ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಂಗಳೂರು ಮಾದರಿ ರಾಜ್ಯ ವ್ಯಾಪ್ತಿ ಎ ಖಾತಾ, ಬಿ ಖಾತಾ ಆರಂಭಿಸಲಾಗುವುದು. ಇದರಿಂದ ಅನಧಿಕೃತ ನಿವೇಶನಗಳಿಗೆ ಶಾಶ್ವತ ಕಡಿವಾಣ ಬೀಳಲಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ, ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂ ಪರಿವರ್ತನೆಯಾಗಿ ಮನೆ, ನಿವೇಶನ ಸೇರಿದಂತೆ ಬಡಾವಣೆ ನಿರ್ಮಿಸಿದ್ದರೂ ಸುಪ್ರೀಂ ಕೋರ್ಟ್ ಆದೇಶದ ಪರಿಣಾಮ ಕೆಲವು ಕಾರಣಗಳಿಂದ ಅವುಗಳಿಗೆ ಅಧಿಕೃತ ಉತಾರೆ ದೊರೆಯುತ್ತಿರಲಿಲ್ಲ. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಮಂಡಿಸಲಾಗಿದ್ದು, ಅಲ್ಲಿಯೂ ಅಕ್ರಮ-ಸಕ್ರಮ ಕಾಯ್ದೆ ಪಾಸ್ ಆಗಿದೆ. ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು. ಕೋರ್ಟ್ ಆದೇಶದ ಪರಿಣಾಮ 2017ರಿಂದ ರಾಜ್ಯದಲ್ಲಿ ಈ ಸಮಸ್ಯೆ ಕಾಡಿತ್ತು. ನಗರ, ಸ್ಥಳೀಯ ಸಂಸ್ಥೆಗಳ ಆದಾಯವು ಕಡಿಮೆಯಾಗಿತ್ತು. ಇದರಿಂದ ನಿವೇಶನ ಹೊಂದಿರುವ ಸಾರ್ವಜನಿಕರಿಗೂ ತೊಂದರೆಯಾಗಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಸಾಧಕ-ಬಾಧಕ ಪರಿಶೀಲನೆ ಮಾಡಿ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ಸರ್ಕಾರಕ್ಕೆ ₹5 ಸಾವಿರ ಕೋಟಿ ಆದಾಯ:ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಪ್ರತಿವರ್ಷ ₹2 ರಿಂದ 3 ಕೋಟಿ ಆದಾಯ ದ್ವಿಗುಣಗೊಳ್ಳಲಿದೆ. ಸರ್ಕಾರಕ್ಕೆ ₹5 ಸಾವಿರ ಕೋಟಿ ಆದಾಯ ಬರಲಿದೆ. ಬಹು ವರ್ಷಗಳಿಂದ ನಗರ ಪ್ರದೇಶದ ಭಾಗದ ಸಾರ್ವಜನಿಕರ ಬೇಡಿಕೆ, ಸಮಸ್ಯೆಕ್ಕೂ ಸುಗಮ ಮಾರ್ಗ ದೊರೆಯಲಿದೆ ಎಂದು ಅಭಯ ನೀಡಿದರು.
ವಕ್ಫ್ ಕಾಯ್ದೆ ವಿಚಾರದಲ್ಲಿ ಬಿಜೆಪಿ ತಪ್ಪು ಕಲ್ಪನೆ:ವಕ್ಫ್ ಕಾಯ್ದೆ ವಿಚಾರದಲ್ಲಿ ಬಿಜೆಪಿ ತಪ್ಪು ಕಲ್ಪನೆ ಇದೆ. ಅನ್ಯ ಉದ್ದೇಶಕ್ಕೆ ಈ ರೀತಿ ನಡೆಯುತ್ತಿದೆ ಎನ್ನುವುದು ಮೇಲ್ನೂಟಕ್ಕೆ ಕಂಡು ಬರುತ್ತಿದೆ. ಸತ್ಯಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪಕ್ಷ ಬೆಳೆಯಲು, ಅಧಿಕಾರಕ್ಕೆ ಬರಲು ಕಾರ್ಯಕರ್ತ ಶ್ರಮ ಬಹಳಷ್ಟು ಇದೆ. ಅವರ ಸಮಸ್ಯೆ ಆಲಿಸಿ ಪರಿಹರಿಸುವುದು ನಮ್ಮ ಕರ್ತವ್ಯವಾಗಿದೆ. ಶ್ರಮ ವಹಿಸಿದವರಿಗೆ ಅಧಿಕಾರ ದೊರೆಯಬೇಕು ಎನ್ನುವುದು ನಮ್ಮ ಆಶಯ. ಅಂತಹವರನ್ನು ಗುರುತಿಸಿ ಸರ್ಕಾರ ಭಾಗವಾಗಿರುವ ವಿವಿಧ ನಿಗಮ, ಬೋರ್ಡ್‌ಗಳಿಗೆ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಸರ್ಕಾರದಿಂದ ಒಳ್ಳೆಯ ಆಡಳಿತ:ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ನಮ್ಮ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ. ಸಾರ್ವಜನಿಕರ ಸಮಸ್ಯೆ ಇತ್ಯರ್ಥಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಬಾಗಲಕೋಟೆ ನಗರಸಭೆಗೆ ನವನಗರದ ಯೂನಿಟ್-1 ಹಸ್ತಾಂತರ ಮಾಡಲು ಮೂಲ ಸೌಕರ್ಯ ಕಲ್ಪಿಸಲು ₹135 ಕೋಟಿ ನಮ್ಮ ಹಿಂದಿನ ಸರ್ಕಾರ ನೀಡಿತ್ತು. ಆದರೂ ಬಿಟಿಡಿಎ ಅಲ್ಲಿಯೇ ಯೂನಿಟ್-1 ಉಳಿಯಿತು. ಹೀಗೆ ಅನೇಕ ವಿಷಯಗಳ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ಹೇಳಿದರು.
ನಗರಸಭೆ ಸದಸ್ಯ ಹಾಜಿಸಾಬ ದಂಡಿನ ಮಾತನಾಡಿ, ಬಾಗಲಕೋಟೆ ನಗರಸಭೆಯನ್ನು ಈ ಹಿಂದಿನ ಸರ್ಕಾರ ಗ್ರೇಡ್ -1 ನಗರಸಭೆಯಾಗಿ ಮೇಲ್ದರ್ಜೇಗೇರಿಸಿ ಆದೇಶ ಹೊರಡಿಸಿತು. ಆದರೆ, ಅನುದಾನ, ಸಿಬ್ಬಂದಿ ಕೊರತೆ ನೀಗಿಸಲಿಲ್ಲ. ಈ ಬಗ್ಗೆ ತಮ್ಮ ಸರ್ಕಾರ ಗಮನ ಹರಿಸಬೇಕು ಎಂದರು.ಈ ವೇಳೆ ಶಾಸಕ ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಎಸ್ಪಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಮುಖಂಡರಾದ ಎಂ.ಬಿ.ಸೌದಾಗರ, ದ್ಯಾಮಣ್ಣ ಗಾಳಿ, ಪ್ರೇಮಾ ರಾಠೋಡ, ಮಂಜುಳಾ ಭೂಸಾರೆ, ಮಮತಾಜ ಸುತಾರ, ರೇಣುಕಾ ನ್ಯಾಮಗೌಡರ, ಸವಿತಾ ವೈ. ಸೇರಿದಂತೆ ಇತರರು ಇದ್ದರು.