ಸಾರಾಂಶ
ಹುಬ್ಬಳ್ಳಿ: 2023-24ರ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆ ₹2,78,000 ಕೋಟಿ ಆದಾಯ ಗಳಿಸಿದ್ದರೆ, ನೈರುತ್ಯ ರೈಲ್ವೆ ವಲಯವು ₹7671.15 ಕೋಟಿ ಆದಾಯ ಗಳಿಸಿದೆ ಎಂದು ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ರೈಲ್ವೆ ಬಜೆಟ್ ಕುರಿತಂತೆ ಮಾತನಾಡಿದ ಅವರು, ನೈರುತ್ಯ ರೈಲ್ವೆ ವಲಯ ₹7671.15 ಕೋಟಿ ಆದಾಯ ಗಳಿಸಿದ್ದರೆ, ಇನ್ನು ಸಿಬ್ಬಂದಿ ವೆಚ್ಚ ₹3218.44 ಕೋಟಿ, ಪಿಂಚಣಿ ಪಾವತಿ ₹222.08 ಕೋಟಿ, ಇಂಧನ ವೆಚ್ಚ ₹2465.30 ಕೋಟಿ ಮತ್ತು ಹಣಕಾಸು ವೆಚ್ಚ ₹710.03 ಕೋಟಿ ಎಂದು ವಿವರಿಸಿದ್ದಾರೆ.ರೈಲ್ವೆಯು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಉದ್ದವಾದ ಹಳಿ, ಹೆಚ್ಚಿನ ತೀಕ್ಷ್ಣತೆ ಹೊಂದಿರುವ ಹಳಿಗಳು, ನಿಲ್ದಾಣಗಳು ಮತ್ತು ಲೆವೆಲ್ ಕ್ರಾಸಿಂಗ್‌ಗಳಲ್ಲಿ ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ, ಮಂಜು ನಿರ್ವಹಣಾ ಸಾಧನಗಳ ಹೆಚ್ಚಳ, "ಕವಚ್ " ಸುರಕ್ಷತಾ ವ್ಯವಸ್ಥೆಯ ಅಭಿವೃದ್ಧಿ ಮತ್ತು ದಪ್ಪ ವೆಬ್ ಸ್ವಿಚ್‌ಗಳ ಬಳಕೆ ಮಾಡಲಾಗಿದೆ. ಇದರ ಪರಿಣಾಮವಾಗಿ, ಸುರಕ್ಷತೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ, 5 ಲಕ್ಷಕ್ಕಿಂತ ಹೆಚ್ಚು ಉದ್ಯೋಗಗಳನ್ನು ರೈಲ್ವೆ ಒದಗಿಸಿದ್ದು, ಪ್ರಸ್ತುತ 1 ಲಕ್ಷಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.2030ರೊಳಗೆ, ಭಾರತೀಯ ರೈಲ್ವೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತಲುಪಿಸಲು ಉದ್ದೇಶಿಸಿದೆ. 2025ರಲ್ಲಿ ಸ್ಕೋಪ್ 1 ಶೂನ್ಯ ಇಂಗಾಲ ನಿರ್ವಹಣೆ ಸಾಧಿಸಲಾಗಿದ್ದು, ಸ್ಕೋಪ್ 2 ಅನ್ನು 2030ರೊಳಗೆ ಶೂನ್ಯಗೊಳಿಸಲು ಸಿದ್ಧತೆ ನಡೆದಿದೆ ಎಂದು ವಿವರಿಸಿದ್ದಾರೆ.