿದ್ದಿಕೊಳ್ಳಲಿಲ್ಲ. ತಾಯಿ ಪ್ರೇಮಾ ಸಹ ಮಗನ ವಿರುದ್ಧ ದೂರು ನೀಡಲಿಲ್ಲ. ಪೊಲೀಸರಿಗೆ ದೂರು ಯಾಕೆ ಕೊಡಬೇಕು, ಇವತ್ತಲ್ಲ, ನಾಳೆ ತನ್ನ ಮಗ ಸರಿ ಹೋಗುತ್ತಾನೆಂಬ ಆಶಾಭಾವನೆ ತಾಯಿ ಪ್ರೇಮಾ ಅವರಲ್ಲಿ ಬೇರೂರಿತ್ತು. ದೇವರಿಗೆ ಹರಕೆ ಹೊತ್ತು, ಕಷ್ಟಪಟ್ಟು ಸಾಕಿ ಬೆಳೆಸಿದ ಮಗನ ಕ್ರೌರ್ಯಕ್ಕೆ ತಾಯಿ ಬಲಿಯಾಗಿದ್ದು, ಇಂತಹ ಸಾವು, ಇಂತಹ ಮಗ ಯಾರಿಗೂ ಬೇಡ. ಇಂತಹ ರಾಕ್ಷಸಿ ಪ್ರವೃತ್ತಿ ಮೆರೆದ ಆನಂದನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಹದಡಿ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಆರೋಪಿ ಆನಂದನ್ನು ಬಂಧಿಸಿದ್ದಾರೆ. ಬಂಧನದ ವೇಳೆಯೂ ಆರೋಪಿ ಆನಂದ ತಾನೇ ತನ್ನ ತಾಯಿಯನ್ನು ಕೊಂದೆ ಎಂಬುದಾಗಿ ಯಾವುದೇ ಪಶ್ಚಾತ್ತಾಪ ಇಲ್ಲದವನಂತೆ ಮಾತನಾಡುತ್ತಿದ್ದನಂತೆ. ಇಂತಹ ಪಾಪಿ ಮಗ ಯಾರಿಗೂ ಬೇಡ ಎಂದು ಸ್ವತಃ ಸಂಬಂಧಿಗಳು, ಗ್ರಾಮಸ್ಥರು ಆತನಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.