ಸರ್ಕಾರದ ವಿರುದ್ಧ ಶೀಘ್ರ ರಾಜ್ಯ ವ್ಯಾಪಿ ಹೋರಾಟ

| Published : Jul 02 2025, 12:20 AM IST

ಸಾರಾಂಶ

ರಾಜ್ಯ ಸರ್ಕಾರದ ಅನೇಕ ಭ್ರಷ್ಟಾಚಾರ ಪ್ರಕರಣದ ವಿರುದ್ಧ ಶೀಘ್ರದಲ್ಲೇ ರಾಜ್ಯ ವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ಆನಂದಪುರ: ರಾಜ್ಯ ಸರ್ಕಾರದ ಅನೇಕ ಭ್ರಷ್ಟಾಚಾರ ಪ್ರಕರಣದ ವಿರುದ್ಧ ಶೀಘ್ರದಲ್ಲೇ ರಾಜ್ಯ ವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು. ಮಂಗಳವಾರ ಆನಂದಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದ ವಿರುದ್ಧ ಹೋರಾಟ ನಡೆಸಿದ ಫಲವಾಗಿ ಸಚಿವರು ರಾಜಿನಾಮೆ ನೀಡುವಂತಾಯ್ತು. ಭ್ರಷ್ಟಾಚಾರ ಮುಕ್ತ ಸರ್ಕಾರದ ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ, ಮುಡಾ ಹಗರಣದ ವಿರುದ್ಧ ಬೆಂಗಳೂರನಿಂದ ಮೈಸೂರುಗೆ ನಡೆಸಿದ ಐತಿಹಾಸಿಕ ಪಾದಯಾತ್ರೆಯ ಹೋರಾಟದ ಪರಿಣಾಮ ಕೋಟಿ ಕೋಟಿ ಬೆಲೆ ಬಾಳುವಂತಹ 14 ನಿವೇಶನಗಳನ್ನು ಯಾವುದೇ ಪರಿಹಾರವಿಲ್ಲದೆ ಹಿಂತಿರುಗಿಸುವಂಥಾಯ್ತು. ಹೀಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಸತಿ ಹಗರಣ ಸೇರಿದಂತೆ ಅನೇಕ ಹಗರಣಗಳ ವಿರುದ್ಧ ರಾಜ್ಯ ವ್ಯಾಪಿ ಹೋರಾಟ ನಡೆಸುತ್ತೇವೆ ಎಂದರು. ಕಳೆದ ಒಂದುವರೆ ವರ್ಷದಿಂದ ರಾಜ್ಯದಲ್ಲಿ ನಿರಂತರವಾಗಿ ಪಕ್ಷದ ಸಂಘಟನೆ ಮೂಲಕ ಪಕ್ಷವನ್ನು ಬಲಪಡಿಸಿವ ಕೆಲಸ ಮಾಡಿದ್ದೇನೆ. ಇದು ರಾಜ್ಯದ ಕಾರ್ಯಕರ್ತರಿಗೂ ತೃಪ್ತಿ ತಂದಿದೆ. ಅಲ್ಲದೆ ರಾಷ್ಟ್ರೀಯ ನಾಯಕರಲ್ಲೂ ರಾಜ್ಯಾಧ್ಯಕ್ಷರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ರಾಜ್ಯಾಧ್ಯಕ್ಷರನ್ನು ಸೂಕ್ತ ಸಮಯದಲ್ಲಿ ರಾಷ್ಟ್ರೀಯ ನಾಯಕರೆ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಐತಿಹಾಸಿಕ ಸಿಗಂದೂರು ಸೇತುವೆ ಉದ್ಘಾಟನೆಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸಿಗಂದೂರು ಸೇತುವೆಯ ಉದ್ಘಾಟನೆಯ ದಿನಾಂಕವನ್ನು ಅಧಿಕೃತವಾಗಿ ನಿಗದಿ ಮಾಡಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳವನ್ನು ವೀಕ್ಷಿಸಿ ಮಳೆ ಇಳಿಮುಖವಾದ ನಂತರ ಪೂರ್ವಭಾವಿ ಸಭೆ ನಡೆಸಿ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಗುರುಮೂರ್ತಿ, ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡ್, ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ್, ಮಾಮ್ಕೋಸ್‌ ನಿರ್ದೇಶಕ ಭರ್ಮಪ್ಪ, ಗ್ರಾಪಂ ಅಧ್ಯಕ್ಷ ಕೆ. ಗುರುರಾಜ್, ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಸದಸ್ಯ ಮೋಹನ್ ಕಾಲೋನಿ, ಶಂಕರ್, ಬಿಜೆಪಿ ಮುಖಂಡರಾದ ರೇವಪ್ಪ, ವೀರೇಶ್ ಆಲವಳ್ಳಿ, ದೇವರಾಜ್, ಸದಾಶಿವ, ಹೊಳೆಯಪ್ಪ, ಮುರಳಿ, ನಾರಾಯಣ್, ವೆಂಕಟೇಶ್, ಪ್ರಮೋದ್, ರವೀಂದ್ರ, ಮಂಜುನಾಥ್ ಅನೇಕರು ಉಪಸ್ಥಿತರಿದ್ದರು.