ಸಾರಾಂಶ
ಗದಗ: ಜಿಲ್ಲೆಯಲ್ಲಿ 2024-25ನೇ ಸಾಲಿನ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಮುಂಗಾರು ಹಂಗಾಮಿನಲ್ಲಿ ಕೂಡ ಉತ್ತಮವಾಗಿ ಮಳೆ ಬರುವ ನಿರೀಕ್ಷೆಯಿದೆ. ರೈತರು ಬಿತ್ತನೆಗೆ ಅವಸರ ಮಾಡದೇ, ಮಣ್ಣಿನಲ್ಲಿ ಅವಶ್ಯಕ ತೇವಾಂಶವಿರುವ ಬಗ್ಗೆ ಖಚಿತ ಪಡಿಸಿಕೊಂಡು ಬಿತ್ತನೆ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಸಲಹೆ ನೀಡಿದೆ.ಈ ಕುರಿತು ಪ್ರಕಟಣೆ ನೀಡಿರುವ ಇಲಾಖೆ, ಇಲ್ಲದೇ ಹೋದರೆ ಬಿತ್ತಿದ ಬೀಜದಿಂದ ಸರಿಯಾಗಿ ಮೊಳಕೆ ಬರಲು ಸಾಧ್ಯವಾಗದೇ ಇರಬಹುದು ಅಥವಾ ಬೆಳೆಯ ಬೆಳವಣಿಗೆ ವೇಳೆಗೆ ತೇವಾಂಶ ಕೊರತೆ ಉಂಟಾಗಬಹುದಾಗಿದೆ ಎಂದು ಎಚ್ಚರಿಸಿದೆ.ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1.25 ಲಕ್ಷ ಹೆಕ್ಟೇರ್ ಹೆಸರು, 1 ಲಕ್ಷ ಹೆ. ಮೆಕ್ಕೆಜೋಳ, 30 ಸಾವಿರ ಹೆ. ಶೇಂಗಾ, 11 ಸಾವಿರ ಹೆ. ಸೂರ್ಯಕಾಂತಿ ಹಾಗೂ 20 ಸಾವಿರ ಹೆ. ಹತ್ತಿ ಸೇರಿದಂತೆ ಒಟ್ಟು 3 ಲಕ್ಷ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರದ ಗುರಿಯಿದೆ. ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನೀಕರಿಸಿದೆ. ಕಾರಣ, ರೈತರು ಯಾವುದೇ ರೀತಿಯ ಆತಂಕಗೊಳ್ಳುವ ಅಗತ್ಯವಿಲ್ಲ.
ಕಳೆದ ಸಾಲಿನಂತೆ ಪ್ರಸಕ್ತ ವರ್ಷವೂ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ, ಇಲಾಖೆಯ ಮಾರ್ಗಸೂಚಿಯನ್ವಯ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಅಲ್ಲದೇ ಕರ್ನಾಟಕ ರಾಜ್ಯ ಬೀಜ ನಿಗಮ, ಕರ್ನಾಟಕ ಎಣ್ಣೆಕಾಳು ಬೆಳೆಗಾರರ ಮಹಾಮಂಡಳ ನಿಯಮಿತ, ರಾಷ್ಟ್ರೀಯ ಬೀಜ ನಿಗಮ ಮತ್ತು ಖಾಸಗಿ ಮಾರಾಟ ಮಳಿಗೆಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರು ಬಿತ್ತನೆ ಕೈಗೊಳ್ಳುವ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು ಎಂದು ಹೇಳಿದೆ.ಜಿಲ್ಲೆಯಲ್ಲಿ ಯೂರಿಯಾ 7732.79 ಮೆ. ಟನ್, ಡಿ.ಎ.ಪಿ. 2574.65 ಮೆ. ಟನ್, ಎಂ.ಓ.ಪಿ. 670.20 ಮೆ. ಟನ್, ಎಸ್.ಎಸ್.ಪಿ. 174.10 ಮೆ. ಟನ್ ಹಾಗೂ ಇತರೆ ಸಂಯುಕ್ತ ರಸಗೊಬ್ಬರ 4435.19 ಮೆ. ಟನ್, ಒಟ್ಟಾರೆ 15586.93 ಮೆ. ಟನ್‍ಗಳಷ್ಟು ವಿವಿಧ ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ. ರಸಗೊಬ್ಬರಗಳ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಹೇಳಿದೆ.
ಅಧಿಕೃತ ಪರವಾನಗಿ ಹೊಂದಿದ ಪರಿಕರ ಮಾರಾಟಗಾರರಲ್ಲಿ ಮಾತ್ರ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಬೇಕು. ಕೃಷಿ ಪರಿಕರಗಳನ್ನು ಎಂ.ಆರ್.ಪಿ.ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿಭಾಗದ ಉಪ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ. ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ಕೃಷಿ ಇಲಾಖೆ ಎಚ್ಚರಿಸಿದೆ.