ನೈಋತ್ಯ ಪದವೀಧರ ಕ್ಷೇತ್ರ: ಕಾಂಗ್ರೆಸ್‌ನಿಂದ ಆಯನೂರ್‌ ಕಣಕ್ಕೆ, ಬಿಜೆಪಿಯಿಂದ ವಿಕಾಸ್‌?

| Published : Mar 28 2024, 12:55 AM IST

ನೈಋತ್ಯ ಪದವೀಧರ ಕ್ಷೇತ್ರ: ಕಾಂಗ್ರೆಸ್‌ನಿಂದ ಆಯನೂರ್‌ ಕಣಕ್ಕೆ, ಬಿಜೆಪಿಯಿಂದ ವಿಕಾಸ್‌?
Share this Article
  • FB
  • TW
  • Linkdin
  • Email

ಸಾರಾಂಶ

ಪದವೀಧರ ಕ್ಷೇತ್ರಕ್ಕೆ ಜೆಡಿಎಸ್‌ ಸ್ಪರ್ಧೆಗೆ ಉತ್ಸುಕವಾಗಿಲ್ಲ. ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಸಾಧ್ಯತೆಯೇ ಹೆಚ್ಚು.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣೆ ಭರಾಟೆ ನಡುವೆಯೇ ಜೂನ್‌ನಲ್ಲಿ ನಡೆಯುವ ವಿಧಾನಪರಿಷತ್‌ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ ದಿಢೀರನೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ. ಈ ನಡುವೆ ಬಿಜೆಪಿಯಲ್ಲಿ ಪ್ರಮುಖ ಆಕಾಂಕ್ಷಿಗಳ ಹೆಸರು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗಿದೆ. ಲೋಕಸಭಾ ಚುನಾವಣೆ ಮುಕ್ತಾಯ ಬಳಿಕವೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಪದವೀಧರ ಕ್ಷೇತ್ರಕ್ಕೆ ಜೆಡಿಎಸ್‌ ಸ್ಪರ್ಧೆಗೆ ಉತ್ಸುಕವಾಗಿಲ್ಲ. ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಸಾಧ್ಯತೆಯೇ ಹೆಚ್ಚು.ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯ ನಡುವೆಯೇ ನೈಋತ್ಯ ಪದವೀಧರ ಕ್ಷೇತ್ರಕ್ಕೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿವಮೊಗ್ಗದ ಆಯನೂರು ಮಂಜುನಾಥ್‌ ಅವರ ಹೆಸರು ಪ್ರಕಟಿಸಿದೆ. ಪ್ರಸಕ್ತ ಕೆಪಿಸಿಸಿ ವಕ್ತಾರ ಆಗಿರುವ ಆಯನೂರ್‌ ಮಂಜುನಾಥ್‌ ಹೆಸರು ನಿರೀಕ್ಷಿತವೇ ಆಗಿತ್ತಾದರೂ ದಿನೇಶ್‌ ಕೂಡ ಪೈಪೋಟಿಯಲ್ಲಿದ್ದರು. ಆದರೆ ಬಿಜೆಪಿ ಇನ್ನೂ ಅಭ್ಯರ್ಥಿ ಹೆಸರು ಘೋಷಣೆಗೆ ಅವಸರ ಹೆಜ್ಜೆ ಇರಿಸಿಲ್ಲ.ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ರಾಜ್ಯ ವಕ್ತಾರ, ದ.ಕ. ಜಿಲ್ಲೆಯ ವಿಕಾಸ್‌ ಪಿ. ಹೆಸರು ಮುಂಚೂಣಿಯಲ್ಲಿದೆ. ರಾಜ್ಯ ವಕ್ತಾರನಾಗಿ ಮಾತ್ರವಲ್ಲ ಪಕ್ಷ ಸಂಘಟನೆಯಲ್ಲಿ ಸಕ್ರಿಯ ತೊಡಗಿಸಿಕೊಂಡಿರುವುದು ಇವರ ಬಗ್ಗೆ ನಾಯಕರು ಹೆಚ್ಚಿನ ಒಲವು ಹೊಂದುವಂತಾಗಿದೆ. ಉಳಿದಂತೆ ಉಡುಪಿ ಮಾಜಿ ಶಾಸಕ ರಘುಪತಿ ಭಟ್‌, ಶಿವಮೊಗ್ಗದ ಧನಂಜಯ, ಗಿರೀಶ್‌ ಹೆಸರು ಕೇಳಿಬರುತ್ತಿದೆ. ಆದರೆ ಇವರೆಲ್ಲ ಜೂನ್‌ನಲ್ಲಿ ಖಾಲಿಯಾಗಲಿರುವ ವಿಧಾನ ಪರಿಷತ್‌ ಸ್ಥಾನದತ್ತ ಕಣ್ಣಿಟ್ಟಿದ್ದು, ಪದವೀಧರ ಕ್ಷೇತ್ರದತ್ತ ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎಂದೇ ಹೇಳಲಾಗುತ್ತಿದೆ.

