ಸಾರಾಂಶ
ಯಕೃತ್ತಿನ ಕ್ಯಾನ್ಸರ್‌ಗೆ ತುತ್ತಾಗಿ ಇನ್ನೇನು ಸಾವಿನ ಹೊಸ್ತಿಲಲ್ಲಿ ನಿಂತಿದ್ದ ತನ್ನ ತಾಯಿಗೆ ಮಗನೊಬ್ಬ ತನ್ನ ಯಕೃತ್ತಿನ ಒಂದು ಭಾಗವನ್ನು ನೀಡಿ ತಾಯಿಯನ್ನು ಉಳಿಸಿಕೊಂಡಿದ್ದಾನೆ.
ಹಾಸನ : ಹಲವು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲಿ ನಂತರದ ದಿನಗಳಲ್ಲಿ ಯಕೃತ್ತಿನ ಕ್ಯಾನ್ಸರ್‌ಗೆ ತುತ್ತಾಗಿ ಇನ್ನೇನು ಸಾವಿನ ಹೊಸ್ತಿಲಲ್ಲಿ ನಿಂತಿದ್ದ ತನ್ನ ತಾಯಿಗೆ ಮಗನೊಬ್ಬ ತನ್ನ ಯಕೃತ್ತಿನ ಒಂದು ಭಾಗವನ್ನು ನೀಡಿ ತಾಯಿಯನ್ನು ಉಳಿಸಿಕೊಂಡಿದ್ದಾನೆ.
ಹಾಗೆಯೇ ದಾನ ಮಾಡಿದ ಯಕೃತ್ತನ್ನು ಅಷ್ಟೇ ಕಾಳಜಿಯಿಂದ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಕಸಿ ಮಾಡಿ ಮಗನಿಗೆ ತಾಯಿಯನ್ನು ಉಳಿಸಿಕೊಟ್ಟ ಕೀರ್ತಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆ ವೈದ್ಯರಾದ ಡಾ. ಬಿ.ಎಸ್. ರವೀಂದ್ರ ಹಾಗೂ ತಂಡದವರದ್ದು. ಈ ಕುರಿತಂತೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯರಾದ ಡಾ. ಬಿ.ಎಸ್. ರವೀಂದ್ರ, ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕರಾದ ಡಾ.ಕಿಶೋರ್ ಜಿ.ಎಸ್.ಬಿ. ಮತ್ತು ಡಾ ಪಿಯೂಷ್ ಸಿನ್ಹಾ ಅವರನ್ನು ಒಳಗೊಂಡ ಕ್ಲಿನಿಕಲ್ ತಂಡವು ರೋಗಿಯ ಗಂಭೀರ ಸ್ಥಿತಿಯನ್ನು ಪರಿಗಣಿಸಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.
2021 ರಲ್ಲಿ ಹಾಸನ ನಗರದ ಸತ್ಯಮಂಗಲ ನಿವಾಸಿಯಾದ ಲೀಲಾ ಎಂಬುವವರು ಮೊದಲು ಕಾಮಾಲೆಗೆ ತುತ್ತಾದರು. ಹೀಗಾಗಿ ಅವರು ಹಾಸನದ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದರು. ಅಲ್ಟ್ರಾಸೌಂಡ್ ಪರೀಕ್ಷೆಯ ಮೂಲಕ ಅವರಿಗೆ ಲಿವರ್ ಸಿರೋಸಿಸ್ ಇರುವುದು ಬಹಿರಂಗವಾಯಿತು. ದೀರ್ಘಕಾಲದ ಯಕೃತ್ತಿನ ಕಾಯಿಲೆಯ ಅಂತಿಮ ಹಂತ ತಲುಪಿದ್ದರಿಂದ, ಇದು ಯಕೃತ್ತಿನ ಕಾರ್ಯ ಮತ್ತು ರಚನೆಯನ್ನು ದುರ್ಬಲಗೊಳಿಸುತ್ತಿತ್ತು.
