ಸಾರಾಂಶ
ಅರಸೀಕೆರೆ ತಾಲೂಕಿನ ಸುಕ್ಷೇತ್ರ ಮಾಲೆಕಲ್ಲು ಅಮರಗಿರಿ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ತಾಲೂಕಿನ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುವ ನಿರೀಕ್ಷೆಯಿದ್ದ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಸುಕ್ಷೇತ್ರ ಮಾಲೆಕಲ್ಲು ಅಮರಗಿರಿ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದ ಅಂಗವಾಗಿ ವಿಶೇಷ ಪೂಜೆಗಳು ನಡೆದವು.ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಲಕ್ಷ್ಮಿ ಸಮೇತದ ಗೋವಿಂದರಾಜ ಸ್ವಾಮಿಗೆ ಪೂಜೆ ಸಲ್ಲಿಸಿದರೆ ಮತ್ತೆ ಕೆಲ ಭಕ್ತರು ಕಡಿದಾದ ಬೆಟ್ಟವನ್ನೇರಿ ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಸಮೇತನಾದ ವೆಂಕಟರಮಣ ಸ್ವಾಮಿಯ ದರ್ಶನ ಮಾಡಿ ಪುನೀತರಾದರು. ತಾಲೂಕಿನ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುವ ನಿರೀಕ್ಷೆಯಿದ್ದ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ದೇವಾಲಯದ ಆವರಣದಲ್ಲಿರುವ ಸೂರ್ಯನಾರಾಯಣ ಸ್ವಾಮಿ, ಆಂಜನೇಯ ಸ್ವಾಮಿ, ಕೆಂಚರಾಯಸ್ವಾಮಿ ಹಾಗೂ ಬೆಟ್ಟದ ತಪಲಿನಲ್ಲಿರುವ ಗುಂಡಮ್ಮ ದೇವಾಲಯದಲ್ಲೂ ಸಹ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆಗಳು ನಡೆಯಿತು.ಮಹಾಮಂಗಳಾರತಿ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಮತ್ತು ವ್ಯವಸ್ಥಾಪರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.