ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆ ಮತ್ತು ಬಾಲ ರಾಮವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ತಾಲೂಕಿನಾದ್ಯಂತ ಭಕ್ತರಿಂದ ವಿಶೇಷ ಪೂಜೆ, ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆದವು.ತಾಲೂಕಿನ ಕಿಕ್ಕೇರಿ, ಸಂತೇಬಾಚಹಳ್ಳಿ, ರಂಗನಾಥಪುರ ಕ್ರಾಸ್, ಹೊಸಹೊಳಲು, ಹರಿಹರಪುರ, ಶೀಳನೆರೆ, ಬೂಕನಕೆರೆ ಸೇರಿದಂತೆ ಎಲ್ಲಾ ಪ್ರಮುಖ ಗ್ರಾಮ ಕೇಂದ್ರಗಳಲ್ಲಿಯೂ ಶ್ರೀ ರಾಮನ ಭಾವಚಿತ್ರಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀರಾಮ ಭಕ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಬಹುತೇಕ ಮನೆ ಮನಗಳಲ್ಲಿ ರಾಮಭಕ್ತಿ ಉಕ್ಕಿ ಹರಿದಿತ್ತು. ಮನೆಗಳ ಮುಂದೆ ರಂಗವಲ್ಲಿ ಬಿಡಿಸಿ ತೋರಣಗಳನ್ನು ಕಟ್ಟಿ ಭಕ್ತರು ಹಬ್ಬದ ವಾತಾವರಣದಲ್ಲಿ ಮುಳುಗಿದ್ದರು.ಪಟ್ಟಣದ ಬೃಂದಾವನ ಹನುಮಂತರಾಯಸ್ವಾಮಿ ದೇವಾಲಯದಲ್ಲಿ ಸೀತಾರಾಮ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಟಾನೆಯನ್ನು ಮಾಡಲಾಯಿತು. ವಿವಿಧ ಪೂಜೆಗಳ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಪಟ್ಟಣದ ಹೇಮಾವತಿ ವೃತ್ತ, ಟಿ.ಬಿ.ವೃತ್ತ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣ, ಎಲ್ಲ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಭಕ್ತರು ಶ್ರೀರಾಮನ ಭಾವಚಿತ್ರವನ್ನು ಅಲಂಕರಿಸಿ ಪೂಜೆ ಸಲ್ಲಿಸಿಸಿ ಸಂಭ್ರಮಿಸಿದರು.ಶ್ರೀರಾಮ ಭಾವಚಿತ್ರ ವಿತರಣೆ, ಕೊಸಂಬರಿ, ಪಾನಕ, ಮಜ್ಜಿಗೆ ವಿತರಣೆ , ಅನ್ನ ಸಂತರ್ಪಣೆ ನಡೆಸಲಾಯಿತು.ಪಕ್ಷ ಬೇದ ಮರೆತು ರಾಮ ಭಕ್ತರು ಒಗ್ಗೂಡಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ ಜಯಕಾರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ವೇಳೆ ಆರ್.ಟಿ.ಓ ಮಲ್ಲಿಕಾರ್ಜುನ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಸದಸ್ಯ ಕೆ.ಎಸ್.ಸಂತೋಷ್ ಕುಮಾರ್, ಮಾಜಿ ಸದಸ್ಯ ನಂದೀಶ್, ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ, ದಿನೇಶ್, ರಮೇಶ್, , ಶ್ರೀರಾಮ ಭಕ್ತ ಸಮಿತಿ ಹೆಚ್.ವರುಣಗೌಡ, ಪ್ರವೀಣ್ ಮಾಮು, ಪ್ರಭಣ್ಣ, ಚಂದ್ರಕಂತ್, ಶ್ರೀನಿವಾಸ್ ಮತ್ತಣ್ಣ, ಕೆ.ಬಿ.ವಿ ವರುಣ್, ಅರುಣ್, ಪ್ರಮೋದ್, ಅಭಿ, ಚೇತನ್, ಶಶಾಂಕ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.ಎಚ್ ಡಿಡಿ ಅಭಿಮಾನಿಗಳಿಂದ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಕೆಕೆ.ಆರ್.ಪೇಟೆ ಪಟ್ಟಣದ ಹೊರವಲಯದ ತಾಲೂಕು ಎಚ್.ಡಿ.ದೇವೇಗೌಡ ಅಭಿಮಾನಿ ಬಳಗದಿಂದ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಾಸಕ ಎಚ್.ಟಿ.ಮಂಜು, ಮನ್ಮುಲ್ ನಿರ್ದೇಶಕ ಡಾಲು ರವಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರು ಭಾಗವಹಿಸಿದ್ದರು.ಶ್ರೀರಾಮಮಂದಿರದ ಪುನರ್ ನಿಮಾಣ ಮತ್ತು ರಾಮಲಲ್ಲಾ ಮೂರ್ತಿಯ ಪ್ರತಿಷ್ಟಾಪನೆ ಸಮಸ್ತ ಭಾರತೀಯರ ಸ್ವಾಭಿಮಾನದ ಸಂಕೇತವಾಗಿದೆ. ಕಳೆದ 500 ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಭಾರತೀಯ ಸಂಸ್ಕೃತಿಯ ಪುನರೋತ್ಥಾನಕ್ಕೆ ಇದು ನಾಂದಿಯಾಗಿದೆ. ಸಮಸ್ತ ಜಗತ್ತು ಮುಂದಿನ ದಿನಗಳಲ್ಲಿ ಭಾರತೀಯರ ಆಧ್ಯಾತ್ಮಕ ಚಿಂತನೆಯತ್ತ ಆಲೋಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ಜೆಡಿಎಸ್ ಕಾರ್ಯಕರ್ತರು ಭಕ್ತರು ಭಾಗವಹಿಸಿದ್ದರು.