ರಾಜ್ಯದಲ್ಲಿ 14 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಶೀಘ್ರವೇ ರದ್ದು - ಅರ್ಹರಿಗೆ ಕಾರ್ಡ್​ ವಿತರಣೆಗೆ ಯಾವುದೇ ತೊಂದರೆ ಇಲ್ಲ

| Published : Nov 19 2024, 12:49 AM IST / Updated: Nov 19 2024, 07:22 AM IST

ರಾಜ್ಯದಲ್ಲಿ 14 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಶೀಘ್ರವೇ ರದ್ದು - ಅರ್ಹರಿಗೆ ಕಾರ್ಡ್​ ವಿತರಣೆಗೆ ಯಾವುದೇ ತೊಂದರೆ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಹರಿಗೆ ಬಿಪಿಎಲ್​ ಕಾರ್ಡ್​ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಅರ್ಹರಾಗಿದ್ದು, ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ 24 ಗಂಟೆಯೊಳಗೆ ಬಿಪಿಎಲ್‌ ಕಾರ್ಡ್‌ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. 

ಬೆಂಗಳೂರು   : ಅರ್ಹರಿಗೆ ಬಿಪಿಎಲ್​ ಕಾರ್ಡ್​ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಅರ್ಹರಾಗಿದ್ದು, ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ 24 ಗಂಟೆಯೊಳಗೆ ಬಿಪಿಎಲ್‌ ಕಾರ್ಡ್‌ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. 

14 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲು ಉದ್ದೇಶಿಸಲಾಗಿದ್ದು, ಈವರೆಗೆ 3.63 ಲಕ್ಷ ಕಾರ್ಡ್‌ಗಳು ರದ್ದಾಗಿವೆ ಎಂದಿದ್ದಾರೆ.ಸೋಮವಾರ ‘ಕನ್ನಡಪ್ರಭ’ದೊಂದಿಗೆ ಬಿಪಿಎಲ್‌ ಕಾರ್ಡ್‌ ರದ್ದತಿ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರು ಬಿಪಿಎಲ್‌ ಕಾರ್ಡ್‌ನಲ್ಲೇ ಮುಂದುವರೆಯಲಿದ್ದಾರೆ. 

ಆದರೆ, ಅನರ್ಹರು ಪಡೆದಿರುವ ಬಿಪಿಎಲ್‌ ಕಾರ್ಡ್‌ ರದ್ದಾಗಲಿದ್ದು, ಅದು ಎಪಿಎಲ್‌ ಕಾರ್ಡ್‌ ಆಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದರು.ಕೇಂದ್ರದ ನಿಯಮಗಳನ್ನು ಉಲ್ಲಂಘಿಸಿ ಪಡೆದಿದ್ದರೆ ಅಂತಹ ಪಡಿತರ ಚೀಟಿಗಳನ್ನು ರದ್ದು ಮಾಡುವುದನ್ನು ಮುಂದುವರೆಸಲಾಗುವುದು. ಬಡತನ ರೇಖೆಗಿಂತ ಕೆಳಗಿನವರ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ, ಅಂತಹವರಿಗೆ ಕೂಡಲೇ ವಾಪಸ್‌ ಬಿಪಿಎಲ್‌ ಕಾರ್ಡ್‌ ಕೊಡಲಾಗುವುದು. ಅದಕ್ಕೆ ತಕ್ಕಂತೆ ಅವರು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

ಆರು ತಿಂಗಳಿನಿಂದ ಪಡಿತರ ಪಡೆಯದ 2.75 ಲಕ್ಷಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ 98,458 ಕುಟುಂಬಗಳು, 4036 ಸರ್ಕಾರಿ ನೌಕರರು, ಆದಾಯ ಮಿತಿ ಜಾಸ್ತಿ ಇರುವ 10,09,479 ಕುಟುಂಬಗಳು ಸೇರಿ ಒಟ್ಟು 13,87,639 ಕಾರ್ಡ್‌ಗಳನ್ನು ಅನರ್ಹವೆಂದು ಗುರುತಿಸಲಾಗಿದೆ. ಈ ಪೈಕಿ 3.63 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ರದ್ದು ಮಾಡಲಾಗಿದ್ದು, 10.38 ಲಕ್ಷಕ್ಕೂ ಅಧಿಕ ಕಾರ್ಡ್‌ಗಳು ರದ್ದುಪಡಿಸಲು ಬಾಕಿ ಉಳಿದಿವೆ ಎಂದು ತಿಳಿಸಿದರು.

