ಸಾರಾಂಶ
- ನಗರ, ಗ್ರಾಮೀಣ ಜನರಿಗೆ ಶುದ್ಧ ನೀರು ಪೂರೈಸಲು ಗುಂಜನ್ ಕೃಷ್ಣ ತಾಕೀತು । ಸಾವಯವ ಹಣ್ಣು, ತರಕಾರಿ, ಬೆಳೆ ಬೆಳೆಯಲು ಪ್ರೋತ್ಸಾಹಿಸಲು ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮುಂಗಾರು ಹಂಗಾಮು ಆರಂಭವಾದ ಹಿನ್ನೆಲೆ ಜಿಲ್ಲೆಯಲ್ಲಿ ಬಿತ್ತನೆಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚಿಸಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಗುಣಮಟ್ಟದ ಬಿತ್ತನೆಬೀಜ ಸಿಗಬೇಕು. ಇದರಿಂದ ಉತ್ತಮ ಇಳುವರು ಪಡೆಯಲು ಸಾಧ್ಯ ಎಂದರು.
ಪೂರ್ವ ಮುಂಗಾರಿನಲ್ಲಿ ಕಡಿಮೆ ದಿನಗಳಲ್ಲಿ ಬರುವ ತರಕಾರಿ ಬೆಳೆಯಲು ಪ್ರೋತ್ಸಾಹಿಸಿ, ಜೊತೆಗೆ ದ್ವಿದಳ ಧಾನ್ಯ ಬೆಳೆಯಲು ಹೆಚ್ಚಿನ ಒತ್ತನ್ನು ನೀಡಬೇಕು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಡಿ ಹೂವು, ತರಕಾರಿ ಬೆಳೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ದೀರ್ಘಕಾಲೀನ ಹಾಗೂ ವಿಶೇಷವಾದ ಹಣ್ಣು, ತರಕಾರಿಗಳ ಬೆಳೆಗೆ ಒತ್ತು ನೀಡಬೇಕು. ಸಾವಯವ ಕೃಷಿಯಿಂದ ಬೆಳೆಯುವ ತೋಟಗಾರಿಕೆ, ಕೃಷಿಗೆ ಒತ್ತು ನೀಡಬೇಕು ಎಂದು ತೋಟಗಾರಿಕೆ, ಕೃಷಿ ಅಧಿಕಾರಿಗಳಿಗೆ ತಿಳಿಸಿದರು.ಉದ್ಯೋಗ ಖಾತ್ರಿಯಡಿ ಜಲ ಸಂರಕ್ಷಣೆಗಾಗಿ ರೈತರ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಚೆಕ್ ಡ್ಯಾಂ, ಇಂಗುಗುಂಡಿ ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುವಂತೆ, ಇಂಗುವಂತೆ ನೋಡಿಕೊಂಡಲ್ಲಿ ಬೇಸಿಗೆ ಎದುರಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ ಮಾತನಾಡಿ, ಜಿಲ್ಲೆಯಲ್ಲಿ ಉಪಚಾರವಾಗದ 60 ಸಾವಿರ ಹೆಕ್ಟೇರ್ ಇದ್ದು, ಈಗಾಗಲೇ 1.80 ಲಕ್ಷ ಹೆಕ್ಟೇರ್ ಉಪಚಾರವಾದ ಜಲಾನಯನ ಪ್ರದೇಶವಿದೆ. ಉದ್ಯೋಗ ಖಾತ್ರಿಯಡಿ ಇಂತಹ ಪ್ರದೇಶದಲ್ಲಿ ಈ ವರ್ಷ ಜಲಸಂರಕ್ಷಣಾ ಕಾಮಗಾರಿ ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸ ಮನೆಗಳ ನಿರ್ಮಾಣಕ್ಕೆ ಪರವಾನಗಿ ನೀಡುವ ವೇಳೆ ಕಡ್ಡಾಯವಾಗಿ ಮಳೆ ನೀರುಕೊಯ್ಲು ಮಾಡಿಕೊಳ್ಳುವ ಷರತ್ತಿನೊಂದಿಗೆ ಅನುಮತಿ ನೀಡಬೇಕು ಎಂದರು.ಕುಡಿಯುವ ನೀರು ಪೂರೈಸುವ ಮೊದಲು ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ನೀರಿನ ಮೂಲ, ಪೈಪ್‍ಲೈನ್, ಟ್ಯಾಂಕ್‍ಗಳಲ್ಲಿ ನೀರನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡಿದ ನಂತರವೇ ಪೂರೈಸಬೇಕು. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯಾ ಸಂಸ್ಥೆಗಳ ಮುಖ್ಯಸ್ಥರ ಜವಾಬ್ದಾರಿ ಇದಾಗಿದೆ. ಗ್ರಾಮಾಂತರದಲ್ಲಿ ಪಿಡಿಒ, ಕಿರಿಯ ಎಂಜಿನಿಯರ್‌ಗಳು ನೀರಿನ ಪರೀಕ್ಷೆ ನಡೆಸಿ ಪೂರೈಕೆ ಮಾಡಬೇಕು. ಕಲುಷಿತ ನೀರು ಪೂರೈಕೆಯಾದಲ್ಲಿ ಸ್ಥಳೀಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಚರಂಡಿಯೊಂದಿಗೆ ಕುಡಿಯುವ ನೀರಿನ ಪೈಪ್‍ಲೈನ್ ಇರಬಾರದು ಎಂದು ಹೇಳಿದರು.
ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ 799 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, 761 ಕಾರ್ಯ ನಿರ್ವಹಿಸುತ್ತಿವೆ. 34 ಘಟಕಗಳಿಗೆ ನೀರು ಪೂರೈಕೆ ಇಲ್ಲದ ಕಾರಣ, 4 ಇತರೆ ಕಾರಣಕ್ಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದರು. ಆಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
- - -ಟಾಪ್ ಕೋಟ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ವರ್ಷ 215.80 ಕೋಟಿ ಕಾರ್ಮಿಕ ಆಯವ್ಯಯ ಅಂದಾಜಿಸಲಾಗಿದ್ದು, 35 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. ಈವರೆಗೆ 6.13 ಲಕ್ಷ ಮಾನವ ದಿನಗಳ ಸೃಜನೆ ಮಾಡಿ, ₹20.11 ಕೋಟಿ ಕೂಲಿ ಬಾಬ್ತು, ₹10.35 ಕೋಟಿ ಸಾಮಗ್ರಿ ಬಾಬ್ತು ಖರ್ಚು ಮಾಡಲಾಗಿದೆ - ಸುರೇಶ ಬಿ. ಇಟ್ನಾಳ್, ಸಿಇಒ, ಜಿಪಂ
- - - -14ಕೆಡಿವಿಜಿ2:ದಾವಣಗೆರೆ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.