ಗ್ರಾಪಂ ಆಡಳಿತ ವ್ಯವಸ್ಥೆ ಸುಧಾರಣೆಗೆ ಆದ್ಯತೆ

| Published : Nov 15 2024, 12:33 AM IST

ಸಾರಾಂಶ

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಿಸಿದ ಬಳಿಕ ಅನೇಕರು, ವರದಿ ಕೊಟ್ಟರೆ ಯಾರೂ ಓದಲ್ಲ, ಜಾರಿಯಾಗಲ್ಲ ಅಂದಿರುವುದುಂಟು

ಕನ್ನಡಪ್ರಭ ವಾರ್ತೆ ಮೈಸೂರು

ಆಡಳಿತದಲ್ಲಿ ಸುಧಾರಣೆ ಆಗಬೇಕಿರುವುದು ಸಾವಿರಾರು ಮಂದಿ ಭೇಟಿ ನೀಡುವ ವಿಧಾನಸೌಧಕ್ಕಿಂತ, ಕೋಟ್ಯಂತರ ಮಂದಿ ಹೋಗುವ ಗ್ರಾಪಂಗಳು ಎಂದು ಆಡಳಿತ ಸುಧಾರಣಾ ಆಯೋಗದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ತ.ಮ. ವಿಜಯಭಾಸ್ಕರ್ ತಿಳಿಸಿದರು.

ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗಗಳು ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) – ಮೈಸೂರು ಸ್ಥಳೀಯ ಶಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳು ಕುರಿತು ಅವರು ಮಾತನಾಡಿದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಿಸಿದ ಬಳಿಕ ಅನೇಕರು, ವರದಿ ಕೊಟ್ಟರೆ ಯಾರೂ ಓದಲ್ಲ, ಜಾರಿಯಾಗಲ್ಲ ಅಂದಿರುವುದುಂಟು. ಆದರೆ ನಾನು ಕರ್ನಾಟಕದ 2ನೇ ಆಡಳಿತ ಸುಧಾರಣಾ ಆಯೋಗದಿಂದ 2021ರ ಜುಲೈನಿಂದ 2024ರ ಫೆಬ್ರವರಿವರೆಗೆ ಒಟ್ಟು ಏಳು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಇದರಲ್ಲಿ ಒಟ್ಟು 5,039 ಶಿಫಾರಸುಗಳನ್ನು ಮಾಡಲಾಗಿದ್ದು, 2,800 ಜಾರಿಯಾಗಿವೆ. ಉಳಿದವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದಲ್ಲಿಯೂ ಎರಡು ಸುಧಾರಣಾ ಆಯೋಗವಿತ್ತು. ಮೊದಲ ಆಯೋಗಕ್ಕೆ ಮೊರಾರ್ಜಿ ದೇಸಾಯಿ ಅವರು ಅಧ್ಯಕ್ಷರಾಗಿದ್ದರು. ಅವರ ಉಪ ಪ್ರಧಾನಿಯಾಗಿ ಹೋದ ಬಳಿಕ ಕರ್ನಾಟಕದವರೇ ಆದ ಕೆಂಗಲ್‌ ಹನುಮಂತಯ್ಯ ಅಧ್ಯಕ್ಷರಾದರು. ನಂತರ ಆಯೋಗಕ್ಕೆ ಮತ್ತೋರ್ವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು ಎಂದರು.

ಕರ್ನಾಟಕದ ಮೊದಲ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಹಾರನಹಳ್ಳಿ ರಾಮಸ್ವಾಮಿ ಅವರ ವರದಿಯನ್ನು ಅಧ್ಯಯನ ಮಾಡಿದ್ದೆ.