ತೆರಿಗೆ ಪಾವತಿ ಮಾಡುತ್ತಿರುವ ಸದಸ್ಯರ ಕುಟುಂಬ, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿರುವ ಕುಟುಂಬ, ವಿವಿಧ ಮಂಡಳಿ, ನಿಗಮಗಳ ಕಾಯಂ ನೌಕರರ ಕುಟುಂಬ, ಮನೆಗಳನ್ನು ಬಾಡಿಗೆಗೆ ಕೊಟ್ಟು ಜೀವಿಸುವವರು, 7.5 ಎಕರೆಗಿಂತ ಹೆಚ್ಚು ಒಣ ಮತ್ತು ನೀರಾವರಿ ಜಮೀನು ಹೊಂದಿರುವವರು, ಸ್ವಂತಕ್ಕೆಂದು ನಾಲ್ಕು ಚಕ್ರದ ವಾಹನ ಇಟ್ಟುಕೊಂಡಿರುವವರು, ಸರ್ಕಾರ ನಿಗದಿಪಡಿಸಿರುವ ವಾರ್ಷಿಕ ವರಮಾನಕ್ಕಿಂತ ಅಧಿಕ ಸಂಪಾದನೆ ಇರುವವರು, ಬಿಪಿಎಲ್‌ ನಿಯಮಕ್ಕಿಂತ ಹೆಚ್ಚಾಗಿ ವಾರ್ಷಿಕ ವಹಿವಾಟು ನಡೆಸಿರುವವರು ಸೇರಿದಂತೆ ಇತರರ ಬಿಪಿಎಲ್‌ ರದ್ದು ಮಾಡಲಾಗುತ್ತಿದೆ. ಹಂತ ಹಂತವಾಗಿ ಬಿಪಿಎಲ್‌ ಪಡೆದ ಅನರ್ಹರನ್ನು ಪತ್ತೆ ಮಾಡಿ ಎಪಿಎಲ್‌ ಕಾರ್ಡ್‌ ನೀಡಲಾಗುವುದು. ಒಟ್ಟು 14 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಬಿಪಿಎಲ್‌ನಿಂದ ಹೊರಗೆ ಹೋಗುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ಮಾಹಿತಿ ನೀಡದೆ ಕಾರ್ಡ್‌ ರದ್ದು: ಆಕ್ರೋಶ

- ಬಡವರ ಕಾರ್ಡೂ ಎಪಿಎಲ್‌ ಆಗಿ ಪರಿವರ್ತನೆ । ರಾಜ್ಯದ ಹಲವೆಡೆ ದೂರು

- ಸರ್ವೇ ಪ್ರಕಾರವೇ ರದ್ದು, ಇನ್ನಷ್ಟು ಕಾರ್ಡ್‌ ರದ್ದಾಗುತ್ತವೆ: ಅಧಿಕಾರಿಗಳು

- ಶೆಡ್‌ನಲ್ಲಿ ವಾಸಿಸುವವರು, ಬಡ ಕೃಷಿಕರ ಬಿಪಿಎಲ್‌ ಕಾರ್ಡ್‌ಗಳೂ ರದ್ದು

- ಬಿಪಿಎಲ್‌ ಕಾರ್ಡ್‌ ಹೊಂದಿರುವ ಸರ್ಕಾರಿ ನೌಕರರಿಗೆ ದಂಡ ಹೇರಿಕೆ

- ಈ ಕಾರ್ಡ್‌ ರದ್ದಾದರೆ ಚಿಕಿತ್ಸೆ ಪಡೆಯುವ ಅವಕಾಶ ಸಿಗಲ್ಲ: ರೈತರು

ಬೆಂಗಳೂರು : ರಾಜ್ಯಾದ್ಯಂತ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಸದ್ದಿಲ್ಲದೆ ಬದಲಾವಣೆ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ಇದೀಗ ಕೆಲವೆಡೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೂರು ತಿಂಗಳಿಂದ ಕಾರ್ಡ್‌ಗಳ ಪರಿವರ್ತನೆ ಕಾರ್ಯ ನಡೆಯುತ್ತಿದ್ದು, ಕೆಲವೆಡೆ ಈ ಕುರಿತು ಕಾರ್ಡ್‌ದಾರರಿಗೆ ಯಾವುದೇ ಮಾಹಿತಿ ನೀಡದೆ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. 

ಶೆಡ್‌ನಲ್ಲಿ ವಾಸವಾಗಿರುವವರು, ಬಡ ಕೃಷಿಕರು ಹೀಗೆ ಹಲವು ಅರ್ಹರ ಪಡಿತರ ಚೀಟಿಗಳೂ ಎಪಿಎಲ್‌ ಕಾರ್ಡ್‌ಗಳಾಗಿ ಬದಲಾವಣೆ ಆಗಿವೆ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರದ ವಿರುದ್ಧ ಸಾರ್ವಜನಿಕರು ಇದೀಗ ಕಿಡಿಕಾರುತ್ತಿದ್ದಾರೆ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾತ್ರ ಈಗಾಗಲೇ ನಾವು ಮಾಡಿದ ಸರ್ವೆಯಂತೆ ಈ ಬದಲಾವಣೆ ಕಾರ್ಯ ಮಾಡುತ್ತಿದ್ದೇವೆ. ಸರ್ಕಾರಿ ನೌಕರರು, ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಉಳ್ಳವರು ಮತ್ತು ಆದಾಯ ತೆರಿಗೆ ಪಾವತಿಸುತ್ತಿರುವರು ಹೊಂದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಮಾತ್ರ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಸರ್ಕಾರಿ ಉದ್ಯೋಗವಿದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿರುವವರನ್ನು ಪತ್ತೆ ಹಚ್ಚಿ ಅವರಿಗೆ ದಂಡವನ್ನೂ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಕಾರ್ಡುಗಳು ಎಪಿಎಲ್‌ ಆಗಿ ಬದಲಾವಣೆಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 1772, ಚಿತ್ರದುರ್ಗದಲ್ಲಿ 1670, ವಿಜಯಪುರ ಜಿಲ್ಲೆಯಲ್ಲಿ 4856 ಬಿಪಿಎಲ್‌ ಕಾರ್ಡ್‌ಗಳನ್ನು ಈವರೆಗೆ ಎಪಿಎಲ್‌ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಈ 4856 ಕಾರ್ಡ್‌ದಾರರಲ್ಲಿ 1932 ಮಂದಿಯನ್ನು ಆದಾಯ ತೆರಿಗೆ ಪಾವತಿದಾರರು ಎಂದು ಪತ್ತೆ ಹಚ್ಚಲಾಗಿದೆ. ಅಲ್ಲದೆ 368 ಸರ್ಕಾರಿ ನೌಕರರೂ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದು, ಅವರಿಗೆ ಸುಮಾರು ₹ 20 ಲಕ್ಷದಷ್ಟು ದಂಡವನ್ನೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು ವಿಜಯನಗರ ಜಿಲ್ಲೆಯಲ್ಲಿ 1132 ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ ಕಾರ್ಡ್‌ ಆಗಿ ಬದಲಾವಣೆ ಆಗಿವೆ. ಇದರಲ್ಲಿ ತೆರಿಗೆ ಪಾವತಿದಾರರ 1031 ಹಾಗೂ ಸರ್ಕಾರಿ ನೌಕರರ 101 ಕಾರ್ಡ್‌ಗಳೂ ಸೇರಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 23,578 ಅನರ್ಹರು ಬಿಪಿಎಲ್ ಕಾರ್ಡ್‌ ಹೊಂದಿರುವುದು ಬೆಳಕಿಗೆ ಬಂದಿದ್ದು, ಇದರಲ್ಲಿ ಈಗಾಗಲೇ 315 ಜನರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.

ಆರೋಗ್ಯ ಸೌಲಭ್ಯ ಸಿಗಲ್ಲ: ಚಿತ್ರದುರ್ಗ ಜಿಲ್ಲೆಯಲ್ಲಿ ಹಲವು ರೈತರಿಂದ ಈ ಬದಲಾವಣೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾವು ಬಡವರು, ಆರೋಗ್ಯ ಸಮಸ್ಯೆ ಕಂಡುಬಂದಾಗ ದುಬಾರಿ ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಾಮರ್ಥ್ಯ ಹೊಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದರೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ.

ನಾವು ಬಡರೈತರು. ನಮ್ಮ ಬಳಿ ಇದ್ದ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಬದಲಾವಣೆ ಮಾಡಿದ್ದಾರೆ. ಇದರಿಂದ ಜೀವನ ಕಷ್ಟವಾಗುತ್ತಿದೆ. ಆಸ್ಪತ್ರೆಗಳಿಗೆ ಹೋದರೆ ಲಕ್ಷಾಂತರ ರುಪಾಯಿ ಕೇಳ್ತಿದ್ದಾರೆ. ಜಮೀನಿದೆ ಎಂದು ಕಾರ್ಡ್ ತೆಗೆದಿದ್ದು, ಅತ್ತ ಜಮೀನಲ್ಲಿ ಬೆಳೆಯೂ ಸಿಗ್ತಿಲ್ಲ, ಇತ್ತ ಕಾರ್ಡ್‌ ಇಲ್ಲ ಎಂಬಂತಾಗಿದೆ. ಜಮೀನು ಆಧಾರದ ಮೇಲೆ‌ ಬಿಪಿಎಲ್ ಕಾರ್ಡ್ ತೆಗೆದರೆ ರೈತರು ವಿಷ ಕುಡಿಯಬೇಕಾಗುತ್ತದೆ.- 

ಪಾಲಯ್ಯ, ಬೋರಯ್ಯ, ಚಿತ್ರದುರ್ಗದ ರೈತರು

- ಈಗಾಗಲೇ 3.6 ಲಕ್ಷ ಕಾರ್ಡ್‌ ಎಪಿಎಲ್‌ಗೆ । 10 ಲಕ್ಷಕ್ಕೂ ಹೆಚ್ಚು ಕಾರ್ಡ್‌ ಬಾಕಿ- ಅರ್ಹರ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ 24 ಗಂಟೆಯಲ್ಲಿ ವಾಪಸ್‌: ಮುನಿಯಪ್ಪ

ಯಾರ್‍ಯಾರಿಗೆ ಬಿಸಿ?- ಆದಾಯ ತೆರಿಗೆ ಪಾವತಿಸುತ್ತಿರುವ ಸದಸ್ಯರ ಕುಟುಂಬ- ಸರ್ಕಾರಿ, ಅರೆ ಸರ್ಕಾರಿ ನೌಕರರು ಇರುವ ಕುಟುಂಬ- ನಿಗಮ-ಮಂಡಳಿಗಳಲ್ಲಿ ಕಾಯಂ ನೌಕರರಿರುವ ಕುಟುಂಬ- ಮನೆಗಳನ್ನು ಬಾಡಿಗೆ ಕೊಟ್ಟು ಜೀವನ ನಡೆಸುತ್ತಿರುವವರು- 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು- ಸ್ವಂತಕ್ಕೆಂದು 4 ಚಕ್ರಗಳ ವಾಹನವನ್ನು ಹೊಂದಿರುವವರು- ನಿಗದಿತ ವಾರ್ಷಿಕ ವರಮಾನಕ್ಕಿಂತ ಹೆಚ್ಚು ಗಳಿಸುತ್ತಿರುವವರು- ನಿಯಮಕ್ಕಿಂತ ವಾರ್ಷಿಕವಾಗಿ ಹೆಚ್ಚು ವಹಿವಾಟು ಮಾಡುವವರು

ಅರ್ಹ ಬಡವರಿಗೆ ಕಾರ್ಡ್‌ ಕೈತಪ್ಪಲ್ಲ

ಬಿಪಿಎಲ್‌ ಕಾರ್ಡು ಪಡೆಯಲು ಯಾರು ಅರ್ಹರು, ಯಾರು ಅನರ್ಹರು ಎಂಬ ಮಾನದಂಡಗಳಿವೆ. ಅವುಗಳನ್ನು ಆಧರಿಸಿ ಯಾರಾದರೂ ಅರ್ಹತೆ ಇಲ್ಲದಿದ್ದರೂ ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದರೆ ಅಂತಹವರ ಕಾರ್ಡುಗಳನ್ನು ರದ್ದುಪಡಿಸಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಅರ್ಹ ಕುಟುಂಬಗಳಿಗೂ ಬಿಪಿಎಲ್‌ ಕಾರ್ಡು ಕೈತಪ್ಪುವುದಿಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

 ರಾಜ್ಯದ ಪಡಿತರ ಚೀಟಿಪೈಕಿ 80% ಬಿಪಿಎಲ್‌

ರಾಜ್ಯದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ ಶೇ.50ರಷ್ಟೂ ಇಲ್ಲ. ಆದರೆ ನಮ್ಮ ರಾಜ್ಯದಲ್ಲಿ ಕೆಲವರು ಅರ್ಹರಲ್ಲದವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಂತಹವರ ಬಿಪಿಎಲ್ ಕಾರ್ಡ್ ತೆಗೆದುಹಾಕ್ತೇವೆ. ಅರ್ಹರಲ್ಲದವರನ್ನು ಎಪಿಎಲ್ ಕಾರ್ಡ್‌ಗೆ ವರ್ಗಾವಣೆ ಮಾಡುತ್ತೇವೆ. ಎಪಿಎಲ್ ಕಾರ್ಡುದಾರರಿಗೂ ಬೇರೆ ಬೇರೆ ಸೌಲಭ್ಯಗಳಿವೆ.

- ಕೆ.ಎಚ್‌.ಮುನಿಯಪ್ಪ, ಆಹಾರ ಸಚಿವ