ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನಲ್ಲಿ ಸುಮಾರು ೬೨೦೦ ವಿಶೇಷ ಚೇತನರಿದ್ದು ಅವರೆಲ್ಲರಿಗೂ ವಿವಿಧ ಪರಿಕರಗಳನ್ನು ವಿತರಿಸುವ ವಿಶೇಷ ಯೋಜನೆಯನ್ನು ರೂಪಿಸಿದ್ದೇನೆ. ದೆಹಲಿ ಮಟ್ಟದಲ್ಲಿ ಒಂದು ಸಂಸ್ಥೆ ಇದ್ದು ಅವರು ಹಲವು ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನ ಪಡೆದು ಶಿರಾದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಎಲ್ಲರಿಗೂ ಸವಲತ್ತು ಸಲಕರಣೆಗಳನ್ನು ನೀಡುತ್ತೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ಸೋಮವಾರ ನಗರದ ತಾ.ಪಂ. ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಮಾರು ೨೦ ಲಕ್ಷ ವೆಚ್ಚದಲ್ಲಿ ೧೭೪ ವಿಶೇಷ ಚೇತನರಿಗೆ ಎಲೆಕ್ಟ್ರಾನಿಕ್ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು. ಸರ್ಕಾರ ಯಾವಾಗಲೂ ವಿಶೇಷ ಚೇತನರ ಜೊತೆ ಇದ್ದು, ನಾನೂ ಸಹ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ವಿಶೇಷ ಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಟೈಲರಿಂಗ್ ಮೆಷಿನ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇಂದು ಜನ ಮೆಚ್ಚುವ ಕಾರ್ಯಕ್ರಮ ನಡೆಯುತ್ತಿದೆ. ವಿಶೇಷಚೇತನರು ಈ ಹೊಲಿಗೆ ಯಂತ್ರಗಳ ಪ್ರಯೋಜನ ಪಡೆದುಕೊಂಡು ಸ್ವಯಂ ಉದ್ಯೋಗ ಮಾಡಬೇಕು ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಚಿದಾನಂದ್ ಮೂರ್ತಿ ಮಾತನಾಡಿ, ವಿಕಲ ಚೇತನರ ಜೀವನ ನಿರ್ವಹಣೆಗೆ ಸರಕಾರದಿಂದ ಹಲವರು ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕರಾದ ಟಿ.ಬಿ.ಜಯಚಂದ್ರ ಅವರು ಇದಕ್ಕೆಲ್ಲಾ ಬೆಂಬಲವಾಗಿದ್ದಾರೆ. ವಿಶೇಷ ಚೇತನರಿಗೆ ಹೊಲಿಗೆ ಯಂತ್ರ ನೀಡುತ್ತಿರುವುದು ಇಡೀ ರಾಜ್ಯದಲ್ಲಿ ಮೊದಲು. ಇದು ಹೊಸ ಯೋಜನೆಯಾಗಿದ್ದು, ದೇಶಕ್ಕೆ ಮಾದರಿಯಾಗಿದೆ. ಇಂದು ಸುಮಾರು ೨೦ ಲಕ್ಷ ರು.ಗಳ ವೆಚ್ಚದಲ್ಲಿ ೧೭೪ ಫಲಾನುಭವಿಗಳಿಗೆ ಎಲೆಕ್ಟ್ರಾನಿಕ್ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದ್ದು, ಮೊದಲ ಹಂತವಾಗಿ ೭೪ ಜನರಿಗೆ ವಿತರಿಸಲಾಗಿದೆ ಎಂದರು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಆರ್ ಮಾತನಾಡಿ, ಧ್ವನಿ ಇಲ್ಲದವರಿಗೆ ಸಹಾಯ ಮಾಡುವುದು ಅತ್ಯಂತ ಮಹತ್ವ ಪೂರ್ಣ ಕಾರ್ಯಕ್ರಮ. ವಿಶೇಷ ಚೇತನರ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಅವರ ಜೊತೆ ನಿಲ್ಲಬೇಕು. ಅವರು ಉತ್ತಮ ಜೀವನ ನಡೆಸಲು ಸೌಲಭ್ಯ ನೀಡಬೇಕು. ತಾಲೂಕು ಪಂಚಾಯಿತಿಯಲ್ಲಿ ಶೇ ೫ ರಷ್ಟು ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದರು.ಎಂ.ಆರ್.ಡಬ್ಲ್ಯೂ ಚಿತ್ತಯ್ಯ ಮಾತನಾಡಿ, ಶಾಸಕ ಟಿ.ಬಿ.ಜಯಚಂದ್ರ ಅವರು ವಿಶೇಷ ಚೇತನರ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸವಲತ್ತುಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟು ಹಲವರಿಗೆ ಮೋಟಾರ್ ಸೈಕಲ್, ಶ್ರವಣ ಸಾಧನ, ತ್ರಿಚಕ್ರ ಸೈಕಲ್ ಸೇರಿದಂತೆ ಹಲವು ಸಲಕರಣೆಗಳನ್ನು ವಿಶೇಷ ಚೇತನರಿಗೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೀಡಿದ್ದಾರೆ. ನಾವೆಲ್ಲರೂ ಅವರಿಗೆ ಚಿರರುಣಿಗಳಾಗಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜು, ಮಾಜಿ ತಾ ಪಂ ಸದಸ್ಯೆ ಲಕ್ಷ್ಮಿದೇವಮ್ಮ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ಬೆಸ್ಕಾಂ ಸಮಿತಿ ಸದಸ್ಯ ಲೋಕೇಶ್, ಮುಖಂಡರಾದ ಫಜಿಲ್, ಮಾಗೋಡು ಕಂಬಣ್ಣ, ಜಗದೀಶ್ ರಿಹನ್ ಪಾಷಾ ಸೇರಿದಂತೆ ಹಲವರು ಹಾಜರಿದ್ದರು.