ಸಾರಾಂಶ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಖಾಸ್‌ಬಾಗ್ ಮತ್ತು ಶ್ರೀನಗರ ಬಡಾವಣೆಗಳ ವ್ಯಾಪ್ತಿಯಲ್ಲಿ ಬರುವ ರೈಲ್ವೇ ಅಂಡರ್‌ಪಾಸ್ ಪಕ್ಕದ ರಸ್ತೆ ದುಸ್ಥಿತಿ ಈ ಭಾಗದ ಜನರ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದರ ದುರಸ್ಥಿಗೆ ವಿಶೇಷ ಅನುದಾನ ಒದಗಿಸುವಂತೆ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ಮುಖಂಡ ಕೆ.ಎಲ್.ಶಿವರಾಮ್, ಈ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೆ ಬೇಡಿಕೆ ಈಡೇರಿಲ್ಲ. ಅಧಿಕಾರಶಾಹಿಯ ದಿವ್ಯ ನಿರ್ಲಕ್ಷ್ಯ ಖಂಡನೀಯ ನಡೆಯಾಗಿದ್ದು, ಕೂಡಲೇ ಕ್ರಮ ಕೈಗೊಳ್ಳದೇ ಹೋದರೆ ಗಂಭೀರ ಸ್ವರೂಪದ ಪ್ರತಿಭಟನೆ, ಹೋರಾಟಕ್ಕೆ ಮುಂದಾಗುವುದು ಅನಿವಾರ್‍ಯವಾಗುತ್ತದೆ ಎಂಬುದನ್ನು ಸಹ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಇದೇ ಆರ್ಥಿಕ ವರ್ಷದಲ್ಲಿ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಅನುದಾನಗಳು, ಎಸ್‌ಎಫ್‌ಸಿ, ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ, ಪೌರಾಡಳಿತ ಇಲಾಖೆ ಅನುದಾನ ಸೇರಿದಂತೆ ವಿವಿಧ ಅನುದಾನಗಳಡಿ ಮಂಜೂರಾದ ಬಜೆಟ್‌ನಲ್ಲಿ ನಿರ್ದಿಷ್ಟ ಮೊತ್ತದ ಹಣ ಉಳಿಕೆಯಾಗಿರುವ ಬಗ್ಗೆ ಮಾಹಿತಿ ಇದ್ದು, ಸದರಿ ಹಣದ ಸದ್ಬಳಕೆಗಾಗಿ ನಗರಸಭೆ ಸ್ಪಷ್ಟ ಯೋಜನೆಯನ್ನು ಹೊಂದಿರುವುದು ಸರಿಯಷ್ಟೆ, ರೈಲ್ವೇಅಂಡರ್‌ಪಾಸ್ ಬಳಿಯಿಂದ ನಾಗರಕೆರೆ ವಾಕಿಂಗ್‌ಟ್ರಾಕ್ ಹಾಗೂ ಮುಸ್ಲಿಮರ ಪವಿತ್ರದರ್ಗಾ ಮಾರ್ಗದಲ್ಲಿ ರಸ್ತೆ ದುಸ್ಥಿತಿ ಸರಿಪಡಿಸಲು ಹಣವನ್ನು ಒದಗಿಸುವುದು ತಮ್ಮ ಆದ್ಯತೆಯ ವಿಷಯವಾಗಿರಲಿ ಎಂಬುದು ನಮ್ಮ ಹಕ್ಕೊತ್ತಾಯವೂ ಆಗಿದೆ ಎಂದರು.
