ಬೋಂತಿ ತಾಂಡಾದಲ್ಲಿ ಹೋಮ, ಹವನ, ಪೂಜೆ, ಭಜನೆ

| Published : Jan 23 2024, 01:47 AM IST

ಸಾರಾಂಶ

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಐತಿಹಾಸಿಕ ಕಾರ್ಯಕ್ರಮ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಶಾಸಕ ಪ್ರಭು ಬಿ.ಚವ್ಹಾಣ ಅವರ ಸ್ವ- ಗ್ರಾಮವಾದ ಬೋಂತಿ ತಾಂಡಾದಲ್ಲಿ ಪೂಜೆ, ಹೋಮ, ಹವನ, ಭಜನೆ ಕಾರ್ಯಕ್ರಮಗಳ ಮುಖಾಂತರ ಸಂಭ್ರಮಿಸಲಾಯಿತು.

ಔರಾದ್: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಐತಿಹಾಸಿಕ ಕಾರ್ಯಕ್ರಮ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಶಾಸಕ ಪ್ರಭು ಬಿ.ಚವ್ಹಾಣ ಅವರ ಸ್ವ- ಗ್ರಾಮವಾದ ಬೋಂತಿ ತಾಂಡಾದಲ್ಲಿ ಪೂಜೆ, ಹೋಮ, ಹವನ, ಭಜನೆ ಕಾರ್ಯಕ್ರಮಗಳ ಮುಖಾಂತರ ಸಂಭ್ರಮಿಸಲಾಯಿತು.

ಗ್ರಾಮದೇವತೆ ಇಚ್ಛಾಪೂರ್ತಿ ಮಾತಾ ಜಗದಂಬಾ ಮಂದಿರದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಹೋಮ-ಹವನ, ಪೂಜೆ, ಅರ್ಚನೆಗಳು ನಡೆದವು. ಸಂಭ್ರಮಾಚರಣೆಗಾಗಿ ಒಂದು ದಿನ ಮುಂಚೆಯೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.

ಸುಂದರ ರಥದಲ್ಲಿ ಶ್ರೀರಾಮನ ಭಾವಚಿತ್ರ ಅಲಂಕರಿಸಿ ಭಜನಾ ತಂಡದೊಂದಿಗೆ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ರಾಮಸ್ತುತಿ ನಡೆಸಲಾಯಿತು. ಯುವಕರು ಕೈಯಲ್ಲಿ ಧ್ವಜ ಹಿಡಿದು "ಜೈ ಶ್ರೀರಾಮ್ " ಎಂಬ ಘೋಷಣೆಗಳನ್ನು ಕೂಗುವುದು ಆಕರ್ಷಕವಾಗಿತ್ತು. ಹಿರಿಯರು, ಯುವಕರು, ಮಹಿಳೆಯರೆಂಬ ಭೇದವಿಲ್ಲದೇ ಎಲ್ಲರು ಶ್ರೀರಾಮನ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದರು.

ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಗ್ರಾಮದಲ್ಲಿ ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಶಾಸಕರು ಗ್ರಾಮಸ್ಥರೊಂದಿಗೆ ಕುಳಿತು ಐತಿಹಾಸಿಕ ಕಾರ್ಯಕ್ರಮವನ್ನು ವೀಕ್ಷಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶಾಸಕರು ವೇದಿಕೆಯ ಮೇಲೆ ಕುಟುಂಬ ಸಮೇತ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಗ್ರಾಮಸ್ಥರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಇದಕ್ಕೂ ಮುನ್ನ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ರಾಮ ಭಜನೆ ಕಾರ್ಯಕ್ರಮ ಜರುಗಿತು.

ಮಂದಿರ ಕಾರ್ಯಕ್ರಮದೊಂದಿಗೆ ಶ್ರೀರಾಮನ ಆದರ್ಶಗಳನ್ನು ಪಾಲಿಸುವ ಸಂಕಲ್ಪ ತೊಡಬೇಕಿದೆ ಎಂದರು. ಮುಖಂಡರಾದ ಮಾರುತಿ ಚವ್ಹಾಣ, ಎಂ.ಎ.ಪವಾರ, ಪಿ.ಎಲ್ ರಾಠೋಡ್, ಸಚಿನ್ ರಾಠೋಡ್, ವಸಂತ ರಾಠೋಡ್ ಸೇರಿದಂತೆ ಇತರರಿದ್ದರು.