ಸಾರಾಂಶ
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು 2025ರ ಸೆಪ್ಟೆಂಬರ್‌ನಲ್ಲಿ ಸರಕು ಸಾಗಣೆ ಮತ್ತು ಆದಾಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಒಟ್ಟು 4.17 ಮಿಲಿಯನ್ ಟನ್ ಸರಕು ಲೋಡ್ ಮಾಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 3.3 ಮಿಲಿಯನ್ ಟನ್ ಹೋಲಿಸಿದರೆ ಶೇ. 25ರಷ್ಟು ಏರಿಕೆಯಾಗಿದೆ. 2023-24ಕ್ಕಿಂತ ಮುಂಚಿನ ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 4.1 ಮಿಲಿಯನ್ ಟನ್ ಸರಕು ಸಾಗಣಿಕೆ ಆಗಿತ್ತು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಸರಕು ಸಾಗಾಣಿಕೆಯಲ್ಲಿ ದಾಖಲೆ ಮಾಡಿದಂತೆ ಆಗಿದೆ.
ಕಬ್ಬಿಣದ ಅದಿರು ಲೋಡಿಂಗ್ ಶೇ. 2.8ರಷ್ಟು ಏರಿಕೆಯಾಗಿ 1.583 ಮಿ. ಟನ್‌ನಿಂದ 1.628 ಮಿ. ಟನ್‌ಗೆ ತಲುಪಿದೆ. ಉಕ್ಕಿನ ಲೋಡಿಂಗ್ ಶೇ. 53.3 ರಷ್ಟು ಏರಿಕೆಯಾಗಿ 0.591 ಮಿ. ಟನ್‌ನಿಂದ 0.906 ಮಿಲಿಯನ್ ಟನ್‌ಗೆ ತಲುಪಿದೆ. ಕಲ್ಲಿದ್ದಲು ಲೋಡಿಂಗ್ ಶೇ. 45.8ರಷ್ಟು ಹೆಚ್ಚಾಗಿ 0.511 ಎಂಟಿಯಿಂದ 0.745 ಎಂಟಿಯಷ್ಟು ಆಗಿದೆ. ಉಕ್ಕಿನ ಸ್ಥಾವರಗಳಿಗೆ ಕಚ್ಚಾ ವಸ್ತು ಲೋಡಿಂಗ್ ಶೇ. 306ರಷ್ಟು ಅಸಾಧಾರಣ ಏರಿಕೆ ಕಂಡು 0.083 ಎಂಟಿಯಿಂದ 0.337 ಎಂಟಿಯಷ್ಟು ಆಗಿದೆ. ರಸಗೊಬ್ಬರ ಲೋಡಿಂಗ್ ಶೇ. 29.8ರಷ್ಟು ಏರಿಕೆಯಾಗಿ 0.109 ಎಂಟಿ ತಲುಪಿದ್ದು, ಕಂಟೇನರ್ ಸಂಚಾರವೂ ಶೇ. 37.9ರಷ್ಟು ಏರಿಕೆಯಾಗಿ 0.058 ಎಂಟಿಯಿಂದ 0.080 ಎಂಟಿಯಾಗಿದೆ.ಪ್ರಯಾಣಿಕರ ಸೇವೆಗಳ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದೆ. ಸೆಪ್ಟೆಂಬರ್ ನೈಋತ್ಯ ರೈಲ್ವೆ ₹282 ಕೋಟಿ ಪ್ರಯಾಣಿಕರ ಆದಾಯ ಗಳಿಸಿದ್ದು, ಇದು 2024ರ ಸೆಪ್ಟೆಂಬರ್‌ನ ₹264.83 ಕೋಟಿಗಿಂತ ಶೇ. 6.38 ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆಯು 14.34 ಮಿಲಿಯನ್‌ಗೆ ಏರಿದ್ದು, ಕಳೆದ ವರ್ಷದ 13.37 ಮಿಲಿಯನ್ ಪ್ರಯಾಣಿಕರಿಗಿಂತ ಶೇ 7.26 ಹೆಚ್ಚಳವಾಗಿದೆ.
ಸರಕು ಸಾಗಣೆ ವಿಭಾಗವು ವಲಯದ ಸರಕು ಸಾಗಣೆಯಿಂದ ₹427.50 ಕೋಟಿ ಆದಾಯವಾದಂತಾಗಿದೆ. ಕಳೆದ ವರ್ಷ ₹314.85 ಕೋಟಿ ಅಗಿತ್ತು.ಒಟ್ಟಾರೆಯಾಗಿ ಪ್ರಸಕ್ತ ವರ್ಷ ಸೆಪ್ಟೆಂಬರ್‌ವರೆಗೆ ನೈಋತ್ಯ ರೈಲ್ವೆ ಸರಕು ಸಾಗಣೆಯಿಂದ ₹2,578 ಕೋಟಿ ಆದಾಯ ಗಳಿಸಿದಂತಾಗಿದೆ. ಇದು ಹಿಂದಿನ ವರ್ಷಗಿಂತ ಶೇ. 27.29ರಷ್ಟು ಹೆಚ್ಚಾಗಿದೆ. ಅದೇ ಅವಧಿಯಲ್ಲಿ ಪ್ರಯಾಣಿಕರ ಆದಾಯ ₹1,650 ಕೋಟಿಗೆ ಏರಿದ್ದು, ಕಳೆದ ವರ್ಷ ₹1,606.56 ಕೋಟಿಯಾಗಿತ್ತು ಎಂದು ವಲಯದ ಪ್ರಕಟಣೆ ವಿವರಿಸಿದೆ.