ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ಶ್ರೀಚೆಲ್ವತಿರುನಾರಾಯಣಸ್ವಾಮಿಗೆ ಮುಕ್ಕೋಟಿ ದ್ವಾದಶಿ ನಿಮಿತ್ತ ಬಂಗಾರದ ಕವಚಧಾರಣೆಯೊಂದಿಗೆ ವಿಶೇಷ ಪೂಜೆ ನೆರವೇರಿತು.ನಾರಾಯಣನ ದರ್ಶನಕ್ಕೆ ಪ್ರಶಸ್ತ ದಿನವಾದ ಶನಿವಾರ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಚೆಲುವನಾರಾಯಣಸ್ವಾಮಿ ಸನ್ನಿಧಿಯೇ ನಿತ್ಯವೈಕುಂಠವಾದ ಕಾರಣ ಸ್ವಾಮಿಸನ್ನಿಧಿಯಲ್ಲಿ ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆಗೆಯುವ ಪದ್ಧತಿ ಹಾಗೂ ವಿಶೇಷ ಆಚರಣೆ ಇಲ್ಲ.ಆದರೆ, ದ್ವಾದಶಿಯಂದು ಚೆಲುವನಾರಾಯಣಸ್ವಾಮಿಗೆ ಮಹಾರಾಜರು ಸಮರ್ಪಿಸಿರುವ ಬಂಗಾರದ ಕವಚವನ್ನು ಧರಿಸುವ ಸಂಪ್ರದಾಯವಿದ್ದು, ಬೊಕ್ಕಸದಲ್ಲಿಡಲಾಗಿದ್ದ ಬಂಗಾರದ ಕವಚವನ್ನು ಸ್ಥಾನೀಕರು ಅರ್ಚಕ ಪರಿಚಾರಕರ ಸಮಕ್ಷಮದಲ್ಲಿ ತೆಗೆದು ಪರಿಶೀಲಿಸಿ ಸ್ವಾಮಿಗೆ ಧರಿಸಿ ವಿಶೇಷಪೂಜೆ ನೆರವೇರಿಸಲಾಯಿತು.
ದ್ವಾದಶಿಯ ಸಂಜೆ ಕೊಠಾರೋತ್ಸವದ ನಿಮಿತ್ತ ಉತ್ಸವ ಮೂರ್ತಿ ಚೆಲುವನಾರಾಯಣಸ್ವಾಮಿಗೆ ಕೊಠಾರೋತ್ಸವ ವೈಭವದಿಂದ ನೆರವೇರಿತು. ಸಂಜೆ 8ನೇ ದಿನದ ಕೊಠಾರೋತ್ಸವ ನಡೆದ ನಂತರ ಆಂಡವನ್ ಆಶ್ರಮದ ವತಿಯಿಂದ ಪುಷ್ಪಕೈಂಕರ್ಯ ನೆರವೇರಿತು.ಮಕರ ಸಂಕ್ರಾಂತಿ ಮತ್ತು ಅಂಗಮಣಿ ಉತ್ಸವ:
ಚೆಲುವನಾರಾಯಣಸ್ವಾಮಿಗೆ ಜ.14 ರಂದು ಮಕರಸಂಕ್ರಾಂತಿ ಹಬ್ಬದ ವಿಶೇಷ ಉತ್ಸವ ನೆರವೇರಲಿದೆ. ಅದರ ಮರುದಿನ ಕನೂ ಹಬ್ಬದ ಅಂಗವಾಗಿ ಜ.15ರಂದು ಪ್ರಖ್ಯಾತ ಅಂಗಮಣಿ ಉತ್ಸವ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಅಭಿಷೇಕ ನಂತರ ಕಲ್ಯಾಣಿಗೆ ಉತ್ಸವ ನಡೆದರೆ, ರಾತ್ರಿ 7 ಗಂಟೆಗೆ ತವರುಮನೆ ಉತ್ಸವ ನಡೆಯಲಿದೆ.ಶ್ರೀಲಕ್ಷ್ಮೀನಾರಾಯಣಸ್ವಾಮಿಗೆ ಪೂಜೆ ಮಹೋತ್ಸವ
ಪಾಂಡವಪುರ:ಪಟ್ಟಣದ ಹಾರೋಹಳ್ಳಿಯಲ್ಲಿ ವೈಕುಂಠ ಏಕಾದಶಿ ಪೂಜೆ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ಜೀರ್ಣೋದ್ಧಾರ ಸಮಿತಿ ವತಿಯಿಂದ ವೈಕುಂಠ ಏಕಾದಶಿ ಪೂಜಾ ಮಹೋತ್ಸವದಲ್ಲಿ ಅಪಾರ ಭಕ್ತರು ಭಾಗವಹಿಸಿದ್ದರು.ಬೆಳಗಿನ ಜಾವಾದಿಂದಲೇ ದೇವಸ್ಥಾನದಲ್ಲಿ ಶ್ರೀದೇವಿ, ಭೂದೇವಿಗೆ ವಿಶೇಷ ಪೂಜೆ ಹಾಗೂ ಹೋಮ, ಹವನ ಕಾರ್ಯಕ್ರಮವು ನಡೆಯಿತು. ಶ್ರೀದೇವಿ, ಭೂದೇವಿ ಸಮೇತ ಶ್ರೀಲಕ್ಷ್ಮೀನಾರಾಯಣಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಬೆಣ್ಣೆ ಅಲಂಕಾರ, ಸುಪ್ರಭಾತ ಸೇವೆ, ಮಹಾಮಂಗಳಾರತಿ ಕಾರ್ಯಕ್ರಮ, ಪ್ರಕಾರ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿನಯೋಗಿಸಲಾಯಿತು.