ಸಾರಾಂಶ
ಬ್ಯಾಡಗಿ: ದಾಸಶ್ರೇಷ್ಠ ಕನಕದಾಸರು ದೇಶದ ಅಸ್ಮಿತೆ. ಅವರ ಬದುಕು ಅನುಕರಣೀಯ. ಅಂತಹ ಮಹಾನ್ ದಾರ್ಶನಿಕರ ಹೆಸರಿನಲ್ಲಿ ರಚನೆಗೊಂಡ ಪ್ರಾಧಿಕಾರ ಅವರ ಸಂದೇಶಗಳನ್ನು ಸಾರುವ ಕೆಲಸದಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಕಾಗಿನೆಲೆ ಗ್ರಾಮ ರಾಜ್ಯದಲ್ಲಿಯೇ ಬಹುದೊಡ್ಡ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಕಾಗಿನೆಲೆ ಗ್ರಾಮದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಕಾಗಿನೆಲೆ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈಗಾಗಲೇ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕನಕ ಉದ್ಯಾನವನದಲ್ಲಿ ಇನ್ನೊಂದಿಷ್ಟು ಕಾಮಗಾರಿಗಳು ಬಾಕಿಯಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.
ಬೋಟಿಂಗ್ ವ್ಯವಸ್ಥೆಕಾಗಿನೆಲೆ ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಈಗಿರುವ ಕೆರೆಗೆ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಇದರಿಂದ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಾಗಿನೆಲೆಗೆ ಆಗಮಿಸಲಿದ್ದು, ದಿನವಿಡೀ ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶ ಸಿಗಲಿದೆ. ಅದರ ಜೊತೆಗೆ ಕನಕದಾಸರ ಬೃಹತ್ ಗ್ಯಾಲರಿ (ವಸ್ತು ಸಂಗ್ರಹಾಲಯ) ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಅದನ್ನೂ ಅಳವಡಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರೇಮಿಗಳ ತಾಣವಾಗುತ್ತಿದೆಕನಕದಾಸರ ಕರ್ಮಭೂಮಿ ಕಾಗಿನೆಲೆ ಇದೊಂದು ಶಕ್ತಿಸ್ಥಳವಾಗಿದ್ದು, ಧಾರ್ಮಿಕ ಕೇಂದ್ರವಾಗಿದೆ. ಪ್ರವಾಸಿಗರ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದೆ. ಇವುಗಳ ಮಧ್ಯೆ ಪ್ರೇಮಿಸಿಗಳ ತಾಣವಾಗಿಯೂ ಹೊರಹೊಮ್ಮುವ ಆತಂಕವಿದೆ. ಇದರಿಂದ ದಾರ್ಶನಿಕರೊಬ್ಬರಿಗೆ ಅವಮಾನವೆಸಗಿದಂತೆ. ಯುವಕ-ಯುವತಿಯರಿಂದ ಅಚಾತುರ್ಯಗಳು ನಡೆಯದಂತೆ ಕೂಡಲೇ ಕಡಿವಾಣ ಹಾಕಬೇಕು. ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಅನ್ಯ ಉದ್ದೇಶಗಳನ್ನಿಟ್ಟುಕೊಂಡು ಬರುವವರಿಗೆ ಕಡಿವಾಣ ಹಾಕುವಂತೆ ಸೂಚಿಸಿದರು.
ದೇವಸ್ಥಾನಗಳ ಉದ್ಘಾಟನೆಪ್ರಾಧಿಕಾರದಿಂದ ನಿರ್ಮಿಸಿದ ಕೆಲ ದೇವಾಲಯಗಳಲ್ಲಿ ಅಲ್ಪಸ್ವಲ್ಪ ಕಾಮಗಾರಿಗಳು ಉಳಿದುಕೊಂಡಿವೆ. ಅದಾಗ್ಯೂ ಉದ್ಘಾಟನೆಯ ಹಂತಕ್ಕೆ ಬಂದು ತಲುಪಿರುವವುಗಳಲ್ಲಿ ಉಳಿದಂತಹ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಕಾಗಿನೆಲೆ ಪ್ರಾಧಿಕಾರದ ನಿರ್ದೇಶಕ ಬೀರಪ್ಪ ಬಣಕಾರ, ಬ್ಯಾಡಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಹಾವೇರಿ ಉಪವಿಭಾಗಾಧಿಕಾರಿ ಚನ್ನಪ್ಪ, ಪಿಡಬ್ಲೂಡಿ ಎಇಇ ಉಮೇಶ್ ನಾಯಕ್, ಜಿಪಂ ಮಾಜಿ ಸದಸ್ಯ ಅಬ್ದುಲ್ ಮುನಾಫ್ ಯಲಿಗಾರ, ರುದ್ರಣ್ಣ ಹೊಂಕಣ, ಅರವಿಂದಪ್ಪ ಕುಲಕರ್ಣಿ ಮತ್ತು ಪ್ರಾಧಿಕಾರ ಸಿಬ್ಬಂದಿ ಉಪಸ್ಥಿತರಿದ್ದರು.