ಕೆಂಪೇಗೌಡ ಲೇಔಟಲ್ಲಿಅರ್ಕಾವತಿ ಸಂತ್ರಸ್ತರಿಗೆ ನಿವೇಶನ: ರೈತರು ಗರಂ

| Published : Mar 20 2024, 01:45 AM IST / Updated: Mar 20 2024, 12:07 PM IST

ಸಾರಾಂಶ

ಅರ್ಕಾವತಿ ಸಂತ್ರಸ್ತರಿಗೆ ಕೆಂಪೇಗೌಡ ಲೇಔಟ್‌ನಲ್ಲಿ ಜಾಗ ನೀಡಲಾಗಿದೆ. ಆದರೆ ಕೆಂಪೇಗೌಡ ಲೇಔಟ್‌ಗೆ ಜಾಗ ಕೊಟ್ಟ ರೈತರಿಗೆ ಪರಿಹಾರವನ್ನೇ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡ ಬಡಾವಣೆ(ಎನ್‌ಪಿಕೆಎಲ್‌) ನಿರ್ಮಾಣಕ್ಕೆ ಭೂಮಿ ನೀಡಿರುವ ನೂರಾರು ರೈತರಿಗೆ ದಶಕ ಕಳೆದಿದ್ದರೂ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದೇ ಬಡಾವಣೆಯಲ್ಲಿ ಅರ್ಕಾವತಿ ಲೇಔಟ್‌ ರೈತರಿಗೆ ಆದ್ಯತೆ ನೀಡಿ ಪರಿಹಾರ ನೀಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಎನ್‌ಪಿಕೆಎಲ್‌ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಮೊದಲು ಪರಿಹಾರ ಒದಗಿಸಲು ಬಿಡಿಎ ಆದ್ಯತೆ ಕೊಡುವ ಬದಲು ಅರ್ಕಾವತಿ ಬಡಾವಣೆಯ ರೈತರಿಗೆ ಕೆಂಪೇಗೌಡ ಲೇಔಟ್‌ನಲ್ಲಿ ನಿವೇಶನಗಳನ್ನು ಪರಿಹಾರವಾಗಿ ಕೊಟ್ಟಿದೆ. 

ಈಗ ಕೆಂಪೇಗೌಡ ಬಡಾವಣೆ ರೈತರಿಗೆ ಪರಿಹಾರ ಕೊಡಲು ಜಾಗವಿಲ್ಲ ಎನ್ನುತ್ತಿದೆ. ಜೊತೆಗೆ ಕೆಲ ರೈತರ ಬಾಯಿ ಮುಚ್ಚಿಸಲು ಜೌಗು ಪ್ರದೇಶವಿರುವ ಕಡೆ ನಿವೇಶನ ಹಂಚಿಕೆ ಮಾಡಿ ವಂಚಿಸುತ್ತಿದೆ ಎಂದು ಅನೇಕ ರೈತರು ಆರೋಪಿಸಿದ್ದಾರೆ.

ಕೆಂಪೇಗೌಡ ಬಡಾವಣೆಗೆ ಭೂಮಿ ಕೊಟ್ಟಿರುವ ಕೆಲ ರೈತರಿಗೆ ಅರ್ಧದಷ್ಟು ಪರಿಹಾರ ನೀಡಲಾಗಿದೆ. ಇನ್ನು ಕೆಲವರಿಗೆ ಜೌಗು ಪ್ರದೇಶದಲ್ಲಿ ನಿವೇಶನ ಕೊಟ್ಟಿದ್ದು, ಹಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. 

ಕೆಂಚನಪುರದಲ್ಲಿ 3 ಎಕರೆ ಜಮೀನು ಕೊಟ್ಟಿದ್ದೇನೆ. ಕೆರೆ ಜಾಗದ ಜೌಗು ಪ್ರದೇಶದಲ್ಲಿ ಪರಿಹಾರ್ಥವಾಗಿ ಅರ್ಧದಷ್ಟು ಭೂಮಿ ಕೊಟ್ಟಿದ್ದಾರೆ. ಇನ್ನುಳಿದ ಅರ್ಧಕ್ಕೆ ಜಾಗ ಇಲ್ಲ ಎನ್ನುತ್ತಿದ್ದಾರೆ. 

ಹಿಂದೆ ಅಭಿವೃದ್ಧಿಪಡಿಸಿದ ಜಾಗದಲ್ಲಿ ಪರಿಹಾರಾರ್ಥ ನಿವೇಶನ ಬೇಡವೆಂದವರಿಗೆ ಪ್ರತಿ ಎಕರೆಗೆ ₹80 ಲಕ್ಷ ಮತ್ತು 30-40 ಅಳತೆಯ ನಿವೇಶನವನ್ನು ಪ್ರೋತ್ಸಾಹದಾಯಕವಾಗಿ ನೀಡುವುದಾಗಿ ಬಿಡಿಎ ತಿಳಿಸಿತ್ತು. ಆದರೆ ಈಗ ಏನನ್ನೂ ಕೊಟ್ಟಿಲ್ಲ ಎಂದು ಭೂಮಿ ನೀಡಿರುವ ರೈತ ಚನ್ನಪ್ಪ ಅಲವತ್ತುಕೊಂಡಿದ್ದಾರೆ.

4,043 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ 2694 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ತಂಡಕ್ಕೆ ಹಸ್ತಾಂತರಿಸಲಾಗಿದೆ. ಎಂಜಿನಿಯರಿಂಗ್ ತಂಡ 2200 ಎಕರೆಯಲ್ಲಿ ನಿವೇಶನಗಳನ್ನು ನಿರ್ಮಿಸಿದ್ದು, ಇನ್ನೂ 400 ಎಕರೆಯಷ್ಟು ಬಡಾವಣೆ ನಿರ್ಮಾಣ ಮಾಡಬೇಕಿದೆ. 

ಒಟ್ಟಾರೆ 1,300 ಎಕರೆ ಬಾಕಿಯಿದೆ. ಇದರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ 600 ಎಕರೆಗೆ ಆದೇಶ ಬಂದಿದೆ. 800 ಎಕರೆ ಭೂಮಿ ರೆವಿನ್ಯೂ ಲೇಔಟ್, ಸರ್ಕಾರಿ ಜಾಗ ವಶಕ್ಕೆ ಪಡೆಯಲು ಹಲವು ಸಮಸ್ಯೆಗಳು ಅಡ್ಡಿಪಡಿಸುತ್ತಿವೆ.

ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ಕೊಟ್ಟ ರೈತರಿಗೆ ಮೊದಲ ಆದ್ಯತೆ ನೀಡದೆ, ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಇಲ್ಲಿ ನಿವೇಶನಗಳನ್ನು ನೀಡಿದೆ. 

ಇದರಿಂದ ಇನ್ನೂ ಭೂಸ್ವಾಧೀನಕ್ಕೆ ಬಾಕಿ ಇರುವ ಜಮೀನುಗಳ ರೈತರು ಭೂಮಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಆರೋಪಿಸಿದೆ.