ಈ ವರ್ಷದ ‌ಕೊನೆಯ ರಾಷ್ಟ್ರೀಯ ಲೋಕ್‌ ಅದಾಲತ್ ಡಿ. 12ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯಲಿದ್ದು, ಪ್ರಸ್ತುತ 840 ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಗುರುತಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಎಚ್. ಜೆ. ಮರುಳಸಿದ್ದರಾಧ್ಯ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಈ ವರ್ಷದ ‌ಕೊನೆಯ ರಾಷ್ಟ್ರೀಯ ಲೋಕ್‌ ಅದಾಲತ್ ಡಿ. 12ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯಲಿದ್ದು, ಪ್ರಸ್ತುತ 840 ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಗುರುತಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಎಚ್. ಜೆ. ಮರುಳಸಿದ್ದರಾಧ್ಯ ಅವರು ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಜಿಲ್ಲೆಯ ಇತರೆ ತಾಲೂಕು ನ್ಯಾಯಾಲಯಗಳಲ್ಲಿ ಒಟ್ಟು 20,080 ಕೇಸುಗಳು ವಿಚಾರಣೆಗೆ ಬಾಕಿ ಇದ್ದು ಅವುಗಳಲ್ಲಿ 840 ಕೇಸುಗಳನ್ನು ರಾಜೀ ಸಂಧಾನಕ್ಕೆ ಗುರುತಿಸಲಾಗಿದೆ ಎಂದರು.

ಡಿ.12ರಂದು ನಡೆಯಲಿರುವ ರಾಷ್ಟ್ರೀಯ ಲೋಕ್‌ ಅದಾಲತ್ ಈ ವರ್ಷದ ಕೊನೆಯ ಲೋಕ್‌ ಅದಾಲತ್ ಆಗಲಿದ್ದು, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣ ಪ್ರಕರಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ/ ಕುಟುಂಬ ನ್ಯಾಯಾಲಯ ಪ್ರಕರಣಗಳು ( ವಿಚ್ಛೇದನೆಯನ್ನು ಹೊರತುಪಡಿಸಿ) ರಾಜೀಯಾಗಬಲ್ಲ ಸಿವಿಲ್ ಹಾಗೂ ಇತರೆ ಪ್ರಕರಣಗಳು ಸೇರಿದಂತೆ ಗುರುತಿಸಲಾಗಿರುವ ಒಟ್ಟು 840 ಪ್ರಕರಣಗಳನ್ನು ಅಂದು ಕೈಗೆತ್ತಿಕೊಂಡು ರಾಜೀ‌ಸಂಧಾನ ಮಾಡಲಾಗುವುದು. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರು ತಿಳಿಸಿದರು.

ರಾಷ್ಟ್ರೀಯ ಲೋಕ್‌ ಅದಾಲತ್ ನಲ್ಲಿ ಭಾಗವಹಿಸಲುವಂತೆ ಕೇಸುಗಳು ಉಭಯ ಪಕ್ಷಗಾರರಿಗೆ ಮತ್ತು ಅವರನ್ನು ಪ್ರತಿನಿಧಿಸುವ ವಕೀಲರಿಗೆ ಈಗಾಗಲೇ ಮಾಹಿತಿ ರವಾನೆ ಮಾಡಲಾಗಿತ್ತು, ಸಹಕಾರ ನೀಡುವಂತೆ ಕೋರಲಾಗಿದೆ. ರಾಜೀ ಸಂಧಾನವಾದ ಕೇಸುಗಳಲ್ಲಿ ಈಗಾಗಲೇ ಪಾವತಿಸಲಾದ ನ್ಯಾಯಾಲಯದ ಶುಲ್ಕವನ್ನು ಪೂರ್ಣವಾಗಿ ಮರುಪಾತಿಸಲಾಗುವುದು.

ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನೂ ಸಹ ಲೋಕ್‌ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾದ ಪ್ರಕರಣಗಳು ರಾಜಿಯಾಗುವುದರಿಂದ ಕಡಿಮೆ ಖರ್ಚಿನಲ್ಲಿಯೇ ಪ್ರಕರಣಗಳು ಬೇಗ ಇತ್ಯರ್ಥವಾಗುತ್ತವೆ. ಹಾಗಾಗಿ, ರಾಷ್ಟ್ರೀಯ ಲೋಕ್‌ ಅದಾಲತ್ ನ ಸದಾವಕಾಶವನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ರಾಷ್ಟ್ರೀಯ ಲೋಕ್‌ ಅದಾಲತ್ ಜೊತೆಗೆ ನ. 21ರಂದು ವಿಶೇಷ ಲೋಕ್‌ ಅದಾಲತ್ ನಡೆಸಲಾಗುತ್ತಿದ್ದು, ಅಂದು ಕೇವಲ ಚೆಕ್ ಅಮಾನ್ಯ ಪ್ರಕರಣಗಳನ್ನು ಮಾತ್ರ ರಾಜೀ ಸಂಧಾನ ಮಾಡಲಾಗುವುದು ಎಂದರು. ಈ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಸಮನ್ಸ್ ಹಾಗೂ ವಾರೆಂಟ್ ಶೀಘ್ರ ಜಾರಿಗೆ ಕ್ರಮ ವಹಿಸುವಂತೆ ಈ ಸಂದರ್ಭದಲ್ಲಿ ಹಾಜಿರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ನ್ಯಾಯಾಧೀಶರು ಸೂಚನೆ ನೀಡಿದರು.

ಈ ನಡುವೆ ಮಧ್ಯೆಸ್ಥಗಾರಿಕೆ ಕೇಂದ್ರದಲ್ಲಿಯೂ ಕೂಡಾ ವ್ಯಾಜ್ಯಗಳ ಸಂಧಾನಕ್ಕೆ ಪ್ರಯತ್ನಿಸಲಾಗುತ್ತಿದ್ದು, ಮೆಗಾ‌‌ಮಿಡಿಯೇಷ್ ಡ್ರೈವ್ 3.0 ಜಾರಿಯಲ್ಲಿದೆ. ಪ್ರಸ್ತುತ 137 ಕೇಸ್‌ಗಳಲ್ಲಿ 51 ಕೇಸ್‌ಗಳನ್ನು ಮಧ್ಯೆಸ್ಥಗಾರಿಕೆ ಕೇಂದ್ರದಲ್ಲಿ ರಾಜೀ ಸಂಧಾನಕ್ಕೆ ಗುರುತಿಸಲಾಗಿದೆ. ಹಾಗೆ ಗುರುತಿಸಲಾಗದ ಪ್ರಕರಣಗಳಲ್ಲಿ ಆಸ್ತಿ ವಿಭಾಗಕ್ಕೆ ಸಂಬಂಧಿಸಿದ ಪ್ರಕಣರಗಳು ಹೆಚ್ಚಿವೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಇದ್ದರು.

ಗುರುಮಠಕಲ್‌ನಲ್ಲಿ ಸಂಚಾರಿ ಸಿವಿಲ್, ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆ

ನೂತನ ತಾಲೂಕುಗಳಾದ ಗುರುಮಠಕಲ್ ಹಾಗೂ ಹುಣಸಗಿಯಲ್ಲಿ ತಾಲೂಕು ನ್ಯಾಯಾಲಯಗಳ ಸ್ಥಾಪನೆಯ ಬೇಡಿಕೆ‌ ಬಹುತೇಕ ಈಡೇರಿದೆ. ಈಗ, ಗುರುಮಠಕಲ್‌ನಲ್ಲಿ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ನಿಂದ ಅನುಮತಿ ದೊರಕಿದ್ದು, ಪ್ರಸ್ತುತ ಟೌನ್ ಹಾಲ್‌ನಲ್ಲಿ ಸಂಚಾರಿ ನ್ಯಾಯಾಲಯ ನಡೆಸಲಾಗುವುದು. ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಯಾದಗಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ಹುಣಸಗಿಯಲ್ಲಿ ನ್ಯಾಯಾಲಯ ಸ್ಥಾಪನೆ ಕುರಿತಂತೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಬಹುಶಃ ಈ ತಿಂಗಳ ಅಂತ್ಯದೊಳಗೆ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ತಿಳಿಸಿದರು.

ಮೋಟಾರು ಕಾಯಿದೆ ಉಲ್ಲಂಘನೆ: 28,120 ಚಾಲನೆ ಜಾರಿ: ಎಸ್ಪಿ

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಮೋಟಾರು ವಾಹನ ಕಾಯಿದೆ‌ ಉಲ್ಲಂಘನೆ ಪ್ರಕರಣಗಳಲ್ಲಿ ಹಾಕಲಾಗಿರುವ ದಂಡ ಪಾವತಿಗೆ ವಾಹನ ಸವಾರರಿಗೆ ಕಾಲಾವಕಾಶ ನೀಡಲಾಗಿತ್ತು ಎಂದರು.

ಅಕ್ಟೋಬರ್ 2025 ರಿಂದ ಅಕ್ಟೋಬರ್ 2026ರ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 28,120 ವಾಹನ ಕಾಯಿದೆ ಉಲ್ಲಂಘನೆ ಸಲುವಾಗಿ ಚಾಲನ್ ಜಾರಿಮಾಡಲಾಗಿತ್ತು. ಅವುಗಳ ಪೈಕಿ 2,232 ಚಾನೆಲ್ ಗಳಿಗೆ ( ಶೇ 8) ಸಂಬಂಧಿಸಿದ ದಂಡವನ್ನು ಸವಾರರು ಪಾವತಿಸಿದ್ದು ಬಾಕಿ 25,888 ಚಾಲನ್ ಗಳ ದಂಡ ವಸೂಲಾಗಬೇಕಿದೆ. ಜಾರಿಯಾದ ಒಟ್ಟು 28,120 ಚಾಲನ್ ಗಳಲ್ಲಿ 19,000 ಚಾಲನ್ ಗಳು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೇ ಇರುವುದಕ್ಕೆ ಸಂಬಂಧಿಸಿದ್ದು, 4,100 ಚಾಲನ್ ಗಳು ಮೂರು ಜನ ಸವಾರಿ ಮಾಡಿರುವುದಕ್ಕೆ ಸಂಬಂಧಿಸಿವೆ. ಒಟ್ಟು 1.63 ಕೋಟಿ ದಂಡದ ಪೈಕಿ ರು. 12 ಲಕ್ಷ ವಸೂಲಾಗಿದ್ದು, ರು. 1.50 ಕೋಟಿ‌ ಬಾಕಿ ಇದೆ ಎಂದರು.

