ಶುಭ ನುಡಿದು ಜನರ ಸಮಸ್ಯೆ ಮೂಲದಲ್ಲಿಯೇ ಬಗೆಹರಿಸಿ: ಸಿ.ಕೆ.ಮಹೇಂದ್ರ

| Published : Feb 16 2025, 01:46 AM IST

ಶುಭ ನುಡಿದು ಜನರ ಸಮಸ್ಯೆ ಮೂಲದಲ್ಲಿಯೇ ಬಗೆಹರಿಸಿ: ಸಿ.ಕೆ.ಮಹೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರಾದವರು ತಮ್ಮ ಬಳಿ ಬರುವ ರೋಗಿಗಳಿಗೆ ಧೈರ್ಯ ತುಂಬಬೇಕೆ ಹೊರತು ಅವರಿಗಿರುವ ರೋಗದ ಬಗ್ಗೆ ಭಯ ಹುಟ್ಟಿಸಬಾರದು. ಅವರು ಗುಣಮುಖರಾಗುತ್ತಾರೆ ಎಂಬ ಧೈರ್ಯ ಹೇಳಬೇಕು. ಅಂತೆಯೇ ಜ್ಯೋತಿಷಿಗಳೂ ಕೂಡ ಹಾಗೆಯೇ ಶಾಸ್ತ್ರ ಮತ್ತಿತರ ಸಮಸ್ಯೆ ಎಂದು ಬಂದವರನ್ನು ಭಯಪಡಿಸಬಾರದು. ಆದ್ದರಿಂದ ಶುಭ ನುಡಿದರೆ ಅವರ ಅನೇಕ ಸಮಸ್ಯೆ ನಿವಾರಣೆ ಆಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

‘ಶುಭ ನುಡಿಯೇ ಶಕುನದ ಹಕ್ಕಿ’ ಎಂಬ ಬೇಂದ್ರೆಯವರ ಮಾತಿನಂತೆ ವೈದ್ಯರಾಗಲಿ ಜ್ಯೋತಿಷಿಗಳಾಗಲಿ ಬಂದವರಿಗೆ ಶುಭವನ್ನೇ ನುಡಿಯಿರಿ ಎಂದು ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ಶ್ರೀಮಾಯಕಾರ ಗುರುಕುಲವು ಶನಿವಾರ ಆಯೋಜಿಸಿದ್ದ ಪಂಚಾಂಗ ಫಲಗಳು ಗ್ರಂಥ ಬಿಡುಗಡೆ ಹಾಗೂ ಪಿರಮಿಡ್‌ ವಾಸ್ತು ತರಗತಿ ಕಾರ್ಯಕ್ರಮದಲ್ಲಿ ಅವರು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ವೈದ್ಯರಾದವರು ತಮ್ಮ ಬಳಿ ಬರುವ ರೋಗಿಗಳಿಗೆ ಧೈರ್ಯ ತುಂಬಬೇಕೆ ಹೊರತು ಅವರಿಗಿರುವ ರೋಗದ ಬಗ್ಗೆ ಭಯ ಹುಟ್ಟಿಸಬಾರದು. ಅವರು ಗುಣಮುಖರಾಗುತ್ತಾರೆ ಎಂಬ ಧೈರ್ಯ ಹೇಳಬೇಕು. ಅಂತೆಯೇ ಜ್ಯೋತಿಷಿಗಳೂ ಕೂಡ ಹಾಗೆಯೇ ಶಾಸ್ತ್ರ ಮತ್ತಿತರ ಸಮಸ್ಯೆ ಎಂದು ಬಂದವರನ್ನು ಭಯಪಡಿಸಬಾರದು. ಆದ್ದರಿಂದ ಶುಭ ನುಡಿದರೆ ಅವರ ಅನೇಕ ಸಮಸ್ಯೆ ನಿವಾರಣೆ ಆಗುತ್ತದೆ ಎಂದರು.

ದೇವರ ಅಸ್ತಿತ್ವದ ಬಗ್ಗೆ ಅನೇಕರಿಗೆ ಜಿಜ್ಞಾಸೆ ಇದೆ. ಆದರೆ ನಾವು ಒಬ್ಬ ದೇವರನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮನುಷ್ಯ ಜೀವಿಸುವುದು ಕಷ್ಟವಾಗುತ್ತದೆ. ದೇವರು ಇಲ್ಲವಾದರೆ ನಮ್ಮ ನೋವು ಹೇಳಿಕೊಳ್ಳಲಾಗದೆ ಎಷ್ಟೊ ಮಂದಿ ಮೃತಪಡುತ್ತಿದ್ದರು ಎಂಬುದಾಗಿ ಹೇಳಿದರು.

ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ಗುರುಕುಲದ ಸಂಸ್ಥಾಪಕ ಮೂಗೂರು ಮಧುದೀಕ್ಷಿತ್, ಪಂಚಾಂಗ ಫಲಗಳು ಗ್ರಂಥದ ಲೇಖಕ ಎಸ್. ಪ್ರಾಣೇಶ್, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕೇಶವಸ್ವಾಮಿ, ಶ್ರೀ ಮಾಯಕಾರ ಗುರುಕುಲದ ಹಿರಿಯ ವಿದ್ಯಾರ್ಥಿ ಎಂ ಎಸ್ ರಾಮನಾಥ ಗುಪ್ತ, ವಿದ್ಯಾರ್ಥಿ ವೃಂದದವರು ಇದ್ದರು.

ಸುತ್ತೂರು ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣೆ

ಕನ್ನಡಪ್ರಭ ವಾರ್ತೆ ಸುತ್ತೂರು

ಜೆಎಸ್‌ಎಸ್ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುಖ್ಯಅತಿಥಿಯಾಗಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ರೇವಣ್ಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬಳಸಿಕೊಂಡು ಕ್ರೀಡೆ ಹಾಗೂ ಇತರೆ ಸ್ಪರ್ಧೆಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದು ನಿಮ್ಮ ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ವಿಷಯ ಪರಿವೀಕ್ಷಕ ಚನ್ನಬಸಪ್ಪ ಮಾತನಾಡಿ, ಪಠ್ಯದ ಜೊತೆ ಸಹಪಠ್ಯ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಕಡೆ ಗಮನಹರಿಸಬೇಕು ಎಂದರು.

ಮುಖ್ಯೋಪಾಧ್ಯಾಯರಾದ ಮ.ಗು.ಬಸವಣ್ಣ, ಜಿ.ಎಂ. ಷಡಕ್ಷರಿ, ಜಿ.ಶಿವಸ್ವಾಮಿ ಇದ್ದರು.