ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಅ.2ರಿಂದ ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ’ ಆಯೋಜಿಸಲು ಉದ್ದೇಶಿಸಲಾಗಿ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಬದೋಲೆ ತಿಳಿಸಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ವೇಳಾಪಟ್ಟಿ ನಿಗದಿಪಡಿಸಿ ಕಾಲಮಿತಿಯೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಉಲ್ಲೇಖಿತ ವಾರ್ಷಿಕ ಪ್ರಧಾನ ಸುತ್ತೋಲೆಯಲ್ಲಿ ಸೂಚಿಸಿದ್ದು ಅದರಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
*ರೈತರಿಂದ ರೈತರಿಗಾಗಿ ಕ್ರಿಯಾ ಯೋಜನೆ:ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಯಂತೆ ರೈತರಿಂದ ಸ್ವೀಕೃತವಾದ ಬೇಡಿಕೆ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಆಧ್ಯತಾವಾರು ವಿಂಗಡಿಸಿ ಅದರಲ್ಲಿ ಶೇ. 65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹಾಗೂ ಶೇ.60ರಷ್ಟು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಕಾಮಗಾರಿಗಳ ಗುಚ್ಛ ತಯಾರಿಸುವುದು ಈ ಕಾಮಗಾರಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು.
*ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಆಧ್ಯತೆ:ಶೋಷಿತ ಮಹಿಳೆಯರು, ಅಬಲೆಯರು ಗ್ರಾಮ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದು. ಅವರಿಂದ ಬೇಡಿಕೆ ಸ್ವೀಕರಿಸುವುದಲ್ಲದೆ ಅವರ ಸಮಸ್ಯೆಗಳಿದ್ದಲ್ಲಿ, ಚರ್ಚಿಸಿ ಪರಿಹರಿಸಲು ನೆರವಾಗುವುದು. ಹಾಗೆಯೇ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾಗೂ ಅವಶ್ಯಕ ಶಾಲಾಭಿವೃದ್ಧಿ ಚಟುವಟಿಕೆಗಳನ್ನು ಕಾಮಗಾರಿ ಗುಚ್ಛದಲ್ಲಿ ಸೇರ್ಪಡೆ ಮಾಡುವುದು.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕರ್ನಾಟಕ 2007ರ ಪ್ರಕರಣ 12 ರನ್ವಯ ರಸ್ತೆ ಕಾಮಗಾರಿಗಳಿಗೆ ಮೀಸಲಿಟ್ಟ ಅಂದಾಜು ಮೊತ್ತವು ವಾರ್ಷಿಕ ಕ್ರಿಯಾ ಯೋಜನೆಯ ಒಟ್ಟು ಅಂದಾಜು ವೆಚ್ಚದ ಶೇ.10ರಷ್ಟು ಮೀರತಕ್ಕದಲ್ಲ. ಗ್ರಾಪಂ ಮತ್ತು ಅನುಷ್ಠಾನ ಇಲಾಖೆಗಳಿಂದ ಸಲ್ಲಿಸಲಾಗಿರುವ ಕ್ರಿಯಾ ಯೋಜನೆಗಳನ್ನು ಪರಿಶೀಲಿಸಿ (ಅನುಮೋದಿತ ಕಾಮಗಾರಿಗಳು) ಒಟ್ಟಾರೆ ಜಿಲ್ಲಾ ಹಂತದಲ್ಲಿ ಶೇ.60:40 ಅನುಪಾತ ಮೀರದಂತೆ ನೋಡಿಕೊಳ್ಳುವುದು, ವೈಯಕ್ತಿಕ ಕಾಮಗಾರಿಗಳ ಅನುಷ್ಠಾನದ ಹಂತದಲ್ಲಿ ಫಲಾನುಭವಿಯು ಅಥವಾ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರು. ಮಿತಿಯೊಳಗೆ ತನಗೆ ಬೇಕಾದ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಜಿಪಂ ಸಿಇಒ ಡಾ.ಗಿರೀಶ ಬದೋಲೆ ತಿಳಿಸಿದರು.
ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಜಾಗೃತಿ ವಾಹನದಲ್ಲಿ ಗ್ರಾಮದ ಸಾರ್ವಜನಿಕರು ಕ್ರಿಯಾ ಯೋಜನೆಯಲ್ಲಿ ವಯಕ್ತಿಕ ಬೇಡಿಕೆಗಳನ್ನು ಸಲ್ಲಿಸಲು ಬೇಡಿಕೆ ಪಟ್ಟಿಯನ್ನು ಅಂಗನವಾಡಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ ಮತ್ತು ಹಾಲಿನ ಕೇಂದ್ರಗಳಲ್ಲಿ ಸ್ಥಾಪಿಸಿ ಪ್ರತಿದಿನ ಸ್ವೀಕೃತವಾದ ಬೇಡಿಕೆಗಳನ್ನು ಅ.31ರವರೆಗೆ ಅರ್ಜಿಗಳನ್ನು ಸಂಗ್ರಹಿಸಲಾಗುವುದು ಎಂದು ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ತಿಳಿಸಿದರು.ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೆಲಸ ಖಾತರಿ
ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಲಾಗುವುದು ಎಂದು ಜಿಪಂ ಸಿಇಒ ತಿಳಿಸಿದರು.
ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ. ಗಂಡು ಹೆಣ್ಣಿಗೆ ಸಮಾನ ಕೂಲಿ ಪ್ರತಿ ದಿನಕ್ಕೆ 349ರು. ಗಳ ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ ಹಾಗೂ ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೇತನರಿಗೆ ಶೇ. 50ರಷ್ಟು ರಿಯಾಯಿತಿ. ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ನಿರ್ವಹಿಸುವ ಕೆಲಸಕ್ಕೆ ಅಥವಾ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ.10ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವ ಕುರಿತು. ಮಹಿಳಾ ಭಾಗವಹಿಸುವಿಕೆಯನ್ನು ಕನಿಷ್ಠ ಶೇ.60ಕ್ಕೆ ಹೆಚ್ಚಿಸುವುದು ಸೇರಿದಂತೆ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಲು ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರತಿ ಮನೆ ಮನೆಗೆ ಮಾಹಿತಿಯನ್ನು ತಲುಪಿಸುವುದಾಗಿದೆ ಎಂದು ಡಾ.ಗಿರೀಶ ದಿಲೀಪ ಬದೋಲೆ ತಿಳಿಸಿದರು.