ಯುಪಿಎಸ್ಸಿಯಲ್ಲಿ 101ನೇ ರ‍್ಯಾಂಕ್ ಪಡೆದ ಸೌಭಾಗ್ಯ

| Published : Apr 17 2024, 01:24 AM IST

ಯುಪಿಎಸ್ಸಿಯಲ್ಲಿ 101ನೇ ರ‍್ಯಾಂಕ್ ಪಡೆದ ಸೌಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಸೌಭಾಗ್ಯ ಬೀಳಗಿಮಠ ಅವರು ಯುಪಿಎಸ್‌ಸಿಯಲ್ಲಿ 101ನೇ ರ‍್ಯಾಂಕ್‌ ಗಳಿಸಿದ್ದಾರೆ. ಕೃಷಿ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಡಾ. ಅಶ್ವಿನಿ ಮುನಿಯಪ್ಪ ಉಚಿತ ತರಬೇತಿ ನೀಡಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ: ಸಾಮಾನ್ಯವಾಗಿ ಯುಪಿಎಸ್‌ಸಿ ಪರೀಕ್ಷೆಯ ತರಬೇತಿಯನ್ನು ಬಹುತೇಕರು ದೆಹಲಿ, ಹೈದರಾಬಾದ್, ಬೆಂಗಳೂರು ಅಂತಹ ಮಹಾನಗರಗಳಲ್ಲಿ ಲಕ್ಷಗಟ್ಟಲೇ ಶುಲ್ಕ ನೀಡಿ ಪಡೆಯುತ್ತಾರೆ. ಇಷ್ಟಾಗಿಯೂ ಯಶಸ್ಸು ಮಾತ್ರ ಅಷ್ಟಕ್ಕಷ್ಟೇ. ಆದರೆ, ಇಲ್ಲೊಬ್ಬರು ತಮ್ಮ ಪದವಿ ಕಾಲೇಜಿನ ಶಿಕ್ಷಕಿಯೊಬ್ಬರಿಂದ ಉಚಿತವಾಗಿ ಮಾರ್ಗದರ್ಶನ ಪಡೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 101ನೇ ರ‍್ಯಾಂಕ್ ಪಡೆಯುವ ಮೂಲಕ ಧಾರವಾಡಕ್ಕೆ ಕೀರ್ತಿ ತಂದಿದ್ದಾರೆ.

ಮೂಲತಃ ದಾವಣಗೆರೆಯವರಾದ, ಸದ್ಯ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸೌಭಾಗ್ಯ ಬೀಳಗಿಮಠ ಎಂಬುವರೇ ಈ ಅತ್ಯುನ್ನತ ಸಾಧನೆ ಮಾಡಿದವರು. ಸೌಭಾಗ್ಯ ಅವರ ತಂದೆ ಶರಣಯ್ಯ ಸ್ವಾಮಿ ದಾವಣಗೆರೆಯ ಶ್ಯಾಮನೂರಿನಲ್ಲಿ ನರ್ಸರಿ ಮಾಡಿಕೊಂಡಿದ್ದು, ತಾಯಿ ಜತೆಯಾಗಿದ್ದಾರೆ. ಮಧ್ಯಮ ಕುಟುಂಬದಲ್ಲಿ ಬೆಳೆದ ಸೌಭಾಗ್ಯ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಪಾಸಾಗಿದ್ದು ಹೆಮ್ಮೆಯ ಸಂಗತಿ.

ಉಚಿತ ಮನೆ ತರಬೇತಿ: 2018ರಿಂದಲೇ ಯುಪಿಎಸ್‌ಸಿ ಪರೀಕ್ಷೆಗೆ ಓದುತ್ತಿದ್ದ ಸೌಭಾಗ್ಯ ಅವರ ಆಸಕ್ತಿ ನೋಡಿ ಕೃಷಿ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಡಾ. ಅಶ್ವಿನಿ ಮುನಿಯಪ್ಪ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಸೌಭಾಗ್ಯ ಅವರಿಗೆ ಉಚಿತ ಮಾರ್ಗದರ್ಶನ ನೀಡಿದ್ದಾರೆ. ಕಾಲೇಜು ಸಮಯ ಹೊರತುಪಡಿಸಿ ಬೆಳಗ್ಗೆ, ಸಂಜೆ ಹೊತ್ತು ಹಾಗೂ ರಜೆ ದಿನಗಳಲ್ಲಿ ಸೌಭಾಗ್ಯ ಅವರಿಗೆ ವಿಶೇಷ ತರಬೇತಿ ನೀಡುತ್ತಿದ್ದ ಡಾ. ಅಶ್ವಿನಿ ಅವರ ಪ್ರಯತ್ನಕ್ಕೆ ಉತ್ತಮ ಫಲಿತಾಂಶವೇ ದೊರೆತಿದೆ.

