ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ:ಕಬ್ಬಿಣ, ಮ್ಯಾಗ್ನಿಶಿಯಂ, ಫಾಸ್ಪರಸ್ ಸೇರಿದಂತೆ ಇನ್ನಿತರ ಶಕ್ತಿದಾಯಕ ಪೋಷಕಾಂಶಗಳನ್ನು ಹೇರಳವಾಗಿ ಹೊಂದಿರುವ ದಕ್ಷಿಣ ಅಮೇರಿಕಾ ಪ್ರದೇಶದಲ್ಲಿ ಯಥೇಚ್ಚವಾಗಿ ಬೆಳೆಯುವ ಕಪ್ಪು ಮೆಕ್ಕೆ ಜೋಳವನ್ನು ತಾಲೂಕಿನ ಎಚ್‌ಆರ್‌ಜಿ ನಗರದ ರೈತರೋರ್ವರು ಬೆಳೆದಿದ್ದು, ಮಾರುಕಟ್ಟೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.ಎಚ್‌ಆರ್‌ಜಿ ನಗರದ ರೈತ ಲಕ್ಷ್ಮಣ ಇಂದ್ರಪ್ಪ ಪೂಜಾರಿ ಎನ್ನುವವರು 10 ಗುಂಟೆ ಜಾಗದಲ್ಲಿ ಬೆಳೆದಿದ್ದು 50 ಕೆಜಿ ಫಸಲು ಬಂದಿದೆ. ಇದು ಸಾಮಾನ್ಯ ಮೆಕ್ಕೆಜೋಳಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದ್ದು, ಅದರಲ್ಲೂ ಗರ್ಭಿಣಿಯರಿಗೆ ಅತ್ಯುಪಯುಕ್ತ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಬೇರೆಡೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರು ಈ ಬೆಳೆ ಬೆಳೆಯಲು ಹಿಂದೇಟು ಹಾಕುವಂತೆ ಆಗಿದೆ.
₹ 2000ಕ್ಕೆ ಒಂದು ತೆನೆ:ಬೆಂಗಳೂರಿನ ತರಕಾರಿ ಮತ್ತು ಬಿತ್ತನ ಬೀಜಗಳ ಮಾರಾಟ ಕೇಂದ್ರದಲ್ಲಿ ಮುಖಂಡರೊಬ್ಬರು ಕಪ್ಪು ಮೆಕ್ಕೆಜೋಳ ಒಂದು ತೆನೆಯನ್ನು ₹ 2000 ನೀಡಿ ಖರೀದಿಸಿದ್ದಾರೆ. ಖರೀದಿಸಿದ ಕಪ್ಪು ಬಣ್ಣದ ತೆನೆಯನ್ನು ರೈತ ಲಕ್ಷ್ಮಣ ಪೂಜಾರಿ ಅವರಿಗೆ ನೀಡಿದ್ದಾರೆ. 10 ಗುಂಟೆ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ 50 ಕೆಜಿ ಜೋಳ ತೆನೆ ಬೆಳೆದು ಗಮನ ಸೆಳೆದಿದ್ದಾರೆ. ಕಪ್ಪು ಮೆಕ್ಕೆಜೋಳದ ಜತೆಗೆ ಮಿಶ್ರ ಬಣ್ಣದ ಮೆಕ್ಕೆಜೋಳದ ಫಸಲು ಬಂದಿದೆ. ಇದರ ಮಾರುಕಟ್ಟೆ ಬೆಲೆ ಅಂದಾಜು ₹ 4 ಲಕ್ಷ ಎಂದು ಹೇಳಲಾಗುತ್ತಿದೆ. (ಕೆಜಿಗೆ 8 ರಿಂದ 10 ಸಾವಿರ ರು.)
