ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಶಿವರಾತ್ರಿ ಅಂಗವಾಗಿ ಬುಧವಾರ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಸಾವಿರಾರು ಮಂದಿ ಭಕ್ತರು ಸಮೀಪದ ಶಿವ ದೇವಾಲಯಗಳಿಗೆ ತೆರಳಿ ದೇವರ ದರ್ಶನಪಡೆದು ಪುನೀತ ಭಾವ ತಾಳಿದರು.ರಾಮಾನುಜ ರಸ್ತೆಯ ಶಿಲ್ಪಿಸಿದ್ದಲಿಂಗಸ್ವಾಮಿಗಳ ಮಠದ ಆವರಣದಲ್ಲಿನ ನೂರೊಂದು ಶಿವಲಿಂಗಕ್ಕೆ ಸಾರ್ವಜನಿಕರೇ ಅಭಿಷೇಕ ನೆರವೇರಿಸಿ, ಬಿಲ್ವಪತ್ರೆಯನ್ನಿರಿಸಿ ಪೂಜೆ ಸಲ್ಲಿಸಿದರು.ದೇವಸ್ಥಾನಕ್ಕೆ ಭಕ್ತರು ಸರದಿ ಸಾಲಿನಲ್ಲಿ ಆಗಮಿಸಿ ಪೂಜೆ ಸಲ್ಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಆಸಕ್ತ ಭಕ್ತರು ಮನೆಯಿಂದಲೇ ಹಾಲು, ಮೊಸರು, ತುಪ್ಪ, ಅಶ್ವಗಂಧ ಮುಂತಾದ ವಸ್ತುವಿನೊಡನೆ ಆಗಮಿಸಿ ಶಿವಲಿಂಗಕ್ಕೆ ಅಭಿಷೇಕ ನೆರವೇರಿಸಿದರು.ಕೆ.ಜಿ. ಕೊಪ್ಪಲು ಮತ್ತು ವಿವಿ ಮೊಹಲ್ಲಾದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ಶ್ರದ್ಧಾ ಭಕ್ತಿಯಿಂದ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದರು. ಮಹಾಶಿವರಾತ್ರಿ ಅಂಗವಾಗಿ ಉತ್ಸವ, ಅಭಿಷೇಕ, ಅರ್ಚನೆ ನೆರವೇರಿತು.ಶ್ರೀ ಮುಕ್ಕಣ್ಣೇಶ್ವರಸ್ವಾಮಿಯವರ ದೇವಸ್ಥಾನದಲ್ಲಿ ಶ್ರೀ ಗಣಪತಿ ಪೂಜೆ, ಕಳಸ ಸ್ಥಾಪನೆ, ನವಗ್ರಹ ಪೂಜೆ, ಶ್ರೀ ಮುಕ್ಕಣ್ಣೇಶ್ವರಸ್ವಾಮಿಗೆ ಪಂಚಾಮೃತ, ರುದ್ರಾಭಿಷೇಕ, ಅರ್ಚನೆ, ಮಹಾಮಂಗಳಾರತಿ ನೆರವೇರಿತು.ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯ ನಾಗರಿಕ ವೇದಿಕೆಯ ಶ್ರೀ ಪ್ರಸನ್ನ ಶಿವಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಹೂವಿನಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆಯ ಬಳಿಕ ಪ್ರಸಾದ ವಿನಿಯೋಗ ನೆರವೇರಿತು. ಸಂಜೆ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಬೃಂದಾವನ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶಿವನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು.