ಸಾರಾಂಶ
ಸಮಾಜದಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಎಲ್ಲಿ ಇರುತ್ತದೆಯೋ ಅಲ್ಲಿ ಸಹಜವಾಗಿ ಜೀವಂತಿಕೆ ಇರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕುಮಾರವ್ಯಾಸ ಭಾರತ ಮತ್ತು ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಸ್ತ್ರೀ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.ನಜರಬಾದ್ನ ಮಹಾರಾಜ ವಿಭಜಿತ ಸರ್ಕಾರಿ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜು ಕನ್ನಡ ಉಪ್ಯನಾಸಕರ ವೇದಿಕೆಯು ಶನಿವಾರ ಏರ್ಪಡಿಸಿದ್ದ ತಿಂಗಳ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆ ಪಾತ್ರಗಳಿಗೆ ವಿಶೇಷವಾಗಿ ಜೀವತುಂಬಿರುವುದು ಅತ್ಯಂತ ಪ್ರಶಂಸನೀಯ ವಿಚಾರ. ಸಮಾಜದಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಎಲ್ಲಿ ಇರುತ್ತದೆಯೋ ಅಲ್ಲಿ ಸಹಜವಾಗಿ ಜೀವಂತಿಕೆ ಇರುತ್ತದೆ. ತಾಯಿ ಎಂದರೆ ಕಲ್ಮಶವನ್ನು ಬಾಚಿ ಹಾಲುಣಿಸುವ ಸಹಜ ಪ್ರಕ್ರಿಯೆ. ಜೈನ ಪರಂಪರೆಯ ಕಾವ್ಯಗಳಲ್ಲಿ ಹೆಣ್ಣಿಗೆ ಮೋಕ್ಷವಿಲ್ಲ, ಅಸ್ತಿತ್ವವಿಲ್ಲ. ಆದರೆ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬರುವ ಸೀತಾ ಪರಿತ್ಯಾಗ ಅತ್ಯಂತ ಮನಮೋಹಕವಾಗಿ ಮೂಡಿಬಂದಿದೆ ಎಂದರು.ಕುಮಾರವ್ಯಾಸ ಭಾರತದಲ್ಲಿ ದ್ರೌಪದಿಯ ಪಾತ್ರಜೀವಂತ ವ್ಯಕ್ತಿಯಾಗಿ ತನ್ನ ಮನೋಭಾವವನ್ನು ಸ್ಥಿರವಾದ ಮನಸ್ಸನ್ನು ವ್ಯಕ್ತಪಡಿಸುವ ಸ್ವಾಭಿಮಾನದ ಹೆಣ್ಣಾಗಿ ಚಿತ್ರಿತವಾಗಿರುವುದು ಕುಮಾರವ್ಯಾಸನ ಕಾವ್ಯಗಳಿಗೆ ಹೆಚ್ಚಿನ ಮೆರಗನ್ನು ತರುವಲ್ಲಿ ಯಶಸ್ವಿಯಾಗಿದೆ. ಈ ಎರಡೂ ಕಾವ್ಯಗಳಲ್ಲಿ ಸ್ತ್ರೀ ಪಾತ್ರಗಳನ್ನು ಸಶಕ್ತವಾಗಿ ಎಲ್ಲರಿಗೂ ಮನಮೆಚ್ಚುವಂತೆ ಪರಿಚಯಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದರು.
ಪದವಿ ಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಒಂದು ದೊಡ್ಡ ಸವಾಲು. ಏಕೆಂದರೆ ಹದಿಹರೆಯದ ವಯಸ್ಸಿನಲ್ಲಿ ಇರುವ ವಿದ್ಯಾರ್ಥಿಗಳಿಗೆ ಪಠ್ಯಗಳ ಜೊತೆಗೆ ಬೇರೆ ಬೇರೆ ಆಸೆ, ಆಸಕ್ತಿ ಇದ್ದು ಮನಸ್ಸು ಚಂಚಲವಾಗಿರುತ್ತದೆ. ಮನಸ್ಸನ್ನು ಹತೋಟಿಗೆ ತಂದು ಬೋಧನೆ ಮಾಡುವುದು ಅಧ್ಯಾಪಕರಿಗೆ ಯಶಸ್ಸಿನ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.ವೇದಿಕೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡ ಉಪನ್ಯಾಸಕರಾದ ವಿಮರ್ಶಕ ರೇಣುಕಾರಾಧ್ಯ, ಸಾಹಿತಿ ವೆಂಕಟರಮಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಬಿ. ಅಶೋಕ, ಕನ್ನಡ ಉಪನ್ಯಾಸಕ ವೇದಿಕೆ ಅಧ್ಯಕ್ಷ ಎಂ. ಮಹೇಶ್, ಪ್ರಾಂಶುಪಾಲರುಗಳಾದ ಬಾಲಸುಬ್ರಮಣ್ಯಂ, ಡಾ. ಸಂತೋಷ್ ಚೊಕ್ಕಾಡಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ರಾಜೇಶ್ವರಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ. ಮಹದೇವ, ಪ್ರಧಾನ ಕಾರ್ಯದರ್ಶಿ ಕೆಂಪಯ್ಯ, ಡಾ. ಉಮೇಶ್ ಬೇವಿನಹಳ್ಳಿ, ಉಪನ್ಯಾಸಕರಾದ ಕೆ. ಮಾಲತಿ, ಸುಧಾಕರ್ ಮೊದಲಾದವರು ಇದ್ದರು.ಹೇಮಾವತಿ ಸ್ವಾಗತಿಸಿದರು. ಡಾ. ಚಿಕ್ಕಮಾದು ವಂದಿಸಿದರು, ಉಪನ್ಯಾಸಕ ಹರೀಶ್ ನಿರೂಪಿಸಿದರು.