ಸಾರಾಂಶ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಇಲ್ಲಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಂಗಳವಾರ ದುರ್ಗಾದೇವಿಗೆ ವಿಶೇಷ ಹೂವಿನ ಪೂಜೆ ನಡೆಸಲಾಯಿತು.ದುರ್ಗಾಷ್ಟಮಿ ಹಿನ್ನೆಲೆಯಲ್ಲಿ ದೇವಿ ಮಹಾದುರ್ಗೆಯಾಗಿ ಸರ್ವಾಲಂಕಾರಭೂಷಿತಳಾಗಿ ದೇವಲೋಕದಲ್ಲಿ ದೇವತೆಗಳಿಗೆ ಅಭಯ ನೀಡಿದ ದಿನವಾಗಿರುವುದರಿಂದ ಭಕ್ತರಿಂದ ನಾನಾ ಸುಗಂಧಭರಿತ ಪುಷ್ಪಗಳಿಂದ ಅಲಂಕರಿಸಿ ಆರಾಧಿಸಲಾಯಿತು. ಬೆಳಿಗ್ಗೆ ದುರ್ಗೆಗೆ ವಿಶೇಷ ಅಲಂಕಾರ ಮಾಡಿ, ಅಶ್ವರೋಹಿಣಿ ದುರ್ಗಾ ಪೂಜಾ ಪಾರಾಯಣ ಅರ್ಚಕ ಸುಬ್ರಮಣ್ಯ ಭಟ್ ಸಂಗಡಿಗರ ನೇತೃತ್ವದಲ್ಲಿ ನೆರವೇರಿತು.ದೇವಾಲಯ ಆವರಣವನ್ನು ನಾನಾ ಬಗೆ ಪುಷ್ಪಗಳಿಂದ ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು. ಆಹ್ವಾನಿತ ಕಲಾವಿದರಿಂದ ದೇವಿ ಗೀತಾಮೃತ ಭಕ್ತಿ ಗಾನಸುಧೆ ನಡೆಯಿತು.ಇಂದು ನವರಾತ್ರಿ ಜನಜಾಗೃತಿ ಧರ್ಮಸಭೆ :ಬಾಳೆಹೊನ್ನೂರು: 16ನೇ ವರ್ಷದ ದುರ್ಗಾ ಪೂಜಾ ಮಹೋತ್ಸವದ ಅಂಗವಾಗಿ ಅ.1ರ ಬುಧವಾರ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸಿಂಹವಾಹಿನಿ, ಶ್ರೀದುರ್ಗಾ ಹಾಗೂ ರಾಜರಾಜೇಶ್ವರಿ ಪೂಜಾ ಪಾರಾಯಣ, ಶ್ರೀದೇವಿ ಸನ್ನಿಧಿಯಲ್ಲಿ ಆಯುಧ ಪೂಜೆ ನಡೆಯಲಿದೆ.ಸಂಜೆ ನವರಾತ್ರಿ ಜನಜಾಗೃತಿ ಧರ್ಮಸಭೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ವಾಗ್ಮಿ ಡಾ.ಸುಧೀರ್ ರಾಜ್ ಅರಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ, ಉದ್ಯಮಿ ವಿಶ್ವನಾಥ್ ಗದ್ದೆ ಮನೆ ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.ರಾತ್ರಿ 8 ಗಂಟೆಗೆ ಭಕ್ತಾಧಿಗಳಿಂದ ವಿವಿಧ ಪೂಜಾ ಸೇವೆ, ಮಹಾಮಂಗಳಾರತಿ ನಡೆಯಲಿದೆ. ನಂತರ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ಅ.2ರಂದು ಬೆಳಿಗ್ಗೆ 7ರಿಂದ ಶ್ರೀ ಗಜಲಕ್ಷ್ಮಿ ಪೂಜಾ ಪಾರಾಯಣ, ದುರ್ಗಾಹೋಮ ನಡೆಯಲಿದೆ. ಮಧ್ಯಾಹ್ನ 2.30ರಿಂದ ದುರ್ಗಾದೇವಿ ಜಲಸ್ತಂಭನಾ ಶೋಭಾಯಾತ್ರೆ ಆರಂಭಗೊಂಡು, 20ಕ್ಕೂ ಅಧಿಕ ಕಲಾತಂಡ ಗಳೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಗುವುದು. ರಾತ್ರಿ 8 ಗಂಟೆಗೆ ದುರ್ಗಾದೇವಿ ಜಲಸ್ತಂಭನಕ್ಕೂ ಮುನ್ನ ಭದ್ರಾನದಿ ತಟದಲ್ಲಿ ಭದ್ರಾರತಿ ಕಾರ್ಯಕ್ರಮ ನೆರವೇರಿಸಲಾಗುವುದು. ನಂತರ ಭದ್ರಾನದಿಯಲ್ಲಿ ದುರ್ಗಾದೇವಿ ವಿಗ್ರಹ ವನ್ನು ಜಲಸ್ತಂಭನೆಗೊಳಿಸಲಾಗುವುದು ಎಂದು ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.೩೦ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ದುರ್ಗಾದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.