ಸಾರಾಂಶ
ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೆತ್ತ ತಂದೆ ಹಾಗೂ ಮಲತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಅಶೋಕ ಕೊಬ್ಬನ್ನವರ (58) ಹಾಗೂ ಶಾರವ್ವ ಕೊಬ್ಬನ್ನವರ (45) ಮಗನಿಂದ ಹತ್ಯೆಯಾದ ತಂದೆ-ತಾಯಿ. ಅಶೋಕ ಅವರ ಮೊದಲನೇ ಪತ್ನಿ ಮಗ ಗಂಗಾಧರ ಕೊಬ್ಬನ್ನವರ ಎಂಬಾತನೇ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಎಎಸ್ಪಿ ನಾರಾಯಾಣ ಭರಮಣಿ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಸಿಪಿಐ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿ ಶೋಧ ಕಾರ್ಯ ಮುಂದುವರಿದಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಮಾತನಾಡಿದ ಎಸ್ಪಿ ಡಾ.ಗೋಪಾಲ ಬ್ಯಾಕೋಡ, ಆಸ್ತಿ ವಿಚಾರವಾಗಿ ತಂದೆ ಹಾಗೂ ಮಗನ ನಡುವೆ ಜಗಳವಿತ್ತು. ಹುಬ್ಬಳ್ಳಿಗೆ ಹೊಂದಿಕೊಂಡಿರುವ ಕುಸುಗಲ್ ಗ್ರಾಮದ ವ್ಯಾಪ್ತಿಯಲ್ಲಿರುವ 2.11 ಎಕರೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 15-20 ದಿನಗಳಿಂದ ನಿರಂತರ ತಂದೆ ಹಾಗೂ ಮಗನ ನಡುವೆ ಜಗಳ ಮುಂದುವರಿದಿತ್ತು. ಗುರುವಾರ ತಡರಾತ್ರಿ ಜಗಳ ವಿಕೋಪಕ್ಕೆ ತಿರುಗಿದಾಗ ಮಗ ಗಂಗಾಧರ ತಂದೆ-ತಾಯಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದರು.
ಕೊಲೆ ಆರೋಪಿಯು ಮೃತ ಅಶೋಕ ಅವರ ಮೊದಲ ಪತ್ನಿ ಶಾಂತವ್ವ ಅವರ ಪುತ್ರನಾಗಿದ್ದಾನೆ. 2010ರಲ್ಲಿ ಮೊದಲನೇ ಪತ್ನಿ ಶಾಂತವ್ವ ಮೃತಪಟ್ಟನಂತರ ಅಶೋಕ ಎರಡನೇ ಮದುವೆಯಾಗಿದ್ದನು. ಇದಾಗ ಕೆಲವು ವರ್ಷಗಳ ನಂತರ ಬಾಗಲಕೋಟೆಯಲ್ಲಿ ಮೊದನೇ ಪತ್ನಿ ಮಗ ಗಂಗಾಧರ ವಾಸವಾಗಿದ್ದನು.
ಆರೋಪಿ ಪತ್ತೆಗಾಗಿ ಸಿಪಿಐ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.