ಗೋವಾದ ಪಣಜಿಯಲ್ಲಿ ನಡೆದ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಎಸೋಸಿಯೇಶನ್ ಭಾರತ ವಲಯ-8 ಪ್ರಥಮ ಸಮ್ಮೇಳನದಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭಾಗವಹಿಸಿದ್ದರು.

ಮಂಗಳೂರು: ಗೋವಾದ ಪಣಜಿಯಲ್ಲಿ ನಡೆದ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಎಸೋಸಿಯೇಶನ್ ಭಾರತ ವಲಯ-8 ಪ್ರಥಮ ಸಮ್ಮೇಳನದಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭಾಗವಹಿಸಿದ್ದರು.

ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಯುವ ನಾಯಕತ್ವ ಎಂಬ ಪದ ಹೆಚ್ಚು ಬಳಸಲಾಗುತ್ತದೆ. ಆದರೆ ಯುವ ಶಾಸಕರನ್ನು ಕೇವಲ ವಯಸ್ಸಿನ ಆಧಾರದ ಮೇಲೆ ವ್ಯಾಖ್ಯಾನಿಸುವುದು ಸರಿಯಲ್ಲ. ಅವರನ್ನು ಮನಸ್ಥಿತಿಯಿಂದ ವ್ಯಾಖ್ಯಾನಿಸಬೇಕಾಗುತ್ತದೆ. ಹಳೆ ಮನೋಭಾವ, ದೃಷ್ಟಿಕೋನ, ನಾವಿನ್ಯತೆಗೆ ಒಗ್ಗಿಕೊಳ್ಳಲಾರದ ಮನಸ್ಥಿತಿಯನ್ನು ಹೊಂದಿರುವವರು ಯುವಕರಲ್ಲ, ಬದಲಾಗಿ ಹೊಸ ಆಲೋಚನೆಗಳು, ನವೀನ ದೃಷ್ಟಿಕೋನ ಹೊಂದಿರುವವರು ನಿಜವಾಗಿಯೂ ಯುವಕರು ಎಂದರು.

ರಾಜಕೀಯದಲ್ಲಿ ಯುವಕರನ್ನು ಎರಡು ಆಯಾಮಗಳಲ್ಲಿ ನೋಡಬಹುದು. ವಯೋವೃದ್ಧರು ಮತ್ತು ಜ್ಞಾನವೃದ್ಧರು. ಭಾರತದಲ್ಲಿ ಸುಮಾರು ಶೇ. 15-20ರಷ್ಟು ಶಾಸಕರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆದರೆ ಎಷ್ಟು ಜನರು ನಾವೀನ್ಯತೆ, ಧೈರ್ಯ ಮತ್ತು ಜವಾಬ್ದಾರಿಯೊಂದಿಗೆ ಯೋಚಿಸುತ್ತಾರೆ ಎಂಬುದೇ ನಿಜವಾದ ಪ್ರಶ್ನೆ. ಸರಿಯಾದ ಮಾರ್ಗದರ್ಶನ ಮತ್ತು ವ್ಯವಸ್ಥಿತ ತರಬೇತಿ ದೊರೆತರೆ ಇವರು ಸಮಾಜ ಪರಿವರ್ತನೆಯ ಶಕ್ತಿಶಾಲಿ ಚಾಲಕರಾಗಬಹುದು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಶಾಸಕರ ಬೂಟ್‍ಕ್ಯಾಂಪ್ ಹೊಸ ಶಾಸಕರಿಗೆ ಮಾರ್ಗದರ್ಶನ ನೀಡಿ ಹೊಸ ಆಯಾಮವನ್ನು ಪರಿಚಯಿಸಿದೆ. ಇಂತಹ ಕಾರ್ಯಕ್ರಮಗಳನ್ನು ಎಲ್ಲ ರಾಜ್ಯಗಳಲ್ಲೂ ನಡೆಸುವ ಅವಶ್ಯಕತೆಯಿದೆ ಎಂದು ಯು.ಟಿ. ಖಾದರ್‌ ಸಲಹೆ ನೀಡಿದರು.

ಬಜೆಟ್ ಹಂಚಿಕೆಗಳು ಊಹೆಗಳ ಮೇಲೆ ಅಲ್ಲ, ನಿಖರ ಡೇಟಾ ಆಧಾರಿತವಾಗಿರಬೇಕು. ಇದೇ ಸಮಯದಲ್ಲಿ ರುಪಾಯಿ ಬಲವರ್ಧನೆಗಾಗಿ ದೀರ್ಘಾವಧಿಯ ದೃಷ್ಟಿಕೋನ ಅಗತ್ಯ. ರಫ್ತು ಸಾಮರ್ಥ್ಯ ಹೆಚ್ಚಿಸುವುದು, ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ರುಪಾಯಿ ಆಧಾರಿತ ವ್ಯವಹಾರಗಳನ್ನು ಪ್ರೋತ್ಸಾಹಿಸುವುದು ಆರ್ಥಿಕ ಸ್ವಾವಲಂಬನೆಗೆ ದಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೋವಾ ರಾಜ್ಯಪಾಲ ಪುಸಪಾಟಿ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಛತ್ತೀಸ್‍ಗಢ, ಹರಿಯಾಣ, ಕರ್ನಾಟಕ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಅಧ್ಯಕ್ಷರು, ಗೋವಾದ ಕೇಂದ್ರ ಸಚಿವರು, ಸಂಸದರು ಹಾಗೂ ವಿವಿಧ ರಾಜ್ಯಗಳ ಶಾಸಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

------------

ಫೋಟೊ

13ಖಾದರ್‌2