ಶಾಲಾ ಮಟ್ಟದ ಕ್ರೀಡೆಗಳಿಗೆ ವಿಶೇಷ ಆದ್ಯತೆ: ಎಸ್.ಮಧು ಬಂಗಾರಪ್ಪ ಭರವಸೆ

| Published : Oct 02 2024, 01:01 AM IST

ಸಾರಾಂಶ

ಆನವಟ್ಟಿಯ ಕೆಪಿಎಸ್‌ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಕ್ರೀಡಾಪಟುಗಳಿಂದ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ಶಾಲಾ ಮಟ್ಟದ ಕ್ರೀಡೆಗಳಿಗೆ ವಿಶೇಷ ಆದ್ಯತೆ ನೀಡುವ ಸಲುವಾಗಿ ರಾಜ್ಯಮಟ್ಟದಲ್ಲಿ ಪ್ರಮುಖ ನಾಯಕರ ಸಮ್ಮಖದಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ ಮತ್ತು ತಾಲ್ಲೂಕು, ಜಿಲ್ಲೆಯ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವ ಯೋಜನೆಗಳನ್ನೂ ಹಾಕಿದ್ದೇವೆ, ಸಾಕಷ್ಟು ಹಣ ಬೇಕಾಗಿರುವುದರಿಂದ ಹಣ ಕ್ರೋಢೀಕರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಪ್ರಾಥಮಿಕ ಶಾಲಾ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.‌ಮಧು ಬಂಗಾರಪ್ಪ ತಿಳಿಸಿದರು.

ಮಂಗಳವಾರ ಆನವಟ್ಟಿಯ ಕೆಪಿಎಸ್‌ ಶಾಲೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 17 ವರ್ಷ ವಯೋಮಾನದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಾಲಿಬಾಲ್‌ ಹಾಗೂ ಬಾಲ್‌ ಬ್ಯಾಡ್ಮಿಂಟನ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಅಜೀಂ ಪ್ರೇಮ್‌ಜಿ ಅವರು ಸಿದ್ದರಾಮಯ್ಯ ಸರ್ಕಾರದ ಮೇಲೆ ನಂಬಿಕೆ ಇಟ್ಟು ವಿದ್ಯಾಭ್ಯಾಸಕ್ಕೆ ಮತ್ತು ಪೌಷ್ಠಿಕತೆಗಾಗಿ 1591 ಕೋಟಿ ರು. ನೀಡಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸಮಾನತೆಯಿಂದ ಮಕ್ಕಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಮಕ್ಕಳನ್ನು ಖಡ್ಡಾಯ ಶಾಲೆ ಕಳುಹಿಸಿ: ಸರ್ಕಾರದಿಂದ ಮಕ್ಕಳಿಗೆ ಬಟ್ಟೆ, ಊಟ, ಪಸ್ತಕ ಎಲ್ಲಾ ಕೋಡುತ್ತಿದ್ದೇವೆ ಆದರೆ ಪೋಷಕರು ವಾರದಲ್ಲಿ ಮೂರು ದಿನ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಮಕ್ಕಳನ್ನು ವಾರದ ಆರು ದಿನವೂ ತಪ್ಪದೆ ಶಾಲೆಗೆ ಕಳುಹಿಸಿ, ಹಾಜರಾತಿ ಕಡಿಮೆಯಿಂದ ಮಕ್ಕಳು ಫೇಲ್‌ ಆಗುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ, ಎಲ್ಲಾ ಶಿಕ್ಷಕರು ಚೆನ್ನಾಗಿ ಪಾಠ ಮಾಡುವಂತೆ ನಿಗವಹಿಸುವ ಜೊತೆಗೆ, ಮಕ್ಕಳ ಹಾಜರಾತಿ ಪೂರ್ಣ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಶಾಲೆಯಲ್ಲಿ ಯಾರೇ ತಪ್ಪು ಮಾಡಿದರೂ ಅವರನ್ನು ಸಸ್ಪೆಂಡ್‌ ಮಾಡಿ ಎಂದು ಎಚ್ಚರಿಕೆ ನೀಡಿದ ಅವರು ಪ್ರತಿಯೊಬ್ಬ ಮಗುವಿನ ಜವಾಬ್ದಾರಿ ಸರ್ಕಾರದಾಗಿದ್ದು, ಯಾವುದೇ ಮಗುವು ಶಿಕ್ಷಣದಿಂದ ವಂಚಿತ ಆಗಬಾರದು ಎಂದರು.

ಸಚಿವರಿಂದ ಮೆಚ್ಚುಗೆ: ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ ಹಾಗೂ ಅವರ ತಂಡ ಪ್ರೌಢಶಾಲೆ ವಿಭಾಗ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ 50 ಸಾವಿರ ವೆಚ್ಚದಲ್ಲಿ ಎರಡು ಪ್ಯಾಡ್‌ ಬರ್ನಿಂಗ್ ಯಂತ್ರಗಳನ್ನು ಆಳವಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೆಪಿಎಸ್‌ ಶಾಲೆಯ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ನಾಗರಾಜ ಶುಂಠಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎಂ.ಪ್ರಕಾಶ, ತಹಶೀಲ್ದಾರ್‌ ಮಂಜುಳ ಹೆಗಡಾಳ್‌, ಬಿಇಒ ಆರ್. ಪುಷ್ಪಾ, ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ್‌, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಲಿಂಗರಾಜ ಒಡೆಯರ್‌, ಇಸಿಒ ಪ್ರೇಮ್‌ ಕುಮಾರ್‌, ಪ್ರಾಂಶುಪಾಲ ಜಗದೀಶ್‌, ಉಪ ಪ್ರಾಂಶುಪಾಲ ಎಂ. ಮಹಾದೇವಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರಿಧರ್‌, ಮುಖಂಡರಾದ ಕೆ.ಪಿ ರುದ್ರಗೌಡ, ಜರ್ಮಲೆ ಚಂದ್ರಶೇಖರ್‌, ಸದಾನಂದ ಗೌಡ ಬಿಳಗಲಿ, ಚೌಟಿ ಚಂದ್ರಶೆಖರ್‌ ಪಾಟೀಲ್‌, ಸುರೇಶ್‌ ಹಾವಣ್ಣನವರ್‌, ಮಂಜಣ್ಣ ನೇರಲಗಿ ಇದ್ದರು.