ಕನ್ನಡಪ್ರಭ ವಾರ್ತೆ, ಸಕಲೇಶಪುರ

ಮುಂಗಾರು ಅವಧಿಯಲ್ಲಿ ಸಂಭವಿಸಬಹುದಾದ ಭೂಕುಸಿತ, ಅತಿವೃಷ್ಟಿ, ಪ್ರವಾಹ ಸೇರಿ ವಿವಿಧ ನೈಸರ್ಗಿಕ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಸಕಲೇಶಪುರ ಉಪವಿಭಾಗದಲ್ಲಿ ವಿಶೇಷ ವಿಪತ್ತು ನಿರ್ವಹಣಾ ಕಾರ್ಯಪಡೆ ರಚಿಸಲಾಗಿದ್ದು, ಭೂಕುಸಿತ ಸಂಭವನೀಯ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಸಮಗ್ರ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹುಲೆಮನೆ ತಿಮ್ಮಣ್ಣ ತಿಳಿಸಿದರು.

ಮುಂಗಾರು ಸನ್ನದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ಕಾರ್ಯಪಡೆ ಸಮಿತಿ ರಚಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಸದ್ಯ 17 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳ ಅಪಾಯದ ನಕ್ಷೆ (ಹಜಾರ್ಡ್ ಮ್ಯಾಪಿಂಗ್) ಸಿದ್ಧಪಡಿಸಲಾಗುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಡ್ರೋನ್ ತಂತ್ರಜ್ಞಾನ ಬಳಸಿಕೊಂಡು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ವರ್ಷ ಭೂಕುಸಿತಕ್ಕೆ ತುತ್ತಾಗುವ ರಾಷ್ಟ್ರೀಯ ಹೆದ್ದಾರಿ-75ರ ಸಕಲೇಶಪುರ–ಮಾರನಹಳ್ಳಿ ವ್ಯಾಪ್ತಿಯಲ್ಲಿ ವಿಶೇಷ ನಿಗಾ ವಹಿಸಲಾಗಿದ್ದು, ಅಧಿಕಾರಿಗಳು ಎರಡು ದಿನಕ್ಕೊಮ್ಮೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಅಪಾಯದ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು, ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವುದು ಹಾಗೂ ತಡೆಗೋಡೆಗಳ ಸ್ಥಿತಿಯನ್ನು ಪರಿಶೀಲಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.


ತುರ್ತು ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ಕ್ರೇನ್‌ಗಳು, ಆಂಬುಲೆನ್ಸ್‌ಗಳು, ಜನರೇಟರ್‌ ಹೊಂದಿದ ಬೆಳಕು ವಾಹನಗಳು ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಅಪಘಾತದ ಬಳಿಕದ ''''''''''''''''ಗೋಲ್ಡನ್ ಅವರ್'''''''''''''''' ಅವಧಿಯಲ್ಲಿ ತ್ವರಿತ ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮಳೆಗಾಲದಲ್ಲಿ ಮೊಬೈಲ್ ಸಂಪರ್ಕ ವ್ಯತ್ಯಯವಾಗುವ ಪ್ರದೇಶಗಳಲ್ಲಿ ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ವೈರ್‌ಲೆಸ್ ಹಾಗೂ ವಾಕಿ-ಟಾಕಿ ವ್ಯವಸ್ಥೆ ಬಳಸಲಾಗುವುದು. ಹೆದ್ದಾರಿ ಹಾಗೂ ಕಂಟ್ರೋಲ್ ರೂಂಗಳ ನಡುವೆ ನಿರಂತರ ಸಂಪರ್ಕ ಕಾಪಾಡಲು 24 ಗಂಟೆಗಳ ನಿಗಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿ 24×7 ಕಂಟ್ರೋಲ್ ರೂಂ ಹಾಗೂ ವಾರ್ ರೂಂ ಕಾರ್ಯನಿರ್ವಹಿಸಲಿದ್ದು, ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಿ ಕುಡಿಯುವ ನೀರು, ಆಹಾರ ಹಾಗೂ ವೈದ್ಯಕೀಯ ನೆರವು ಒದಗಿಸಲಾಗುವುದು. ಜೂ. 23ರಂದು ಆನೆಮಹಲ್ ಅಚೀವರ್ಸ್ ಶಾಲೆ ಮುಂಭಾಗದಲ್ಲಿ ಎನ್‌ಡಿಆರ್‌ಎಫ್ ಸಹಯೋಗದಲ್ಲಿ ಭೂಕುಸಿತ ಜಾಗೃತಿ ಹಾಗೂ ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತ ಅಣಕು ಪ್ರದರ್ಶನ (ಮಾಕ್ ಡ್ರಿಲ್) ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್, ಸರ್ಕಲ್ ಇನ್‌ಸ್ಪೆಕ್ಟರ್ ವನರಾಜ್, ಪುರಸಭೆ ಮುಖ್ಯಾಧಿಕಾರಿ ಮಹದೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಸಹಾಯಕ ಕೃಷಿ ನಿರ್ದೇಶಕರು, ಅಗ್ನಿಶಾಮಕ ದಳ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ವಿಭಾಗ, ಅರಣ್ಯ ಇಲಾಖೆ, ಚೆಸ್ಕಾಂ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.