ದೊಡ್ಡಬಳ್ಳಾಪುರ ನಗರದ ಸರ್ವತೋಮುಖ ಅಭಿವೃದ್ದಿ ಹಾಗೂ ಬೆಳವಣಿಗೆಯ ಹಿತದೃಷ್ಟಿಯಿಂದ ಸರ್ಕಾರದ ವಿವಿಧ ಅನುದಾನಗಳ ಅಡಿಯಲ್ಲಿ ನಗರಸಭೆಯ ಮೂಲಕ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಒದಗಿಸಲಾದ ಒಟ್ಟು ಮಂಜೂರಾತಿ ಹಣದಲ್ಲಿ ಉಳಿಕೆಯಾಗಿರುವ ಮೊತ್ತವನ್ನು ಎಲ್ಲ ನಗರಸಭೆ ಸದಸ್ಯರುಗಳ ವಿಶ್ವಾಸ ಪಡೆದು, ಸದರಿ ಕಾಮಗಾರಿಗೆ ಬಳಸಲು ತಾವು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.ನಾಗರಕೆರೆ ಆಚೆಕೋಡಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಖಾಸ್‌ಬಾಗ್‌ಗೆ ಹೊಂದಿಕೊಂಡಂತೆ ಜನವಸತಿ ಪ್ರದೇಶ ಬೆಳೆದಿದೆ. ಈ ಭಾಗಕ್ಕೆ ಸಂಪರ್ಕ ರಸ್ತೆ ಎನಿಸಿರುವ ಅಂಡರ್‌ಪಾಸ್ ಪಕ್ಕದ ರಸ್ತೆಯು ಮಣ್ಣಿನ ಕಚ್ಚಾ ರಸ್ತೆಯಾಗಿದೆ. ನಿತ್ಯ ನೂರಾರು ಜನರು ಸಂಚರಿಸುವ ಈ ರಸ್ತೆ ಮೂಲತಃ ರಸ್ತೆಯ ಸ್ವರೂಪದಲ್ಲೇ ಇಲ್ಲ. ಬೀದಿ ದೀಪಗಳೂ ಮರೀಚಿಕೆಯಾಗಿವೆ ಎಂದರು.
ಇಲ್ಲಿನ ರಸ್ತೆ ಮತ್ತು ಚರಂಡಿ ಅವ್ಯವಸ್ಥೆಯ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳು, ರೈಲ್ವೇ ಇಲಾಖೆಯ ಗಮನಕ್ಕೂ ತರಲಾಗಿದ್ದು, ಪರಿಣಾಮವಾಗಿ ಅಂಡರ್‌ಪಾಸ್ ಪಕ್ಕದಲ್ಲಿ ಚರಂಡಿ ನಿರ್ಮಾಣವಾಗಿದೆ. ಮತ್ತೊಂದು ಅಂಡರ್‌ಪಾಸ್ ನಿರ್ಮಾಣ ಅರೆಬರೆಯಾಗಿ ನಿಂತಿದ್ದು, ಪ್ರಸ್ತಾವಿತ ರಸ್ತೆ ನಿರ್ಮಾಣ ಕಾರ್‍ಯಕ್ಕೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚಾಗಿ ಮಳೆಯಾದ ವೇಳೆ ಈ ಭಾಗದಲ್ಲಿ ಪ್ರವಾಹದ ರೀತಿ ನೀರು ಹರಿಯುತ್ತಿದ್ದು, ಸಮರ್ಪಕ ನಿರ್ವಹಣಾ ವ್ಯವಸ್ಥೆ ಮರೀಚಿಕೆಯಾಗಿದೆ. ರಸ್ತೆಯೆಲ್ಲಾ ಕೆಸರು ಗದ್ದೆಯಾಗಿದ್ದು, ಪಾದಚಾರಿಗಳು ಓಡಾಡಲೂ ಆಗದ ದುಸ್ಥಿತಿ ಇದೆ ಎಂದು ತಿಳಿಸಿದರು.ಈ ವೇಳೆ ಸ್ಥಳೀಯ ಮುಖಂಡರು, ಕೆಲ ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.
29ಕೆಡಿಬಿಪಿ4-ದೊಡ್ಡಬಳ್ಳಾಪುರದ ರೈಲ್ವೇ ಅಂಡರ್‌ಪಾಸ್ ಬಳಿ ಹದಗೆಟ್ಟಿರುವ ರಸ್ತೆಯ ದುಸ್ಥಿತಿ.