ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ರಾಜ್ಯ ಸರ್ಕಾರ ಸೇರಿದಂತೆ ಸಂಘ-ಸಂಸ್ಥೆ, ಬ್ಯಾಂಕ್, ಕಚೇರಿಗಳು ಮುದ್ರಿಸುವ ಪ್ರತಿ ವರ್ಷದ ಕ್ಯಾಲೆಂಡರ್‌ಗಳಲ್ಲಿ ಇಂಗ್ಲಿಷ್ ಅಂಕಿಗಳ ಬಳಕೆ ಸಾಮಾನ್ಯವಾಗಿದೆ. ಕನ್ನಡದ ಅಂಕಿಗಳ ದಿನದರ್ಶಿಕೆ (ಕ್ಯಾಲೆಂಡರ್) ವಿರಳ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಅಂಕಿಗಳ ವಿಶೇಷ ದಿನದರ್ಶಿಕೆಯೊಂದನ್ನು ಮುದ್ರಿಸಿದೆ.
ಪ್ರತಿ ತಿಂಗಳು ಕನ್ನಡದ ಅಂಕಿಗಳನ್ನೇ ಬಳಸಿ ಸಿದ್ಧ ಮಾಡಿರುವ ದಿನದರ್ಶಿಕೆ. ಕಳೆದ ಮೂರು ವರ್ಷಗಳಲ್ಲಿ ಆಗಿರುವ ಪ್ರಮುಖ ಕಾರ್ಯಕ್ರಮಗಳ ಮಾಹಿತಿಯು ಭಾವಚಿತ್ರ ಸಮೇತ ಅಂದವಾಗಿ ಮುದ್ರಿಸಲಾಗಿದೆ.ಈ ಕುರಿತು ಕನ್ನಡಪ್ರಭದೊಂದಿಗೆ ಮಾಹಿತಿ ಹಂಚಿಕೊಂಡ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸರ್ಕಾರ, ಸಂಘ-ಸಂಸ್ಥೆಗಳ ಕನ್ನಡ ಪರ ನಿಲುವಿನ ಹೊರತಾಗಿಯೂ ಕನ್ನಡ ಅಂಕಿಗಳ ಬಳಕೆಯು ಕನ್ನಡ ಮಾಧ್ಯಮಗಳಲ್ಲಿಯೇ ಮಾಯವಾಗುತ್ತಿದೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿ ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ನಮ್ಮ ಅಂಕಿಗಳು ಇತರ ಭಾಷೆಗಳ ಅಂಕಿಗಳಂತಾಗಿರದೇ ಅವು ಅಕ್ಷರಗಳು ಹೌದು. ನಮ್ಮ ಭವಿಷ್ಯದಿಂದ ಕಣ್ಮರೆಯಾಗಬಾರದು ಎಂಬ ಉದ್ದೇಶದಿಂದ ಸಂಘದ ಕಾರ್ಯಾಕಾರಿ ಮಂಡಳಿಯ ಸದಸ್ಯರು ಹಾಗೂ ಸಂಘದ ಹಿತೈಸಿಗಳು ಹಣ ಕೂಡಿಸಿ 5 ಸಾವಿರ ದಿನದರ್ಶಿಕೆ ಪ್ರತಿಗಳನ್ನು ಮುದ್ರಿಸಿದ್ದೇವೆ ಎಂದರು.
ಸಂಘದ ಆಜೀವ ಸದಸ್ಯರಿಗೆ ಈ ಪ್ರತಿ ನೀಡುತ್ತಿದ್ದು, ಯಾವ ದಿನ ಯಾವ ದತ್ತಿ ಕಾರ್ಯಕ್ರಮವಿದೆ. ಸಂಘವು ಏನೆಲ್ಲಾ ಕಾರ್ಯಕ್ರಮ ಮಾಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇದೆ. ಬರೀ ದಿನದರ್ಶಿಕೆ ಮುದ್ರಣ ಮಾತ್ರವಲ್ಲದೇ ಸಂಘವು ನಿತ್ಯದ ತನ್ನ ಕಾರ್ಯಚಟುವಟಿಕೆಗಳನ್ನು ಅದರಲ್ಲೂ ಲೆಕ್ಕಪತ್ರಗಳನ್ನು ಸಹ ಕನ್ನಡದಲ್ಲಿಯೇ ಮಾಡುತ್ತಿರುವುದು ವಿಶೇಷ. ದಿನದರ್ಶಿಕೆಯಲ್ಲಿ ಮಹತ್ವದ ದಿನಗಳು, ಸಾರ್ವಜನಿಕ ರಜೆ ಅಂತಹ ಸಾಮಾನ್ಯ ಮಾಹಿತಿ ಇದೆಯೇ ಹೊರತು ಎಲ್ಲೂ ಮೌಢ್ಯ (ರಾಹು ಕಾಲ-ಗುಳಿಗಾಲ) ಬಿಂಬಿಸುವ ಅಂಶಗಳನ್ನು ಪ್ರಕಟಿಸಿಲ್ಲ ಎಂದರು. ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡಕ್ಕೆ ಅಪಾಯ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಕನ್ನಡಪರ ಸಂಸ್ಥೆಗಳು ಬರೀ ಭಾಷೆ ಜತೆಗೆ ಕನ್ನಡದ ಅಂಕಿಗಳನ್ನು ಸಹ ಉಳಿಸಿ ಪಸರಿಸುವ ಕನ್ನಡ ಅಂಕಿಗಳ ದಿನದರ್ಶಿ ಪ್ರಕಟಿಸುವ ಕಾರ್ಯ ಮಾಡಬೇಕಿದೆ. ಈ ವಿಷಯದಲ್ಲಿ ವಿದ್ಯಾವರ್ಧಕ ಸಂಘದ ಪ್ರಯತ್ನ ಶ್ಲಾಘನೀಯ ಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು.