ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೂರನೇ ಕಾರ್ತಿಕ ಸೋಮವಾರದ ಅಂಗವಾಗಿ ನಗರದ ಜಿಲ್ಲಾದ್ಯಂತ ಎಲ್ಲ ಶೈವ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಅಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.ನಗರದ ಅದಿದೇವತೆ ಶ್ರೀಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಆರಂಭವಾದರು. ರಾತ್ರಿ 2 ಗಂಟೆಗೆ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಹೋಮ-ಹವನಗಳನ್ನು ನಡೆಸಲಾಯಿತು. ನಂತರ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಮುಂಜಾನೆ 5ರ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
3ನೇ ಕಾರ್ತಿಕ ಸೋಮವಾರದ ಅಂಗವಾಗಿ ದೇವಾಲಯದ ಒಳಾವರಣದಲ್ಲಿ ವಿಶೇಷವಾಗಿ ಭಕ್ತಾದಿಗಳು ಲಕ್ಷಾಂತರ ರು. ಖರ್ಚು ಮಾಡಿ ವಿವಿಧ ಬಗೆಯ ಹಣ್ಣುಗಳು ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ಸ್ವಾಮಿಗೆ ಶೇಷಾಲಂಕಾರ ಮಾಡಲಾಗಿತ್ತು.ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಬಳಿಕ ಹಲವು ಮಂದಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಪ್ರಸಾದ ವಿತರಿಸಿದರು.
ಬೆಳಗಿನಿಂದಲೇ ಹಲವು ಭಜನಾ ಮಂಡಳಿಗಳು ಭಜನೆ, ದೇವರ ಕೀರ್ತನೆಗಳನ್ನು ಹಾಡಿದರು. ಶಂಕರಪುರ ಬಡಾವಣೆಯ ಶ್ರೀ ಗಂಗಾಧರೇಶ್ವರ, ಗಾಂಧಿನಗರದ ಮಹದೇಶ್ವರ, ಹಾಲಹಳ್ಳಿಯ ಶ್ರೀಮಹದೇಶ್ವರ, ಕೆರೆಬೀದಿಯ ಶ್ರೀಸಕಲೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್‍ಯಕ್ರಮಗಳು ಸಾಂಗೋಪಸಾಂಗವಾಗಿ ನಡೆಯಿತು.ಮದ್ದೂರಿನಲ್ಲಿ ಪೂಜೆ: ಮದ್ದೂರಿನ ಶ್ರೀವೈಧ್ಯನಾಥೇಶ್ವರ, ಹನಮಂತನಗರದ ಶ್ರೀ ಆತ್ಮಲಿಂಗೇಶ್ವರ ಸೇರಿದಂತೆ ವಿವಿಧ ದೇವಳಗಳಲ್ಲಿ ವಿಶೇಷ ಪೂಜೆ ನಡೆಯಿತು. ಶ್ರೀರಂಗಪಟ್ಟಣದ ಗಂಜಾಂನ ಶ್ರೀ ಮೌಕ್ತಿಕೇಶ್ವರ-ನಿಮಿಷಾಂಭ, ಕಾಶಿ ವಿಶ್ವನಾಥೇಶ್ವರ, ಚಂದ್ರವನ ಆಶ್ರಮದ ಚಂದ್ರಮೌಳೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿವಿಧ ಪೂಜಾ ಕಾರ್‍ಯಗಳು ನಡೆದವು.ಕೆ.ಆರ್.ಪೇಟೆ ತಾಲೂಕು: ಕೆ.ಆರ್.ಪೇಟೆ ತಾಲೂಕು ಸಾಸಲು ಶಿವನ ದೇವಾಲಯ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ನಾಗಮಂಗಲ ತಾಲೂಕು: ನಾಗಮಂಗಲದ ಶ್ರೀಆದಿಚುಂಚನಗಿರಿ ಶ್ರೀಕ್ಷೇತ್ರದ ಗಂಗಾಧರೇಶ್ವರಸ್ವಾಮಿ, ಆಲತಿ ಮಲ್ಲಿಕಾರ್ಜುನಸ್ವಾಮಿ ಹಾಗೂ ಪಾಂಡವಪುರದ ಪಟ್ಟಸೋಮನಹಳ್ಳಿಯ ಶಿವನ ದೇವಾಲಯ ಹಾಗೂ ಮಳವಳ್ಳಿ ತಾಲೂಕಿನ ಮತ್ತಿತಾಳೇಶ್ವರ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.;Resize=(128,128))
;Resize=(128,128))
;Resize=(128,128))