ಮೃತ ಆಟೋ ಚಾಲಕ ಶರೀಫ್‌ ಮನೆಗೆ ಸ್ಪೀಕರ್‌ ಖಾದರ್‌ ಭೇಟಿ

| Published : Apr 17 2025, 12:00 AM IST

ಮೃತ ಆಟೋ ಚಾಲಕ ಶರೀಫ್‌ ಮನೆಗೆ ಸ್ಪೀಕರ್‌ ಖಾದರ್‌ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜತ್ತೂರಿನಲ್ಲಿ ಕೆಲವು ದಿನಗಳ ಹಿಂದೆ ಕೊಲೆಗೀಡಾದ ರೀತಿಯಲ್ಲಿ ಪತ್ತೆಯಾಗಿದ್ದ ಮೂಲ್ಕಿಯ ಕೊಲ್ನಾಡು ನಿವಾಸಿ, ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಮನೆಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಕೆಲವು ದಿನಗಳ ಹಿಂದೆ ಕೊಲೆಗೀಡಾದ ರೀತಿಯಲ್ಲಿ ಪತ್ತೆಯಾಗಿದ್ದ ಮೂಲ್ಕಿಯ ಕೊಲ್ನಾಡು ನಿವಾಸಿ, ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಮನೆಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಕರ್ನಾಟಕ-ಕೇರಳ ಗಡಿಭಾಗದ ಪ್ರದೇಶದಲ್ಲಿ ಅನೇಕ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿದ್ದು, ಕೇರಳ ಪೊಲೀಸರ ಜೊತೆ ಈ ಬಗ್ಗೆ ಮಾತುಕತೆ ನಡೆಸಿ ಕರ್ನಾಟಕ ಹಾಗೂ ಕೇರಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕ್ರಿಮಿನಲ್ ಗಳನ್ನು ಮಟ್ಟ ಹಾಕಲಾಗುವುದು ಎಂದರು.

ನಿಗೂಢವಾಗಿ ಕೊಲೆಯಾದ ಕೊಲ್ನಾಡು ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಹಿನ್ನಲೆ ಹಾಗೂ ಈ ಕೊಲೆಯಲ್ಲಿ ಭಾಗಿಯಾದವರ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು. ಈಗಾಗಲೇ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲು ಕ್ರಮ ವಹಿಸುತ್ತಿದ್ದು ಕೇರಳದ ಎಸ್ಪಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಪಣಂಬೂರು ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆಯೆಂದು ತಿಳಿಸಿದರು.

ಜೊತೆಯಲ್ಲಿದ್ದ ಪಣಂಬೂರು ಉಪವಿಭಾಗದ ಎಸಿಪಿ ಶ್ರೀಕಾಂತ್ ರ ಜೊತೆ ಚರ್ಚಿಸಿದ ಸಭಾಧ್ಯಕ್ಷರು, ನಗರದಲ್ಲಿ ಗಾಂಜಾ ಸಹಿತ ಅಮಲು ಪದಾರ್ಥ ಸೇವನೆ ಮತ್ತು ಮಾರಾಟ ಮಾಡುವವರ ಮೇಲೆ ನಿರಂತರ ಕಣ್ಣು ಇಡುವಂತೆ ಸೂಚಿಸಿದರು.

ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಲ್ಕಿ ನ.ಪಂ. ಮಾಜಿ ಅಧ್ಯಕ್ಷ ಬಿ ಎಂ ಆಸೀಫ್‌, ಸದಸ್ಯರಾದ ಪುತ್ತು ಬಾವ, ಮಂಜುನಾಥ ಕಂಬಾರ ಮತ್ತಿತರರಿದ್ದರು.