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಭೋಜೇ ಗೌಡ ಅವರು ಎರಡನೇ ಬಾರಿ ಕಣಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್‌ ಆಸಕ್ತಿ ತೋರಿಸುತ್ತಿಲ್ಲ. ಇಲ್ಲಿ ಕೂಡ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಹೇಳಲಾಗಿದೆ.

ಜೂನ್‌ ವೇಳೆಗೆ ಒಟ್ಟು 11 ವಿಧಾನ ಪರಿಷತ್‌ ಸ್ಥಾನಗಳು ಖಾಲಿಯಾಗಲಿದ್ದು, ಇದರಲ್ಲಿ ಆರು ಕಾಂಗ್ರೆಸ್‌, ಮೂರು ಬಿಜೆಪಿ ಹಾಗೂ ಒಂದು ಜೆಡಿಎಸ್‌ ಪಾಲಾಗಲಿದೆ. ಬಿಜೆಪಿಗೆ ಮೂರರಲ್ಲಿ ಶಿವಮೊಗ್ಗದ ರುದ್ರೇಶ್‌, ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಕೋಟ ಶ್ರೀನಿವಾಸ ಪೂಜಾರಿ ಗೆದ್ದರೆ, ಅವರಿಂದ ಖಾಲಿಯಾಗುವ ಸ್ಥಾನಕ್ಕೆ ಮಾಜಿ ಶಾಸಕ ರಘುಪತಿ ಭಟ್‌, ಶಿವಮೊಗ್ಗದಲ್ಲಿ ರುದ್ರೇ ಗೌಡರ ಖಾಲಿ ಸ್ಥಾನಕ್ಕೆ ಧನಂಜಯ, ಗಿರೀಶ್‌ ದೃಷ್ಟಿ ಹರಿಸಿದ್ದಾರೆ. ಇಲ್ಲಿ ಕೊನೆಕ್ಷಣದಲ್ಲಿ ಈಶ್ವರಪ್ಪ ಅವರ ಪುತ್ರ ಕಾಂತೇಶ್‌ ಹೆಸರು ಮುನ್ನಲೆಗೆ ಬಂದರೂ ಅಚ್ಚರಿ ಇಲ್ಲ ಎನ್ನುತ್ತವೆ ಪಕ್ಷ ಮೂಲ.ನೈಋತ್ಯ ಪದವೀಕ್ಷದ ಕ್ಷೇತ್ರ ಐದೂವರೆ ಜಿಲ್ಲೆಗಳನ್ನು ಒಳಗೊಂಡಿದೆ. ದ.ಕ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ದಾವಣಗೆರೆಯ ಹೊನ್ನಾಳಿ, ಚೆನ್ನಗಿರಿ ಮತ್ತು ನ್ಯಾಮತಿ ತಾಲೂಕನ್ನು ಒಳಗೊಂಡಿದೆ.

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಬದಲು ಜೆಡಿಎಸ್‌ನ ಭೋಜೇ ಗೌಡರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಕೊಡಗಿನ ಮಂಜುನಾಥ್‌ ಅಭ್ಯರ್ಥಿಯಾಗಿದ್ದಾರೆ.

ಪದವೀಧರ ಚುನಾವಣೆಗೆ ಮತದಾರರ ನೋಂದಣಿ

ಇದುವರೆಗೆ ನೈಋತ್ಯ ಪದವೀಧರ ಕ್ಷೇತ್ರದಲ್ಲಿ 74,218 ಮತದಾರರು ನೋಂದಣಿಯಾಗಿದ್ದಾರೆ. ಜೂನ್‌ನಲ್ಲಿ ಚುನಾವಣೆ ವೇಳೆಗೆ ಇದು 1 ಲಕ್ಷ ತಲುಪುವ ಸಾಧ್ಯತೆ ಇದೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 19,380 ಮತದಾರರಿದ್ದು, ಇದು ಕೂಡ ಚುನಾವಣೆ ಸಮಯಕ್ಕೆ 22 ಸಾವಿರ ಗುರಿ ತಲುಪುವ ನಿರೀಕ್ಷೆ ಇದೆ. ಪದವೀಧರ ಕ್ಷೇತ್ರ ಚುನಾವಣೆಗೆ ಮತದಾರರ ನೋಂದಣಿ ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ಹೇಳುತ್ತಿವೆ.