ಇಬ್ಬರು ಉನ್ನತ ಹುದ್ದೆಯಲ್ಲಿ: ಇಂಡಿಯನ್‌ ರೈಲ್ವೆ ಸರ್ವೀಸ್‌ನಲ್ಲಿ ಅತ್ಯುತ್ತಮ ಉದ್ಯೋಗ ದೊರೆತರೂ, ಮಾರ್ಗದರ್ಶನದ ಕೊರತೆಯಿಂದ ಐಎಎಸ್‌ ಆಗಬೇಕು ಎನ್ನುವ ಕನಸು ನನಸಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನನ್ನಂತೆ ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಆಗಬಾರದು ಎಂಬ ಆಶಯದಿಂದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಮಾರ್ಗದರ್ಶನ ಮಾಡುತ್ತಿದ್ದೇನೆ. ಸೌಭಾಗ್ಯ ಅವರಂತೆ ಮುಂಚೆಯೇ ಇಬ್ಬರು ಅಭ್ಯರ್ಥಿಗಳು ಯುಪಿಎಸ್‌ಸಿಯಲ್ಲಿ ಪಾಸಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ಸದ್ಯ ಐವರು ನನ್ನ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಯುಪಿಎಸ್‌ಸಿ ತರಬೇತಿಗೆ ದೆಹಲಿ ಅಂತಹ ಊರುಗಳಿಗೆ ಹೋಗಿ ಲಕ್ಷಗಟ್ಟಲೇ ಹಣ ನೀಡಿ ತರಬೇತಿ ಪಡೆಯಬೇಕಿಲ್ಲ ಎಂಬುದು ಸಮಾಜಕ್ಕೆ ತಿಳಿಯಲೆಂದೇ ನಾನು ಆಸಕ್ತ ಅಭ್ಯರ್ಥಿಗಳಿಗೆ ನನ್ನ ಮನೆಯಲ್ಲಿಯೇ ತರಬೇತಿ ನೀಡುತ್ತಿದ್ದೇನೆ ಎಂದು ಡಾ. ಅಶ್ವಿನಿ ಮುನಿಯಪ್ಪ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.

ಇನ್ನು, ಸೌಭಾಗ್ಯ ಬೀಳಿಗಿಮಠ 2022ರಲ್ಲಿ ಮೊದಲ ಪ್ರಯತ್ನ ಮಾಡಿದ್ದು ಯಶಸ್ವಿ ಆಗಿರಲಿಲ್ಲ. ಆನಂತರ 2023ರ ಪರೀಕ್ಷೆಯಲ್ಲಿ 2ನೇ ಪ್ರಯತ್ನದಲ್ಲಿ 101ನೇ ರ‍್ಯಾಂಕ್ ಪಡೆದಿದ್ದು, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್‌. ಪಾಟೀಲ ಯುಪಿಎಸ್‌ಸಿ ಪಾಸಾದ ಸೌಭಾಗ್ಯ ಅವರಿಗೆ ಮಂಗಳವಾರ ಸನ್ಮಾನ ಮಾಡಿ ಹೆಮ್ಮೆ ಸಹ ವ್ಯಕ್ತಪಡಿಸಿದರು. ಐಎಎಸ್‌ ಆಗಬೇಕೆಂಬುದೇ ನನ್ನ ಅಚಲ ನಿರ್ಧಾರವಾಗಿತ್ತು. ಪದವಿ ಜತೆಗೆ ಪರೀಕ್ಷೆ ತಯಾರಿ ಮಾಡುತ್ತಿದ್ದಾಗ, ನನಗಿರುವ ಆಸಕ್ತಿ ಗಮನಿಸಿದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶ್ವಿನಿ ಅವರು 2018ರಿಂದ ಇಲ್ಲಿಯವರೆಗೂ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ನನಗೆ ಉಚಿತವಾಗಿ ತರಬೇತಿ ನೀಡಿದರು. ಸ್ವಂತ ಮಗಳಂತೆ ನೋಡಿಕೊಂಡ ಅವರು ತಮ್ಮ ಜ್ಞಾನವನ್ನು ಸಂಪೂರ್ಣವಾಗಿ ನನಗೆ ಧಾರೆ ಎರೆದರು. ಅವರ ಪ್ರಯತ್ನದ ಫಲವಾಗಿಯೇ ನಾನೀಗ ಅತ್ಯುನ್ನತ ಪರೀಕ್ಷೆ ಪಾಸಾಗಿದ್ದೇನೆ ಎಂದು ಸೌಭಾಗ್ಯ ಬೀಳಗಿಮಠ ಹೇಳಿದರು.