ರಾಮಸ್ವಾಮಿ ಅವರು 2001ರಲ್ಲಿ ವರದಿ ಸಲ್ಲಿಸಿ 729 ಶಿಫಾರಸುಗಳನ್ನು ಮಾಡಿದ್ದರು. ಈ ಪೈಕಿ 389 ಜಾರಿಯಾಗಿವೆ. 386 ಪರಿಶೀಲನೆಯಲ್ಲಿವೆ. 2021ರಲ್ಲಿ 2ನೇ ಆಯೋಗ ರಚನೆಯಾಯಿತು.ಈಗಿನ ತಾಂತ್ರಿಕ ಜಗತ್ತಿನಲ್ಲಿ ಆಡಳಿತ ಯಂತ್ರದ ಬದಲಾವಣೆಗಾಗಿ, ಕೇಂದ್ರದ ಎರಡು ಆಡಳಿತ ಸುಧಾರಣಾ ಆಯೋಗಗಳ ವರದಿ ಸೇರಿದಂತೆ ಹಲವು ವರದಿಗಳನ್ನು ಓದಲಾಯಿತು. ಬಹುತೇಕ ವರದಿಗಳು ಕೇಂದ್ರ ಕಚೇರಿ ಮಟ್ಟದ ಆಡಳಿತದ ಬಗ್ಗೆಯೇ ಗಮನಕೊಟ್ಟಿದ್ದವು. ನಾನು ಜನರ ಸಲುವಾಗಿ ಅನುಕೂಲ ಮಾಡಿಕೊಡುವುದನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ನಡೆಸಿ ಶಿಫಾರಸು ಮಾಡಿದ್ದೇನೆ ಎಂದರು.

ಸಾರ್ವಜನಿಕ ಆಡಳಿತದಲ್ಲಿ ಕೇಂದ್ರ ಕಚೇರಿಯಲ್ಲಿ ಇರುವವರಿಗೆ ಕಾಣಿಸುವುದು ಶೇ. 4ರಷ್ಟು ಮಾತ್ರ. ಉಳಿದವು ಕಾಣಿಸುವುದು ತಳಮಟ್ಟದ ಸಿಬ್ಬಂದಿಗೆ ಮಾತ್ರವೇ. ಅವರೆಲ್ಲರಿಂದಲೂ ಮಾಹಿತಿ ಸಂಗ್ರಹಿಸಲಾಯಿತು. ಜನರನ್ನು ಖುದ್ದು ಭೇಟಿಯಾಗಿ ಅಹವಾಲು ಆಲಿಸಿದ್ದೆ ಎಂದು ವರದಿ ಸಿದ್ಧಪಡಿಸಿದ ಪ್ರಕ್ರಿಯೆಯನ್ನು ಹಂಚಿಕೊಂಡರು.

ಹಿಂದೂ ವಿವಾಹಗಳಲ್ಲಿ ಶೇ. 3೦ರಷ್ಟು ಮಂದಿ ಮಾತ್ರ ನೋಂದಾಯಿಸಿಕೊಳ್ಳುತ್ತಾರೆ. ನಾನು ಉಪ ನೋಂದಣಾಧಿಕಾರಿ ಕಚೇರಿಗೆ ಹೋದಾಗ ನೂತನ ವಧು- ವರರ ಕುಳಿತಿರುತ್ತಿದ್ದರು. ಏಕೆ ಎಂದರೆ ನೋಂದಾಯಿಸಿಕೊಳ್ಳಬೇಕು, ಬಂದು 2 ಗಂಟೆ ಆಯಿತು ಎನ್ನುತ್ತಿದ್ದರು. ಆದ್ದರಿಂದ ತಾಲೂಕು ಕಚೇರಿಗೆ ಬಂದು ಯಾರು ನೋಂದಣಿ ಕೂಡ ಮಾಡಿಕೊಳ್ಳುತ್ತಿಲ್ಲ. ಹೇಳಬೇಕೆಂದರೆ ನನ್ನದೇ ಆಗಿಲ್ಲ.

