ಕರಪತ್ರ ಬಿಡುಗಡೆ ಮಾಡಿದ ಡಾ. ಪದ್ಮಕ್ಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಳಿಯಾಳಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ 90ನೇ ತ್ರಿಮೂರ್ತಿ ಮಹಾಶಿವರಾತ್ರಿಯ ಅಂಗವಾಗಿ ಮೂರು ದಿನಗಳ ಕಾಲ ಬೃಹತ್ ಶಿವಲಿಂಗಗಳ ದರ್ಶನ ಹಾಗೂ ಏಳು ದಿನಗಳ ರಾಜಯೋಗ ಶಿಬಿರ ಸೇರಿದಂತೆ ಸಾಂಸ್ಕೃತಿಕ ಹಾಗೂ ವಿವಿಧ ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಳಿಯಾಳ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಡಾ. ಬಿ.ಕೆ. ಪದ್ಮಕ್ಕ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿವರಾತ್ರಿಯ ನಿಮಿತ್ತ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರಗಳ ಮಾಹಿತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.ಮಹಾಶಿವರಾತ್ರಿಯ ಅಂಗವಾಗಿ ಶಿವಾನುಭೂತಿ ಭವನದಲ್ಲಿ ಪಂಚಧಾನ್ಯ ಶಿವಲಿಂಗ, ಜಲಾಭಿಷೇಕ ಶಿವಲಿಂಗ, ಪುಷ್ಪ ಶಿವಲಿಂಗ, ಪ್ರಕಾಶ ಜ್ಯೋರ್ತಿಲಿಂಗ ಹಾಗೂ ದ್ವಾದಶ ಶಿವಲಿಂಗಗಳ ದರ್ಶನ ಮೂರು ದಿನಗಳ ವರೆಗೆ ಬೆಳಗ್ಗೆ 8.30ರಿಂದ ಸಂಜೆ 7.30ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದರು.
ಶಿವಲಿಂಗ ದರ್ಶನ:
ಫೆ 14ರಂದು ಹಳಿಯಾಳ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಅವರು ಶಿವಲಿಂಗಗಳ ದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಹಾನಗಲ್ ಸೇವಾ ಕೇಂದ್ರದ ಸಂಚಾಲಕ ಬಿ.ಕೆ. ಶೈಲಜಾ ಸಾನ್ನಿಧ್ಯ ವಹಿಸಲಿದ್ದಾರೆ. ಹಳಿಯಾಳ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಡಾ. ಬಿ.ಕೆ. ಪದ್ಮಕ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ವಿ.ಆರ್.ಡಿ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ವಕೀಲ ಚಂದ್ರಶೇಖರ್ ನುಚ್ಛಂಬ್ಲಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಆಗಮಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ:ದುರ್ಗಾದೇವಿ ನಾಟ್ಯಕಲಾ ಸಂಘದಿಂದ ನೃತ್ಯ ನಮನ, ಸುಮಾ ಹಡಪದ, ಡಾ. ಚಂದ್ರಶೇಖರ ಓಶೀಮಠ ಮತ್ತು ಭಾರತಿ ಗೊಂದಳಿ ಅವರಿಂದ ಗೀತಗಾಯನ ನಡೆಯಲಿದೆ. ಹೊಂಗಿರಣ ಗೊಂಬೆಯಾಟ ಕಲಾತಂಡದಿಂದ ಸರ್ವ ಧರ್ಮಕ್ಕೂ ಭಗವಂತ ಒಬ್ಬನೇ ಎಂಬ ಸಂದೇಶ ಸಾರುವ ಗೊಂಬೆಯಾಟದ ಪ್ರದರ್ಶನ ನಡೆಯಲಿದೆ.
ವಿಶೇಷ ಕಾರ್ಯಕ್ರಮಗಳು:ಫೆ: 15ರಂದು ಬೆಳಗ್ಗೆ ಸೇವಾ ಕೇಂದ್ರದಲ್ಲಿ ಶಿವ ಧ್ವಜಾರೋಹಣ, ಅಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಶಿವನ ಸಂದೇಶ ಸಾರುವ ಚಿತ್ರ ಪ್ರದರ್ಶನ ನಡೆಯಲಿದೆ. ಫೆ. 14ರಿಂದ 20ರ ವರೆಗೆ ಪ್ರತಿದಿನ ಸಂಜೆ ಸೇವಾ ಕೇಂದ್ರದಲ್ಲಿ ರಾಜಯೋಗ ಶಿಬಿರ ಸಂಜೆ 6.30ರಿಂದ 7.30ರ ವರೆಗೆ ನಡೆಯಲಿದೆ ಇದರ ಸದುಪಯೋಗವನ್ನು ಹಳಿಯಾಳ ತಾಲೂಕಿನ ಸಾರ್ವಜನಿಕರು ಪಡೆಯಬೇಕು ಎಂದು ಮನವಿ ಮಾಡಿದರು.
ಪುರಸಭಾ ಮಾಜಿ ಅಧ್ಯಕ್ಷೆ ಪ್ರೇಮಾ ತೋರಣಗಟ್ಟಿ, ಬಯಲಾಟ ಆಕಾಡೆಮಿಯ ಸದಸ್ಯೆ ಸುಜಾತಾ ಬಿರಾದಾರ್, ಸಹೋದರಿ ನೀತಾ ಹಾಗೂ ಬಿ.ಕೆ. ಲಕ್ಷ್ಮೀ ಇದ್ದರು.