ಸಾರಾಂಶ
ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ರೈತ ಸಂಪರ್ಕ ಕೇಂದ್ರ, ಪಿಎಸಿಎಸ್ ಹಾಗೂ ರೈತ ಉತ್ಪನ್ನ ಸಂಸ್ಥೆಗಳು ಪ್ರತಿದಿನ ಬೆಳಗ್ಗೆ ೮.೩೦ ಗಂಟೆಗೆ ಕೇಂದ್ರಗಳನ್ನು ತೆರೆಯಬೇಕು ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಪ್ರತಿ ದಿನ ಲಭ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ವಿವರವನ್ನು ಅನಾವರಣ ಮಾಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರ ಕೃಷಿ ಚಟುವಟಿಕೆಗಳು ಚುರುಕನ್ನು ಪಡೆದಿವೆ. ರೈತರಿಗೆ ತೊಂದರೆಯಾಗದಂತೆ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ಔಷಧ ದೊರಕುವಂತೆ ವ್ಯವಸ್ಥೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಶನಿವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಕೃಷಿ ಪರಿಕರಗಳ ಉಸ್ತುವಾರಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಸುಮಾರು ೬೦೦೦೦ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಲಿದೆ ಎಂದರು.
ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ರೈತ ಸಂಪರ್ಕ ಕೇಂದ್ರ, ಪಿಎಸಿಎಸ್ ಹಾಗೂ ರೈತ ಉತ್ಪನ್ನ ಸಂಸ್ಥೆಗಳು ಪ್ರತಿದಿನ ಬೆಳಗ್ಗೆ ೮.೩೦ ಗಂಟೆಗೆ ಕೇಂದ್ರಗಳನ್ನು ತೆರೆಯಬೇಕು ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಪ್ರತಿ ದಿನ ಲಭ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ವಿವರವನ್ನು ಅನಾವರಣ ಮಾಡಬೇಕು. ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ದಾಸ್ತಾನು ಬುಲೆಟಿನ್ ಬಿಡುಗಡೆ ಮಾಡಬೇಕು. ಇದರಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ತೊಂದರೆಯಿಲ್ಲ ಎಂದು ಮನವರಿಕೆಯಾಗುತ್ತದೆ ಎಂದರು.ಕಳಪೆ ಗುಣಮಟ್ಟದ ಬಿತ್ತನೆ ಬೀಜ ಸೇರಿದಂತೆ ಯಾವುದೇ ಕೃಷಿ ಪರಿಕರ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಮಣ್ಣು ಪರೀಕ್ಷಾ ವರದಿಯನ್ನು ಆಧರಿಸಿ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಕೃಷಿ ತಜ್ಞರ ಜೊತೆ ಸಂವಾದ ನಡೆಸಬೇಕು. ಯುರಿಯಾ ಬಳಕೆ ತಗ್ಗಿಸಲು ಯೂರಿಯಾಗೆ ಪರ್ಯಾಯವಾಗಿ ಜೈವಿಕ, ಹಸಿರೆಲೆ, ಸಾವಯವ ಗೊಬ್ಬರದ ಬಳಕೆಯನ್ನು ಉತ್ತೇಜಿಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರು ಮಳೆ, ಬಿತ್ತನೆಯ ಪ್ರಗತಿ, ರಸಗೊಬ್ಬರ, ಭತ್ತದ ಬೆಳೆಯ ಸರಾಸರಿ ಇಳುವರಿ, ಮಾರಾಟ ಮಳಿಗೆಗಳ ವಿವರ ನೀಡಿದರು.ಸಭೆಯಲ್ಲಿ ಕೃಷಿ ಅಧಿಕಾರಿಗಳಾದ ಹರ್ಷ, ಮುನೇಗೌಡ, ಡಾ.ಭಾನುಪ್ರಕಾಶ್ ಉಪಸ್ಥಿತರಿದ್ದರು.