ಕನ್ನಡದಲ್ಲೂ ಸ್ಪರ್ಧಾತ್ಮಕ ಸಹಾಯಕ ಲೋಕೋಪೈಲಟ್‌ ಪರೀಕ್ಷೆ : ನೈಋತ್ಯ ರೈಲ್ವೆ ಆದೇಶ

| Published : Aug 08 2024, 01:34 AM IST / Updated: Aug 08 2024, 07:38 AM IST

ಸಾರಾಂಶ

ಕನ್ನಡದಲ್ಲೂ ರೈಲ್ವೆ ಚಾಲಕರಿಗೆಪರೀಕ್ಷೆ: ನೈಋತ್ಯ ರೈಲ್ವೆ ಆದೇಶ

 ಬೆಂಗಳೂರು :  ಸಾಮಾನ್ಯ ವಿಭಾಗೀಯ ಸ್ಪರ್ಧಾತ್ಮಕ ಸಹಾಯಕ ಲೋಕೋಪೈಲಟ್‌ ಪರೀಕ್ಷೆಯನ್ನು (ಜಿಡಿಸಿಇ) ಕನ್ನಡದಲ್ಲಿ ನಡೆಸುವ ಕುರಿತು ನೈಋತ್ಯ ರೈಲ್ವೆ ವಲಯವು ಅಧಿಕೃತ ಆದೇಶ ಹೊರಡಿಸಿದೆ.

ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಸೂಚನೆ ಮೇರೆಗೆ ಆದೇಶ ಹೊರಡಿಸಿರುವ ಇಲಾಖೆ, ಮುಂಬಡ್ತಿ ಕೋಟಾ ಅಡಿ ಆಯ್ಕೆಗೆ ನಡೆಸಲಾಗುತ್ತಿರುವ ರೈಲ್ವೆ ವಿಭಾಗೀಯ ಪರೀಕ್ಷೆಗಳಲ್ಲಿ ಹಿಂದಿ/ಇಂಗ್ಲಿಷ್‌ ಜೊತೆಗೆ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡುವುದಾಗಿ ತಿಳಿಸಿದೆ.

ಮೇ ತಿಂಗಳಲ್ಲಿ ಪರೀಕ್ಷೆಯ ಅಧಿಸೂಚನೆ ಹೊರಡಿಸುವಾಗ ಕನ್ನಡಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಬಳಿಕ ತಿದ್ದುಪಡಿ ಮೂಲಕ ಹಿಂದಿ/ ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡುವುದಾಗಿ ಹೇಳಲಾಗಿತ್ತು. ಹಾಲ್‌ ಟಿಕೆಟ್‌ನಲ್ಲಿ ಇವೆರಡು ಭಾಷೆಗಳು ಮಾತ್ರ ಇರುವುದನ್ನು ಕಂಡು ಪರೀಕ್ಷಾರ್ಥಿ ರೈಲ್ವೆ ಉದ್ಯೋಗಿಗಳು ಕಂಗಾಲಾಗಿದ್ದರು. 

‘ಕನ್ನಡಪ್ರಭ’ ಈ ಬಗ್ಗೆ ವರದಿ ಪ್ರಕಟಿಸಿದ ಬಳಿಕ ಸಚಿವ ಸೋಮಣ್ಣ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ಸೂಚಿಸಿದ್ದರು. ಅದರಂತೆ ರೈಲ್ವೆ ಇಲಾಖೆ ಹಿಂದಿನ ತಿದ್ದುಪಡಿಯನ್ನು ರದ್ದುಪಡಿಸಿದೆ. ಆದರೆ, ಮುಂದೂಡಲ್ಪಟ್ಟಿದ್ದ ಆ.3ರ ಪರೀಕ್ಷೆಯನ್ನು ಯಾವಾಗ ನಡೆಸಲಿದೆ ಎಂದು ತಿಳಿಸಿಲ್ಲ. ಜಿಡಿಸಿಇ ಮಾತ್ರವಲ್ಲದೆ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ ಸೇರಿ ಎಲ್ಲ ಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ.