ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ಅಕ್ಕ ಪಡೆ ಹಾಗೂ ವಿಜಯ ಮಹಿಳಾ ಸುರಕ್ಷಾ ಪಡೆ ತಂಡಗಳ ಸಂಯುಕ್ತ ಆಶ್ರಯದಲ್ಲಿ ಹಂಪಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ ಮತ್ತು ಭದ್ರತೆಯ ಕುರಿತು ಸೋಮವಾರ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೊಸಪೇಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ಅಕ್ಕ ಪಡೆ ಹಾಗೂ ವಿಜಯ ಮಹಿಳಾ ಸುರಕ್ಷಾ ಪಡೆ ತಂಡಗಳ ಸಂಯುಕ್ತ ಆಶ್ರಯದಲ್ಲಿ ಹಂಪಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ ಮತ್ತು ಭದ್ರತೆಯ ಕುರಿತು ಸೋಮವಾರ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಪಾರಂಪರಿಕ ತಾಣವಾದ ಹಂಪಿಯ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ, ರಥ ಬೀದಿ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಸಾರ್ವಜನಿಕರು ಮತ್ತು ಪ್ರವಾಸಿ ಮಹಿಳೆಯರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಮಿಷನ್ ಸಂಯೋಜಕಿ ವಿದ್ಯಾ ಹಾಗೂ ಜೆಂಡರ್ ಸ್ಪೆಷಲಿಸ್ಟ್ ಅನ್ನಪೂರ್ಣಾ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ’ಮಿಷನ್ ಶಕ್ತಿ’, ’ಬೇಟಿ ಬಚಾವೋ ಬೇಟಿ ಪಡವೋ’ ಮತ್ತು ’ಸಖಿ ಒನ್ ಸ್ಟಾಪ್ ಸೆಂಟರ್’ಗಳ ಸೌಲಭ್ಯಗಳನ್ನು ಮಹಿಳೆಯರು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ವಿವರಿಸಿದರು.ಸಖಿ ಕೇಂದ್ರದ ನಿರ್ವಾಹಕಿ ಬಶೀರಾ ಬಿ. ಅವರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕೇಂದ್ರ ನೀಡುವ ಆಸರೆಯ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ಅಹಿತಕರ ಘಟನೆಗಳು ನಡೆದಾಗ ಅಥವಾ ತುರ್ತು ಸಂದರ್ಭದಲ್ಲಿ ಮಹಿಳಾ ಸಹಾಯವಾಣಿ 181 ಪೊಲೀಸ್ ತುರ್ತು ಸೇವೆ 112, ಮಕ್ಕಳ ಸಹಾಯವಾಣಿ 1098, ಸೈಬರ್ ಕ್ರೈಂ ಸಹಾಯವಾಣಿ 1930ಗೆ ಸಂಪರ್ಕಿಸಬಹುದು. ಅಲ್ಲದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ತಂಡದ ಸದಸ್ಯರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು. ಅಕ್ಕ ಪಡೆ ಮತ್ತು ವಿಜಯ ಮಹಿಳಾ ಸುರಕ್ಷಾ ಪಡೆಯ ಸಿಬ್ಬಂದಿ ಸ್ಥಳದಲ್ಲಿದ್ದ ಮಹಿಳಾ ಪ್ರವಾಸಿಗರೊಂದಿಗೆ ಸಂವಹನ ನಡೆಸಿ, ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ, ಅಕ್ಕ ಪಡೆ ಹಾಗೂ ವಿಜಯ ಮಹಿಳಾ ಸುರಕ್ಷಾ ಪಡೆಯ ಸದಸ್ಯರು ಉಪಸ್ಥಿತರಿದ್ದರು.