ಈಗ ವಿವಾಹ ನೊಂದಣಿ ಗ್ರಾಪಂ ಕಚೇರಿ ಮೂಲಕವೇ ಅರ್ಜಿ ಸಲ್ಲಿಸಿ ಮಾಡಿಕೊಳ್ಳಬಹುದು. ಆ ಸುಧಾರಣೆ ತರಲಾಗಿದೆ. ಇನ್ನು ಹನಿ ನೀರಾವರಿಗೆ ರೈತರು ಅರ್ಜಿ ಸಲ್ಲಿಸಿದರೆ 31 ದಾಖಲಾತಿ ನೀಡಬೇಕು. ಆದರೆ ಸರ್ಕಾರ ಕೊಡುವುದು 19 ಸಾವಿರ ಮಾತ್ರ. ಇದಕ್ಕೆ 31 ದಾಖಲಾತಿ ಒದಗಿಸುವಷ್ಟರಲ್ಲಿ ಎಷ್ಟು ಹಣ ಖರ್ಚಾಗುತ್ತದೆ. ಯೂರೋಪ್ ನ ಎಸ್ಟೋನಿಯಾ ದೇಶದಲ್ಲಿ ನಾಗರೀಕರೊಬ್ಬರಿಂದ ಒಮ್ಮೆ ಸಂಗ್ರಹಿಸಿದ ಮಾಹಿತಿಯನ್ನು ಮತ್ತೆ ಕೇಳುವಂತಿಲ್ಲ. ಅದನ್ನು ಅವರು ತಮ್ಮ ದಾಖಲಾತಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು.

ಅಂತೆಯೇ ಕರ್ನಾಟಕದಲ್ಲಿ ಕುಟುಂಬ, ಫ್ರೂಟ್ಸ್ ಮುಂತಾದ ಪೋರ್ಟಲ್ ಗಳ ಮೂಲಕವೇ ಕುಟುಂಬವೊಂದರ ಸುಮಾರು 21 ಮಾಹಿತಿ ಸರ್ಕಾರದಲ್ಲಿಯೇ ಇರುತ್ತದೆ. ಉಳಿದ ಕೆಲವು ದಾಖಲೆಯನ್ನು ರೈತರಿಂದ ಸಂಗ್ರಹಿಸಿದರೆ ಸಾಕು. ಒಂದು ಆಧಾರ್‌ ನಂಬರ್‌ ಇದ್ದರೆ ಎಲ್ಲಾ ಮಾಹಿತಿ ಸಿಗುವಂತೆ ಆಗಬೇಕು ಎಂದರು. ಈಗ ಸರ್ಕಾರ ಗ್ಯಾರಂಟಿ ಯೋಜನೆಯನ್ನು 60 ದಿನಗಳಲ್ಲಿ ಕೋಟ್ಯಂತರ ಮಂದಿಯನ್ನು ಮುಟ್ಟಲು ಸಾಧ್ಯವಾಗಿದ್ದು, ಕುಟುಂಬ ಡೇಟಾ ಬೇಸ್ ನಿಂದಲೇ ಎಂದರು.

ಉಪ ನೋಂದಣಾಧಿಕಾರಿಗೆ ತಾವು ಮಾಡಿದ ನೋಂದಣಿ ರದ್ದುಪಡಿಸುವ ಅಧಿಕಾರ ಇಲ್ಲ. ಅದಕ್ಕೆ ನ್ಯಾಯಾಲಯಕ್ಕೆ ಹೋಗಬೇಕು. ಆದ್ದರಿಂದ ರದ್ದುಪಡಿಸುವ ಅಧಿಕಾರ ನೀಡಲು ಶಿಫಾರಸು ಮಾಡಲಾಗಿದೆ. ಹೊಸ ತಾಲೂಕು ರಚನೆಯಾದ ಮೇಲೆ ಎಲ್ಲಾ ತಾಲೂಕು ಕಚೇರಿಯಲ್ಲೂ ಒಂದೇ ರೀತಿಯ ಸಿಬ್ಬಂದಿ ಕೊಡುವುದು ಸರಿಯೇ? ಎಂಬ ಪ್ರಶ್ನೆ ಕಾಡಿತು. ಆಗ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೀಡಲು ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ಬೇರೆಡೆಗೆ ಬಳಸಿಕೊಳ್ಳಲು ಶಿಫಾರಸ್ಸು ಮಾಡಲಾಯಿತು ಎಂದರು.

ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಕೃಷ್ಣ ಹೊಂಬಳ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಮೈಸೂರು ಸ್ಥಳೀಯ ಶಾಖೆ ಅಧ್ಯಕ್ಷ ಬಿ.ಎಸ್. ರವಿಕುಮಾರ್ ಹಾಗೂ ಕಾರ್ಯದರ್ಶಿ ಡಾ.ಜೆ. ಸೋಮಶೇಖರ್ ಇದ್ದರು.