ಮೊದಲು ಕನ್ನಡ ಮಾತನಾಡಿ, ಅನ್ಯಭಾಷಿಗರಿಗೂ ಕಲಿಸಿ: ಡಾ.ರಮೇಶ್‌

| Published : Nov 02 2024, 01:15 AM IST

ಸಾರಾಂಶ

ನಮ್ಮ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಉದ್ಯಮ ಮತ್ತು ಕಚೇರಿಗಳಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ ಅಧಿಕಾರಿ ಮತ್ತು ನೌಕರರು ಕಡ್ಡಾಯವಾಗಿ ರಾಜ್ಯ ಭಾಷೆಯನ್ನು ಕಲಿತು ಬಳಸಬೇಕೆಂಬ ನಿಯಮವಿದೆ. ಆದರೆ, ಕನ್ನಡಿಗರಾದ ನಾವೆಷ್ಟು ಉದಾರಿಗಳೆಂದರೆ ಹೊರಗಿನಿಂದ ಬಂದವರು ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದರೂ ಕೂಡ ನಾವೇ ಅವರಿಗೆ ಅವಕಾಶ ಕೊಡುತ್ತಿಲ್ಲ.

ಕನ್ನಡಪ್ರಭವಾರ್ತೆ ನಾಗಮಂಗಲ

ಕನ್ನಡ ಕಲಿತರೆ ಅವರ ಬದುಕು ಸುವರ್ಣ ಆಗುತ್ತದೆಂಬ ಮನೋಧರ್ಮ ಬೆಳೆಸಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಕರ್ನಾಟಕದ ಹಲವು ಪ್ರಥಮಗಳು ಇಲ್ಲಿವೆ. ಕನ್ನಡವನ್ನು ಹೆಚ್ಚು ಬಳಸುವ ಜೊತೆಗೆ ಸಾಧ್ಯವಾದಷ್ಟು ಬೇರೆಯವರೊಂದಿಗೆ ಕನ್ನಡದಲ್ಲೇ ಮಾತನಾಡಿ ಅನ್ಯಭಾಷಿಗರಿಗೂ ಸಹ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡಬೇಕಿದೆ ಎಂದು ಸಾಹಿತಿ ಹಾಗೂ ಉಪನ್ಯಾಸಕ ಡಾ.ನೀ.ಗೂ.ರಮೇಶ್ ಹೇಳಿದರು.

ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ನಮ್ಮ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಉದ್ಯಮ ಮತ್ತು ಕಚೇರಿಗಳಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ ಅಧಿಕಾರಿ ಮತ್ತು ನೌಕರರು ಕಡ್ಡಾಯವಾಗಿ ರಾಜ್ಯ ಭಾಷೆಯನ್ನು ಕಲಿತು ಬಳಸಬೇಕೆಂಬ ನಿಯಮವಿದೆ. ಆದರೆ, ಕನ್ನಡಿಗರಾದ ನಾವೆಷ್ಟು ಉದಾರಿಗಳೆಂದರೆ ಹೊರಗಿನಿಂದ ಬಂದವರು ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದರೂ ಕೂಡ ನಾವೇ ಅವರಿಗೆ ಅವಕಾಶ ಕೊಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕನ್ನಡ ಹಲವಾರು ಭಾಷೆಗಳನ್ನು ಅರಗಿಸಿಕೊಂಡಿದೆ. ಕನ್ನಡದ ಜೊತೆಗೆ ಬೇರೆ ಯಾವ ಭಾಷೆಯನ್ನಾದರೂ ಸೇರಿಸಿಕೊಂಡು ನೋಡಲು ನಾವು ರಾಜಿಯಾಗುತ್ತೇವೆ. ಆದರೆ ಬೇರೆ ಭಾಷೆಯ ಜೊತೆಗೆ ಮತ್ತೊಂದು ಭಾಷೆಯನ್ನು ಸೇರಿಸಲು ನಾವು ಇಷ್ಟಪಡುವುದಿಲ್ಲ. ಕನ್ನಡ ಎಂಬುದು ಅನ್ನದ ಭಾಷೆಯಾಗಬೇಕೆಂಬ ರಾಜ್ಯ ಸರ್ಕಾರದ ಆಶಯಕ್ಕೆ ಪೂರಕವಾಗಿ ನಾವೂ ಕೂಡ ದನಿಗೂಡಿಸಬೇಕೆಂದರೆ ಕನ್ನಡವನ್ನು ಬಳಸುವುದೊಂದೇ ದಾರಿ ಎಂದರು.

ರಾಷ್ಟ್ರ ಮತ್ತು ನಾಡ ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಜಿ.ಆದರ್ಶ ಮಾತನಾಡಿ, ಕನ್ನಡ ಭಾಷೆ ಕೇವಲ ಹೃದಯದ ಭಾಷೆಯಾಗಿ ಉಳಿದಿಲ್ಲ. ಕನ್ನಡಿಗರ ಉಸಿರು, ಅಸ್ಮಿತೆ, ಬದುಕು, ಪರಂಪರೆ. ಅದಕ್ಕಾಗಿಯೇ ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಾಲೂಕಿನ ಅನೇಕ ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಎಂಬುದು ಕೇವಲ ಒಂದು ಭಾಷೆಯಲ್ಲ ಅದೊಂದು ದೊಡ್ಡ ಶಕ್ತಿ. ಕನ್ನಡದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಪರಿಚಯಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು.

ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಹಿತಿ ಹೆರಗನಹಳ್ಳಿ ದಿನೇಶ್, ಪತ್ರಕರ್ತರ ಗದ್ದೆಭೂವನಹಳ್ಳಿ ದೇವರಾಜು, ಅಶೋಕ್, ಎನ್.ಆರ್.ರಾಜು, ಕೆ.ಪಿ.ರಾಮಕೃಷ್ಣ, ಈಶ್ವರಪ್ಪ, ಎನ್.ನಾಗರಾಜು ಮತ್ತು ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಕಬ್ಬಡಿ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಪಟ್ಟಣದ ಶ್ರೀ ಕುವೆಂಪು ಪ್ರೌಢಶಾಲೆಯ ವಿದ್ಯಾರ್ಥಿ ಪೃತ್ವಿ ಎಂ.ಗೌಡ ಅವರಿಗೆ ಶಿಕ್ಷಣ ಇಲಾಖೆ ವತಿಯಿಂದ ಗೌರವಿಸಲಾಯಿತು.

ಪಟ್ಟಣದ ವಿವಿಧ ಶಾಲಾ ಮಕ್ಕಳು ನಾಡು ನುಡಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪುರಸಭೆ ಅಧ್ಯಕ್ಷ ಅಲೀ ಅನ್ಸರ್ ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ತಾಪಂ ಇಓ ಸತೀಶ್, ಬಿಇಓ ಯೋಗೇಶ್, ಸಹಾಯಕ ಕೃಷಿ ನಿರ್ದೇಶಕ ಹರೀಶ್, ತಾಲೂಕು ಆರೋಗ್ಯಾಧಿಕಾರಿ ರಮೇಶ್, ಸಿಡಿಪಿಓ ಕೃಷ್ಣಮೂರ್ತಿ ಸಾಹಿತಿ ಮಹಮ್ಮದ್ ಕಲೀಂಉಲ್ಲಾ ಸೇರಿದಂತೆ ಹಲವರು ಇದ್ದರು.