ಅಂತಿಮವಾಗಿ ಯಕೃತ್ತಿನ ಕ್ಯಾನ್ಸರ್‌ಗೆ ಏಕಕಾಲದಲ್ಲಿ ಚಿಕಿತ್ಸೆ ನೀಡಲು ಯಕೃತ್ತಿನ ಕಸಿ ಮಾಡಲು ಶಿಫಾರಸು ಮಾಡಿದರು. ಆಕೆಯ ೩೧ ವರ್ಷದ ಮಗ ರಾಕೇಶ್ ನಿಸ್ವಾರ್ಥವಾಗಿ ಮುಂದೆ ಬಂದು ತನ್ನ ತಾಯಿಯ ಜೀವ ಉಳಿಸಲು ತನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದರು. ಸರಿಯಾದ ಸಮಯದಲ್ಲಿ ಯಕೃತ್ತಿನ ಕಸಿ ಮಾಡಿಸಿಕೊಳ್ಳಲು ರೋಗಿಗಳನ್ನು ಒಪ್ಪಿಸುವುದರಿಂದ ಅವರು ಬದುಕುಳಿಯುವ ಅವಕಾಶ ಹೆಚ್ಚಿರುತ್ತದೆ. ಕಸಿ ಮಾಡುವ ಮೊದಲು ರೋಗಿಗಳನ್ನು ಉತ್ತಮಗೊಳಿಸುವಲ್ಲಿ ವೈದ್ಯಕೀಯ ತಂಡವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕೊಲಾಂಜೈಟಿಸ್‌ನೊಂದಿಗೆ ಸಿರೋಟಿಕ್ ರೋಗಿಗೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿಯಾಗಿದೆ, ಜೊತೆಗೆ ಸಾಮಾನ್ಯ ಪಿತ್ತರಸ ನಾಳದಿಂದ ಕಲ್ಲುಗಳನ್ನು ಯಶಸ್ವಿಯಾಗಿ ಹೊರತೆಗೆದು ಸ್ಟೆಂಟ್‌ಗಳನ್ನು ಇರಿಸಲು ನಮಗೆ ಸಾಧ್ಯವಾಯಿತು ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯ ನಂತರ ೧೬ ದಿನಗಳಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಡೀ ವೈದ್ಯರ ತಂಡಕ್ಕೆ ನನ್ನ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಕಾರ್ಯವಿಧಾನವನ್ನು ವಿವರಿಸಿದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ. ಕಿಶೋರ್, ಈ ಪ್ರಕರಣದ ಮೂಲಕ ಜನರು ತಮ್ಮಲ್ಲಿರುವ ಕೆಲವೊಂದು ತಪ್ಪು ಕಲ್ಪನೆಗಳನ್ನು ಬಿಡಬೇಕು. ಹಾಗೆಯೇ ಅಂಗಾಂಗಗಳ ದಾನಕ್ಕೆ ಮುಂದಾಗಬೇಕು. ಲೀಲಾ ಅವರ ಮಗ ರಾಕೇಶ್ ತಮ್ಮ ಯಕೃತ್ತಿನ ಶೇ.60 ಭಾಗವನ್ನು ದಾನ ಮಾಡಿದ್ದಾರೆ. ಆದರೆ, ಅದರಿಂದ ಅವರಿಗೆ ಯಾವುದೇ ತೊಂದರೆಯೂ ಇಲ್ಲ. ಮೂರ್ನಾಲ್ಕು ತಿಂಗಳುಗಳಲ್ಲಿ ಈ ಯಕೃತ್ ತನ್ನ ಸಹಜ ಸ್ಥಿತಿಗೆ ಬೆಳೆಯುತ್ತದೆ. ಭವಿಷ್ಯದಲ್ಲಿ ಕೂಡ ಅವರಿಗೆ ದೈಹಿಕವಾಗಿ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಬಹುತೇಕ ಜನರು ಅಂಗಾಂಗ ದಾನ ಮಾಡುವುದರಿಂದ ತಮ್ಮ ಆರೋಗ್ಯ ಕೆಡುತ್ತದೆ ಎನ್ನುವ ತಪ್ಪು ಕಲ್ಪನೆ ಹೊಂದಿದ್ದಾರೆ. ಆದರೆ, ಇಡೀ ಈ ಪ್ರಕರಣ ಇಂತಹ ತಪ್ಪು ಕಲ್ಪನೆಗಳಿಗೆ ವಿರಾಮ ಹಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮತ್ತು ಡಾ. ಪಿಯೂಷ್ ಸಿನ್ಹಾ, ಯಶಸ್ವಿಯಾಗಿ ಚಿಕಿತ್ಸೆ ಪಡೆದ ಲೀಲಾ, ಪುತ್ರ ರಾಕೇಶ್ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರ ತಂಡದಿಂದ ಲೀಲಾ ಕುಟುಂಬಸ್ಥರಿಗೆ ನೆನಪಿನ ಕಾಣಿಕೆ ನೀಡಲಾಯಿತು.
;Resize=(128,128))
;Resize=(128,128))