ಕೃಷಿ ಪ್ರಗತಿಗೆ ವಿಶೇಷ ಆದ್ಯತೆ: ಜಿಪಂ ಸಿಇಒ ಅಲಿ ಅಕ್ರಂ ಷಾ

| Published : Feb 22 2025, 12:45 AM IST

ಕೃಷಿ ಪ್ರಗತಿಗೆ ವಿಶೇಷ ಆದ್ಯತೆ: ಜಿಪಂ ಸಿಇಒ ಅಲಿ ಅಕ್ರಂ ಷಾ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕ್ ಸಾಲದ ಮೂಲಕ ಅಭಿವೃದ್ಧಿಯ ಸಾಧ್ಯತೆ ವಿವರಿಸುವ ಉದ್ದೇಶದಿಂದ ವಿವಿಧ ತಜ್ಞರ ಸಮಾಲೋಚನೆಯೊಂದಿಗೆ ತಯಾರಿಸಲಾಗುತ್ತದೆ

ಹೊಸಪೇಟೆ: ವಿಜಯನಗರ ಜಿಲ್ಲೆಯ 2025-26ನೇ ಆರ್ಥಿಕ ವರ್ಷದ ನಬಾರ್ಡ್ ಪೊಟೆನ್ಸಿಯಲ್ ಲಿಂಕ್ಸ್ ಕ್ರೆಡಿಟ್ ಪ್ಲಾನ್ ಪಿಎಲ್‌ಪಿಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಶುಕ್ರವಾರ ಬಿಡುಗಡೆಗೊಳಿಸಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ನಬಾರ್ಡ್ ಪೊಟೆನ್ಸಿಯಲ್ ಲಿಂಕ್ಸ್ ಕ್ರೆಡಿಟ್ ಪ್ಲಾನ್ ಎಂಬುದು ನಬಾರ್ಡ್ ನ ಮಹತ್ವದ ದಾಖಲೆಯಾಗಿದ್ದು, ವಿವಿಧ ಕ್ಷೇತ್ರಗಳ ಪ್ರಸ್ತುತ ಸ್ಥಿತಿ ಹಾಗೂ ಶ್ರೇಣೀಕರಿಸಬಹುದಾದ ಸಾಧ್ಯತೆ ವಿಶ್ಲೇಷಿಸಿ, ಬ್ಯಾಂಕ್ ಸಾಲದ ಮೂಲಕ ಅಭಿವೃದ್ಧಿಯ ಸಾಧ್ಯತೆ ವಿವರಿಸುವ ಉದ್ದೇಶದಿಂದ ವಿವಿಧ ತಜ್ಞರ ಸಮಾಲೋಚನೆಯೊಂದಿಗೆ ತಯಾರಿಸಲಾಗುತ್ತದೆ. ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಿದ್ಧಪಡಿಸಿರುವ ಉದ್ದೇಶಿತ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ವರ್ಷದಲ್ಲಿ ₹5898.39 ಕೋಟಿ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ. ರೈತರಿಗೆ ಬೆಳೆಸಾಲಕ್ಕಾಗಿ ₹ 2561.17 ಕೋಟಿ, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ದೀರ್ಘಾವಧಿ ಸಾಲಕ್ಕೆ ₹963.07 ಕೋಟಿ, ಕೃಷಿಗೆ ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ₹ 66.83 ಕೋಟಿ ಮತ್ತು ಕೃಷಿ ಪೂರಕ ಚಟುವಟಿಕೆಗೆ ₹ 231.53 ಕೋಟಿ ಸಾಲ ನೀಡಿಕೆ ಗುರಿ ಹಾಕಿಕೊಳ್ಳಲಾಗಿದೆ. ಎಂ.ಎಸ್.ಎಂ.ಇ. ಕ್ಷೇತ್ರಕ್ಕೆ ₹ 1777.43 ಕೋಟಿ, ರಫ್ತು ಸಾಲಕ್ಕೆ ₹ 21.60 ಕೋಟಿ, ಶಿಕ್ಷಣ ಕ್ಷೇತ್ರಕ್ಕೆ ₹ 23.76 ಕೋಟಿ, ಗೃಹ ನಿರ್ಮಾಣ ಕ್ಷೇತ್ರಕ್ಕೆ ₹117.04 ಕೋಟಿ, ಸಾಮಾಜಿಕ ಮೂಲಸೌಕರ್ಯ ಕ್ಷೇತ್ರಕ್ಕೆ ₹29 ಕೋಟಿ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ₹14.03 ಕೋಟಿ, ಇತರ ಕ್ಷೇತ್ರಕ್ಕೆ ₹92.93 ಕೋಟಿ ಗುರಿ ನಿಗದಿಪಡಿಸಲಾಗಿದೆ ಎಂದರು.

ಈ ವೇಳೆ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಆರ್.ಎಸ್.ಯುವರಾಜಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಟರಾಜ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಜಿಲ್ಲಾ ಸಂಯೋಜಕರು ಇದ್ದರು.