ಶ್ರೀ ಮಹಾರಾಜ ಸಂಸ್ಕೃತ ಪಾಠಶಾಲಾ ಆವರಣದ ಶ್ರೀ ಸದ್ಗುರು ಸೇವಾ ಮಂಡಲದಲ್ಲಿ ವಿಶೇಷ ಪೂಜೆ ನೆರವೇರಿತು. ಶ್ರೀ ವಿದ್ಯಾಭಿನವ ವಾಲುಕೇಶ್ವರ ಭಾರತಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.ರಾಮಾನುಜ ರಸ್ತೆಯ ಶ್ರೀ ಕಾಮೇಶ್ವರ ಕಾಮೇಶ್ವರಿ ದೇವಸ್ಥಾನದಲ್ಲಿ ದಲ್ಲಿ ವಿಜಯ ವಿಶ್ವೇಶ್ವರಸ್ವಾಮಿಗೆ ಏಕಾದಶಾವಾರ ರುದ್ರಾಭಿಷೇಕ ನೆರವೇರಿತು. ಅಮ್ಮನವರ ಸಹಿತ ಶ್ರೀ ಸ್ವಾಮಿಯ ಪ್ರಾಕಾರೋತ್ಸವ, ಅಷ್ಟಾವದಾನ ಸೇವೆಯು ನೆರವೇರಿತು.ಎಂ.ಎಲ್. ಜೈನ್ ಬೋರ್ಡಿಂಗ್ ನ ಶ್ರೀ ಪಾರ್ಶ್ವನಾಥಸ್ವಾಮಿ ಬಸದಿಯ ವರ್ಧಮಾನ್ಜೈನ್ಮಿಲನ್ ನಲ್ಲಿ ಭಗವಾನ್ಶ್ರೀ ಆದಿನಾಥರ ಮೋಕ್ಷ ಕಲ್ಯಾಣ ದಿನ ಮತ್ತು ಜಿನರಾತ್ರಿ ಪ್ರಯುಕ್ತ ಅಖಂಢಮೋಕಾರ ಮಂತ್ರ ಪಠಣ ನೆರವೇರಿತು.ಬೃಂದಾವನ ಬಡಾವಣೆಯ ಶ್ರೀ ಸದ್ಗುರು ಸೇವಾ ಟ್ರಸ್ಟ್ ನಲ್ಲಿ ಶಿವರಾತ್ರಿ ವಿಶೇಷಪೂಜೆ, ಪುಣ್ಯಾಹ, ಮಹಾನ್ಯಾಸ, ಪಂಚಾಮೃತಭಿಷೇಕ, ರುದ್ರಾಭಿಷೇಕ ನೆರವೇರಿತು.ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆಯ ಶ್ರೀ ಅಮೃತೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀ ಬಾಲಾತ್ರಿಪುರ ಸುಂದರಿ ಸಮೇತನಾದ ಶ್ರೀ ಅಮೃತೇಶ್ವರಸ್ವಾಮಿಗೆ ಪಂಚಾಮೃತ ಪುರಸ್ಪರ ರುದ್ರಾಭಿಷೇಕ ನೆರವೇರಿತು. 108 ಪಾರ್ಥಿವ ಅಂಗ ಪೂಜೆ, ಪ್ರದೋಷ ಕಾಲದಲ್ಲಿ ಪಂಚಾಮೃತ ಪುರಸ್ಪರರುದ್ರಾಭಿಷೇಕ, ರಾಶಿ ಪೂಜೆ, ರಂಗಪೂಜೆ, ಮಹಾಕೈಲಾಸ ಶಿಖರ ದೀಪಾರಾಧನೆಯು ನೆರವೇರಿತು. ಚಾಮುಂಡಿಪುರಂನ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾದಲ್ಲಿ ಶಿವರಾತ್ರಿ ಅಂಗವಾಗಿ ಸಂಗೀತ ಸಂಭ್ರಮ ಆಯೋಜಿಸಲಾಗಿತ್ತು. ಕರ್ನಾಟಕ ಸುಗಮ ಸಂಗೀತ ಪರಿಷತ್, ಗಾನನಂದನ ವತಿಯಿಂದ ಶಿವರಾತ್ರಿ ಅಂಗವಾಗಿ ಶಿವ ಗಾನಾಮೃತ ಕಾರ್ಯಕ್ರಮವನ್ನು ಸಿದ್ಧಾರ್ಥನಗರದ ಶ್ರೀ ಬನ್ನಿ ಮಹಾಕಾಳೇಶ್ವರಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿತ್ತು. ನಾಗರಾಜ ವಿ .ಬೈರಿ, ಎನ್. ಬೆಟ್ಟೇಗೌಡ, ಡಾ.ವೈ.ಡಿ. ರಾಜಣ್ಣ, ಆರ್. ಲಕ್ಷ್ಮಣ್, ಡಾ. ಶ್ರೀಲತಾ, ಸಿ.ಎಸ್. ವಾಣಿ, ಗೀತಲಕ್ಷ್ಮಿ ಕಿಣಿ, ಸುಜಾತಾ, ನಾಗರತ್ನ, ಸುಮಿತ್ರಾ ಮೊದಲಾದವರು ಪಾಲ್ಗೊಂಡಿದ್ದರು.