ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ದಿನದಂದೇ ಪಟ್ಟಣದ ತುಂಗಾನದಿ ದಡದಲ್ಲಿರುವ ಮೂರು ಶತಮಾನಗಳ ಇತಿಹಾಸವಿರುವ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ. ಎಲ್ಲ ಭಗವದ್ಭಕ್ತರೂ ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ಧಾರ್ಮಿಕ ಭಾವನೆಯನ್ನು ಹೊಂದಿರುವ ನಾವೆಲ್ಲರೂ ರಾಮಭಕ್ತರಾಗಿದ್ದೇವೆ. ಈ ದೇವಸ್ಥಾನವನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಿಂತನೆಯನ್ನೂ ನಡೆಸಿದ್ದೇವೆ. ಬಹಳ ಮುಖ್ಯವಾಗಿ ಶ್ರೀ ರಾಮನ ಪ್ರತಿಷ್ಠಾಪನೆಯಿಂದ 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣ ಮೂಡುವಂತಾಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೂ ಆಚರಣೆಗೆ ವಿರುದ್ಧ:ನರೇಂದ್ರ ಮೋದಿ ಅವರು ಒಂದು ರಾಜಕೀಯ ಪ್ರತಿನಿಧಿಯಾಗಿದ್ದು, ರಾಮನ ಪ್ರಾಣಪ್ರತಿಷ್ಠೆ ಮಾಡುವುದಕ್ಕೆ ಪ್ರಧಾನಿ ಅರ್ಹರಾಗಿಲ್ಲ. ಸಂವಿಧಾನದ ಮುಖ್ಯಸ್ಥರೂ ಆಗಿರುವ ರಾಷ್ಟ್ರಪತಿಯವರೇ ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಮುಖ್ಯವಾಗಿ ಅಪೂರ್ಣವಾದ ದೇವಾಲಯದಲ್ಲಿ ದೇವರ ಪ್ರಾಣಪ್ರತಿಷ್ಠೆ ಮಾಡುವುದು ಹಿಂದೂ ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ ಎಂದರು.
ಇದೇ ಕಾರಣಕ್ಕೆ ಈಗಾಗಲೇ ಹಲವು ಮಂದಿ ಮಠಾಧೀಶರು ಧಾರ್ಮಿಕ ಮುಖಂಡರು ಈ ಕಾರ್ಯಕ್ರಮವನ್ನೇ ಬಹಿಷ್ಕರಿಸಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೇ ತರಾತುರಿಯಾಗಿ ರಾಮಮಂದಿರದ ಉಧ್ಘಾಟನೆ ನಡೆಸಲು ಮುಂದಾಗಿದೆ ಎಂದೂ ಟೀಕಿಸಿದರು.ಹತ್ತು ವರ್ಷಗಳ ಹಿಂದೆ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಭಾವನೆಗಳನ್ನು ಕೆರಳಿಸಿ, ಮತ ಗಳಿಸುವ ಬಿಜೆಪಿ ಮುಂದಿನ ಚುನಾವಣೆಗೆ ರಾಮನನ್ನು ಬಳಸಿಕೊಳ್ಳುತ್ತಿದೆ. ನರೇಂದ್ರ ಮೋದಿ ಅವರು ನೀಡಿದ ಭರವಸೆಗಳನ್ನು ಈಡೇರಿಸುವ ಶಕ್ತಿಯನ್ನು ಈ ಹಂತದಲ್ಲಿ ಶ್ರೀರಾಮ ಪ್ರಧಾನಿ ಅವರಿಗೆ ನೀಡುವಂತಾಗಲಿ ಎಂದು ಹೇಳಿದರು.
10 ಕೋಟಿ ಜನರಿಗೆ ಉದ್ಯೋಗ, 20 ಕೋಟಿ ಜನರಿಗೆ ಮನೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಲಕ್ಷಾಂತರ ಕೋಟಿ ಹಣವನ್ನು ತಿಂದು, ಓಡಿ ಹೋದವರಿಂದ ಹಣವನ್ನು ವಾಪಾಸು ತರುವಂತಾಗಬೇಕು. ವ್ರತಾಚರಣೆಯಲ್ಲಿ ತೊಡಗಿರುವ ಪ್ರಧಾನಿ ಅವರು ವಚನಭ್ರಷ್ಟರಾಗದಂತೆ ಶ್ರೀರಾಮ ಚುನಾವಣೆಗೆ ಮುಂಚಿತವಾಗಿ ಈ ಎಲ್ಲ ಭರವಸೆಯನ್ನು ಈಡೇರಿಸುವ ಶಕ್ತಿಯನ್ನು ಪ್ರಧಾನಿ ಅವರಿಗೆ ನೀಡಲಿ ಎಂದೂ ಹಾರೈಸುತ್ತೇನೆ ಎಂದರು.ಪಕ್ಷದ ಮುಖಂಡರಾದ ಕೆಸ್ತೂರು ಮಂಜುನಾಥ್, ಡಿ.ಎಸ್. ವಿಶ್ವನಾಥ ಶೆಟ್ಟಿ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಬಿ.ಗಣಪತಿ, ರತ್ನಾಕರ ಶೆಟ್ಟಿ, ಸುಜಿತ್ ಇದ್ದರು.
- - - -19ಟಿಟಿಎಚ್02:50 ವರ್ಷಗಳನ್ನು ಪೂರೈಸಿದ ಸ್ಥಳೀಯ ಛಲಗಾರ ಪತ್ರಿಕೆ ಸಂಪಾದಕ ನಿಶಾಂತ್ ಅವರನ್ನು ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿಯಲ್ಲಿ ಗೌರವಿಸಿದರು.