ಶಕ್ತಿದಾಯಕ ಮೆಕ್ಕೆಜೋಳದ ತಳಿ:ಬಹುತೇಕವಾಗಿ ಕಪ್ಪು ಮೆಕ್ಕೆಜೋಳವನ್ನು ದಕ್ಷಿಣ ಅಮೆರಿಕ ಸೇರಿದಂತೆ ಇಟಲಿ, ಯುರೋಪ್ ರಾಷ್ಟ್ರಗಳಲ್ಲಿ ಅಧಿಕವಾಗಿ ಬೆಳೆಯುತ್ತಾರೆ. ಕರ್ನಾಟಕದಲ್ಲಿ ಬೆಳೆಯುವುದಿಲ್ಲ. ಬೇರೆ ರಾಷ್ಟ್ರಗಳಿಂದ ಬೆಂಗಳೂರು, ಮುಂಬೈ ಸೇರಿದಂತೆ ದೊಡ್ಡ ನಗರಗಳಲ್ಲಿ ಮಾರಾಟ ಮಾಡುತ್ತಾರೆ. ಈ ಮೆಕ್ಕೆಜೋಳದಲ್ಲಿ ಐರನ್, ಮ್ಯಾಗ್ನೇಶಿಯಮ್, ಪಾಸ್ಪರಸ್‌ನಂತಹ ಶಕ್ತಿದಾಯಕ ಪೋಷಕಾಂಶಗಳು ಈ ಜೋಳದ ತಳಿಯಲ್ಲಿದ್ದು ಹೆಚ್ಚು ಬೇಡಿಕೆ ಇದೆ ಎಂದು ಕೃಷಿ ವಿಜ್ಞಾನಿಗಳು ಹೇಳಿದ್ದಾರೆ. ಗರ್ಭಿಣಿಯರು ಈ ಜೋಳ ತಿನ್ನುವುದರಿಂದ ಮಗುವಿನ ಬೆಳವಣಿಗೆಗೆ ಸಹಾಯಕವಾಗುವ ಜತೆಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ ಎಂದು ಹೇಳುತ್ತಾರೆ. ಹೀಗಾಗಿ ಗರ್ಭಿಣಿಯರು ಹೆಚ್ಚಾಗಿ ಈ ಜೋಳ ಉಪಯೋಗಿಸುತ್ತಾರೆ.
ಮಾರಾಟಕ್ಕೆ ಪರದಾಟ:ಒಂದೆಡೆ ಕಪ್ಪು ಮೆಕ್ಕೆಜೋಳ ಬೆಳೆದು ಸಾಧನೆ ಮಾಡಿರುವ ರೈತನಿಗೆ ಖುಷಿಯೊಂದಿದ್ದರೆ ಅದನ್ನು ಮಾರಾಟ ಮಾಡಲು ಪರದಾಡುವಂತೆ ಆಗಿದೆ. ಇದರ ಬೆಲೆ ದುಬಾರಿಯಾಗಿರುವುದರಿಂದ ಜನರು ಖರೀದಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ರಾಜ್ಯದಲ್ಲಿ ರೈತರು ಈ ಬೆಳೆ ಬೆಳೆಯುವುದಿಲ್ಲ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಅಂದಾಜು ₹ 4 ಲಕ್ಷ ಮೌಲ್ಯದ ಮೆಕ್ಕೆಜೋಳವನ್ನು ತನ್ನ ಮನೆಯಲ್ಲಿಟ್ಟುಕೊಂಡಿದ್ದು, ಮಾರಾಟ ಮಾಡುವುದಕ್ಕೆ ಮಾರುಕಟ್ಟೆ ಹುಡುಕುವಂತೆ ಆಗಿದೆ.
ದಕ್ಷಿಣ ಅಮೆರಿಕದ ಕಪ್ಪು ಮೆಕ್ಕೆಜೋಳದ ತಳಿ ಕರ್ನಾಟಕದಲ್ಲಿ ಬೆಳೆಯವುದು ಅಪರೂಪ. ಆದರೆ, ರೈತ ಲಕ್ಷ್ಮಣ ಪೂಜಾರಿ ಈ ಸಾಧನೆ ಮಾಡಿದ್ದಾರೆ. ಈ ಜೋಳ ಗರ್ಭಿಣಿಯರಿಗೆ ಶಕ್ತಿದಾಯಕ ಆಹಾರ. ಇದಕ್ಕೆ ಮಾರುಕಟ್ಟೆ ಇಲ್ಲದ ಕಾರಣ ರೈತರಿಗೆ ತೊಂದರೆಯಾಗುತ್ತಿದೆ ಎಂದು ತಜ್ಞ ಡಾ. ರಾಘವೇಂದ್ರ ಎಲಿಗಾರ ಹೇಳಿದ್ದಾರೆ.ಗಂಗಾವತಿಯ ಮುಖಂಡರೊಬ್ಬರು ದಕ್ಷಿಣ ಅಮೆರಿಕದ ಕಪ್ಪು ಮೆಕ್ಕೆಜೋಳದ ತಳಿ ನೀಡಿದ್ದರು. ಒಂದೇ ತೆನೆಯನ್ನು 10 ಗುಂಟೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರಿರಂದ 50 ಕೆಜಿ ಫಸಲು ಬಂದಿದೆ. ಈ ಬೆಳೆ ಮಾರಾಟ ಮಾಡಲು ಮಾರುಕಟ್ಟೆ ಬೇಕಾಗಿದೆ ಎಂದು ರೈತ ಲಕ್ಷ್ಮಣ ಪೂಜಾರಿ ತಿಳಿಸಿದ್ದಾರೆ.