ಸಾರಾಂಶ
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಜನ ಸಂಪರ್ಕ ಸಭೆ । ದೂರು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆಕನ್ನಡಪ್ರಭ ವಾರ್ತೆ ತಿಪಟೂರು
ಗಡಿಭಾಗದ ಜನರ ಹಿತದೃಷ್ಟಿಯಿಂದ ಅವರ ಸಮಸ್ಯೆಗಳನ್ನು ಆಲಿಸಲು ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ. ಜನರು ಜಿಲ್ಲಾಕೇಂದ್ರಗಳಿಗೆ ಬಂದು ಹೋಗಲು ಬಹಳ ದೂರ ಹಾಗೂ ಸಮಯದ ಅಭಾವವನ್ನು ತಪ್ಪಿಸಲು ಆಯಾ ಹೋಬಳಿಯ ಪೊಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆಯನ್ನು ನಡೆಸಿ ಕುಂದುಕೊರತೆ ನಿವಾರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಕೆ. ತಿಳಿಸಿದರು.ತಾಲೂಕಿನ ಹೋಬಳಿ ಕೇಂದ್ರವಾದ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ವೈಯಕ್ತಿಕವಾಗಲಿ ಅಥವಾ ಸಾರ್ವಜನಿಕವಾಗಲಿ ಯಾವುದೇ ಸಮಸ್ಯೆಯಿದ್ದರೂ ತುಮಕೂರು ಎಸ್‌ಪಿ ಕಚೇರಿಗೆ ನೇರವಾಗಿ ಬಂದು ದೂರು ನೀಡಬಹುದು. ಪೊಲೀಸ್ ಎಂದರೆ ಭಯ ಪಡುವ ಅವಶ್ಯಕತೆ ಇಲ್ಲ. ನಿರ್ಭೀತಿಯಿಂದ ಠಾಣೆಗೆ ಬಂದು ನಿಮ್ಮ ಕುಂದು ಕೊರತೆಗಳ ಬಗ್ಗೆ ದೂರು ನೀಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಪ್ರಮುಖವಾಗಿ ಹೋನ್ನವಳ್ಳಿ ಹೋಬಳಿ ಕೇಂದ್ರದ ರಸ್ತೆ ಬದಿಯಲ್ಲಿನ ಒತ್ತುವರಿಯಾಗಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ದೂರು ಸಲ್ಲಿಸಿದರು.ಗೃಹ ರಕ್ಷಕದಳದ ಸಿಬ್ಬಂದಿ ಎಚ್.ಆರ್. ಶಂಕರ್ ಮಾತನಾಡಿ, ಕೋವಿಡ್ ಸಮಯದಲ್ಲಿ ಬಿದರೆಗುಡಿಯ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿರುವ ನಮಗೆ ಮೂರು ವರ್ಷಗಳು ಕಳೆದರೂ ಸಂಬಳ ನೀಡಿರುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಹೊನ್ನವಳ್ಳಿಯಲ್ಲಿ ದೇವಸ್ಥಾನ ಹಾಗೂ ಶಾಲೆಗಳ ಹತ್ತಿರವೇ ಎರಡು ವೈನ್‌ಶಾಪ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ಹಾಗು ದೇವಸ್ಥಾನಕ್ಕೆ ಬಂದು ಹೋಗುವ ಭಕ್ತರಿಗೆ ತುಂಬಾ ತೊಂದರೆಯಾಗುತ್ತಿದೆ. ಮದ್ಯದಂಗಡಿಗಳನ್ನು ತೆರವು ಮಾಡಬೇಕೆಂದು ಸಾರ್ವಜನಿಕರು ದೂರು ಸಲ್ಲಿಸಿದರು.ಸಭೆಯಲ್ಲಿ ಸಾರ್ವಜನಿಕರಿಂದ ಹತ್ತಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೂಡಲೆ ತುರ್ತುಕ್ರಮ ಕೈಗೊಳ್ಳುವಂತೆ ಹೊನ್ನವಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಹೊನ್ನವಳ್ಳಿ ಸಬ್‌ಇನ್ಸ್‌ಪೆಕ್ಟರ್ ರಾಜೇಶ್ ಸೇರಿದಂತೆ ಠಾಣೆಯ ಸಿಬ್ಬಂದಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರುಗಳಿದ್ದರು.ಕೋಟ್..................
ರಾಜ್ಯದಲ್ಲಿ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲಿಯೂ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು. ಕುಡಿದು ವಾಹನ ಚಲಾಯಿಸುವುದು, ಅತಿ ವೇಗವಾಗಿ ಪ್ರಯಾಣ ಮಾಡುವುದು ಕಾನೂನು ಬಾಹಿರ. ನಿಮ್ಮನ್ನೆ ನಂಬಿ ನಿಮ್ಮ ಕುಟುಂಬವಿರುತ್ತದೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನೀವು ಸಾವನ್ನಪ್ಪವುದಲ್ಲದೆ ನಿಮ್ಮ ಕುಟುಂಬವನ್ನು ಬೀದಿಪಾಲು ಮಾಡಬೇಡಿ.-ಅಶೋಕ್ ವೆಂಕಟ್ ಕೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಫೋಟೋ 15-ಟಿಪಿಟಿ2ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ಎಸ್ಪಿ ಅಶೋಕ್.