1991ರಿಂದ 2025ರ ಒಳಗಾಗಿ ಜಾರಿ ಮಾಡಲಾದ ಚಾಲನ್ ಗಳಿಗೆ ಸೇರಿದ ದಂಡ ಪಾವತಿ ಮಾಡಲು ಸವಾರರಿಗೆ ದಂಡದ ಮೊತ್ತದಲ್ಲಿ ಶೇ 50 ರಿಯಾಯಿತಿ ನೀಡಲಾಗಿದ್ದು, ನವೆಂಬರ್ 21 ರಿಂದ ಡಿಸೆಂಬರ್ 11, 2026 ರವರಗೆ ಕಾಲಾವಕಾಶವಿದ್ದು, ಯಾದಗಿರಿ ನಗರ, ಗ್ರಾಮೀಣ ಅಥವಾ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಂಡ ಪಾವತಿಸಿ ರಿಸೀದಿ ಪಡೆದುಕೊಳ್ಳಬಹುದು ಅಥವಾ ಆನ್ ಲೈನ್‌ನಲ್ಲಿಯೂ ಕೂಡಾ ದಂಡ ಪಾವತಿಗೆ ಅವಕಾಶವಿದೆ ಎಂದರು.

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದ ಪೃಥ್ವಿಕ್ ಶಂಕರ್, ಈ ವರ್ಷದ ಸಾಲಿನಲ್ಲಿ ಇದುವರೆಗೆ 140 ಗಂಭೀರ ಅಪಘಾತದ ಪ್ರಕರಣಗಳು ವರದಿಯಾಗಿವೆ. ಸವಾರರು ಕಾಯಿದೆ ಉಲ್ಲಂಘನೆ ಮಾಡಿ ಸವಾರಿ ಮಾಡಿದ್ದನ್ನು ಪತ್ತೆ ಹಚ್ಚಲು ಎಐ ನಿರ್ಮಿತ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೆಜ್ ಮೆಂಟ್ ಸಿಸ್ಟಮ್ ಮೂಲಕ ಸವಾರರಿಗೆ ಚಾಲನ್ ಜೂನ್ ನಿಂದ ಜಾರಿಗೊಳಿಸಲಾಗುತ್ತಿದೆ. ಹೀಗೆ ಜಾರಿ ಮಾಡಲಾದ ಚಾಲನ್ ಗಳ ಸಂಖ್ಯೆ ಪ್ರತಿ ತಿಂಗಳು 4000 ರಿಂದ 5000 ರವರೆಗೆ ತಲುಪಿದೆ ಎಂದರು.

69.36 ಲಕ್ಷ ದಂಡ: ಆರ್ ಟಿ ಒ ಮಿಲಿಂದಕುಮಾರ ಮಾಹಿತಿ

ಪೊಲೀಸ್ ಇಲಾಖೆ ಅಲ್ಲದೇ ಪ್ರಾದೇಶಿಕ ಸಾರಿಗೆ ಇಲಾಖೆ ಕೂಡಾ ಮೋಟಾರು ವಾಹನ‌ ಉಲ್ಲಂಘನೆ ಮಾಡಿದ ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುತ್ತಿದ್ದು, 2000-2001ರ ಸಾಲಿನಿಂದ 2024-25 ರವರೆಗೆ ಒಟ್ಟು‌ 2,220 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 69.36 ಲಕ್ಷ ದಂಡ ವಿಧಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದ್ ಕುಮಾರ ತಿಳಿಸಿದರು. ಇಲಾಖೆಯ ವತಿಯಿಂದಲೂ ಕೂಡಾ ದಂಡ ಪಾವತಿಸುವ ವಾಹನ ಸವಾರರಿಗೆ 50% ರಿಯಾಯಿತಿ ನೀಡಲಾಗುತ್ತಿದ್ದು, ನವೆಂಬರ್ 21ರಿಂದ ಡಿಸೆಂಬರ್ 11ರವರೆಗೆ ಕಾಲಾವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಇಲಾಖೆಯ 08473-25258 ಹಾಗೂ 9449864033 ನಂಬರ್ ಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ವಿಚಾರ ಮಾಡಬಹುದಾಗಿದೆ ಎಂದರು.