ತೊಟ್ಟಂ ಚರ್ಚಿನಲ್ಲಿ ಸೈನಿಕರಿಗಾಗಿ ವಿಶೇಷ ‍ಪ್ರಾರ್ಥನೆ

| Published : May 13 2025, 11:53 PM IST

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಒಳಿತಾಗುವಂತೆ ಕೋರಿ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಭಾನುವಾರ ಬಲಿಪೂಜೆಯ ವೇಳೆ ವಿಶೇಷ ಪರಮ ಪ್ರಸಾದದ ಆರಾಧನೆಯ ಮೂಲಕ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಈ ವೇಳೆ ಮಾತನಾಡಿದ ಚರ್ಚಿನ ಧರ್ಮಗುರು ಡೆನಿಸ್ ಡೆಸಾ, ಭಾರತ ದೇಶ ವಿವಿಧ ಧರ್ಮ, ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳ ಸುಂದರ ದೇಶವಾಗಿದೆ. ನಾವೆಲ್ಲರೂ ಇಂದು ಶಾಂತಿಯಿಂದ ನಿದ್ರೆ ಮಾಡುತ್ತಿದ್ದರೆ ಅದಕ್ಕೆ ಗಡಿ ಪ್ರದೇಶದಲ್ಲಿರುವ ನಮ್ಮ ಸೈನಿಕರು ಕಾರಣರಾಗಿದ್ದಾರೆ. ಈಗಾಗಲೇ ಕದನ ವಿರಾಮ ಘೋಷಣೆಯಾಗಿದ್ದರೂ ಕೂಡ ಯುದ್ಧದ ಭೀತಿ ದೂರವಾಗಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸೈನಿಕರ ಸುರಕ್ಷತೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದು, ಕದನ ವಿರಾಮದೊಂದಿಗೆ ಯುದ್ಧಕ್ಕೆ ಶಾಶ್ವತ ವಿರಾಮ ಸಿಗಲಿ ಎಂದರು.

ಅತಿಥಿ ಧರ್ಮಗುರು ಕ್ಲೇಮಂಟ್ ಡಿಸೋಜಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಶ್ಮಾ ಹಾಗೂ ಇತರರು ಉಪಸ್ಥಿತರಿದ್ದರು.