ಸಾರಾಂಶ
ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಕ್ರೋಧಿ ಸಂವತ್ಸರದ ಶ್ರಾವಣ ಮಾಸದ ನಾಲ್ಕನೇ ಸೋಮವಾರ ಮುಂಜಾನೆ ವಿಶೇಷ ಪೂಜೆ ನೆರವೇರಿತು. ಆತ್ಮಲಿಂಗಕ್ಕೆ ನವರತ್ನ ಖಚಿತ ಸುವರ್ಣ ಕವಚ ತೊಡಿಸಿ ಬಿಲ್ವಾರ್ಚನೆ, ಸುವರ್ಣ ನಾಗಾಭರಣ ಅಲಂಕಾರದೊಂದಿಗೆ ವಿಶೇಷ ನೈವೇದ್ಯಗಳನ್ನು ಸಮರ್ಪಿಸಲಾಯಿತು.
ಗೋಕರ್ಣ:
ಇಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿ ಕ್ರೋಧಿ ಸಂವತ್ಸರದ ಶ್ರಾವಣ ಮಾಸದ ನಾಲ್ಕನೇ ಸೋಮವಾರ ಮುಂಜಾನೆ ವಿಶೇಷ ಪೂಜೆ ನೆರವೇರಿತು. ಲೋಕಕಲ್ಯಾಣಾರ್ಥವಾಗಿ ಏಕಾದಶ ರುದ್ರಾಭಿಷೇಕ, ಸುವರ್ಣ ಶಂಖ ಗಂಗಾಜಲಾಭಿಷೇಕ, ಪಂಚಾಮೃತ ನವಧಾನ್ಯಭಿಷೇಕಗಳೊಂದಿಗೆ ಆತ್ಮಲಿಂಗಕ್ಕೆ ನವರತ್ನ ಖಚಿತ ಸುವರ್ಣ ಕವಚ ತೊಡಿಸಿ ಬಿಲ್ವಾರ್ಚನೆ, ಸುವರ್ಣ ನಾಗಾಭರಣ ಅಲಂಕಾರದೊಂದಿಗೆ, ವಿಶೇಷ ನೈವೇದ್ಯಗಳನ್ನು ಸಮರ್ಪಿಸಿ, ದೀಪಾರಾಧನೆ, ಮಹಾಮಂಗಳಾರತಿ ಜರುಗಿದವು. ಉಪಾಧಿವಂತ ಅರ್ಚಕರಾದ ವೇ. ಅಮೃತೇಶ್ ಭಟ್ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ದೇವರಿಗೆ ವಿಶೇಷ ಹೂವಿನ ಅಲಂಕಾರ ಭಕ್ತರನ್ನು ಆಕರ್ಷಿಸಿತು.ಇಂದು ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ
ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಬಹುವಿಶೇಷವಾಗಿ ಸಿದ್ಧತೆಗೊಂಡಿದೆ.ಇಲ್ಲಿನ ವೆಂಕಟರಮಣ ದೇವಾಲಯದಲ್ಲಿ ಕಳೆದ ಆರು ದಿನದಿಂದ ಭಜನಾ ಸಪ್ತಾಹ ನಡೆಯುತ್ತಿದ್ದು, ಸೋಮವಾರ ಮಧ್ಯರಾತ್ರಿ ಶ್ರೀ ಕೃಷ್ಣ ಜನ್ಮೋತ್ಸವ ಆಚರಿಸಲಾಯಿತು. ಮಂಗಳವಾರ ಮುಂಜಾನೆ ಮೊಸರು ಕುಡಿಕೆ ಒಡೆಯುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವುದರೊಂದಿಗೆ ಹಬ್ಬ ಆಚರಣೆ ನಡೆಯಲಿದೆ.ಇಲ್ಲಿನ ಕೋಟಿತೀರ್ಥ ಕಟ್ಟೆಯಲ್ಲಿರುವ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಸೋಮವಾರ ಮುಂಜಾನೆಯಿಂದ ಭಕ್ತರು ಆಗಮಿಸಿ ಪೂಜೆ ನೆರವೇರಿಸುತ್ತಿದ್ದು, ರಾತ್ರಿ ಕೃಷ್ಣನ ಜನನೊಂದಿಗೆ ವಿಶೇಷ ಪೂಜೆ ನಡೆಯಿತು. ಮಂಗಳವಾರ ಹಬ್ಬ ಆಚರಣೆ ನಡೆಯಲಿದೆ.
ಮಹಾಬಲೇಶ್ವರ ಮಂದಿರದ ನಂದಿಮಂಟಪದಲ್ಲಿರುವ ಶ್ರೀ ಕೃಷ್ಣನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ ನಡೆಯುತ್ತಿದೆ. ಮಂಗಳವಾರದ ಸಂಜೆ ಶ್ರೀ ದೇವಾಲಯದ ದಧಿಶಿಶಿಕೋತ್ಸವ ನಡೆಯಲಿದ್ದು, ನಿಗದಿ ಸ್ಥಳದಲ್ಲಿ ೧೦೮ ಮೊಸರು ಕುಡಿಕೆ ಒಡೆಯುವ ವಿಶಿಷ್ಟ ಉತ್ಸವ ಜರುಗಲಿದೆ. ಪ್ರತಿ ಮನೆಯಲ್ಲೂ ವಿಶೇಷ ಪೂಜೆ, ಬಾಲಕೃಷ್ಣನಿಗೆ ವಿಶೇಷ ನೈವೇದ್ಯಗಳನ್ನು ತಯಾರಿಸಿ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಲಾಗತ್ತಿದೆ.ಒಟ್ಟಾರೆ ಭಗವಾನ್ ಶ್ರೀ ಕೃಷ್ಣನ ಜನ್ಮ ಮಹೋತ್ಸವಕ್ಕೆ ವಿಜೃಂಭಣೆಯಿಂದ ಜನರು ಅಣಿಯಾಗಿದ್ದಾರೆ. ಎಲ್ಲ ಪ್ರಮುಖ ದೇವಾಲಯಗಳಲ್ಲೂ ವಿಶೇಷ ಹೂವಿನ ಅಲಂಕಾರಗಳು ಮಾಡಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.