ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಅವರು ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸ್ವತಃ ಕರ ವಸೂಲಿ ಮಾಡಿದರು.
ಶಿರಹಟ್ಟಿ: ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪ್ರಸ್ತುತ ನಡೆದ ಕರ ವಸೂಲಿ ಅಭಿಯಾನದಲ್ಲಿ ₹11802648 ಹಣ ತೆರಿಗೆ ಸಂಗ್ರಹಣೆ ಮಾಡಲಾಗಿದ್ದು, ಇದು ಎಲ್ಲರ ಗಮನ ಸೆಳೆಯುವ ಜತೆಗೆ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಅವರು ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸ್ವತಃ ಕರ ವಸೂಲಿ ಮಾಡುವುದರ ಜತೆಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಸಿಬ್ಬಂದಿ ಕಳೆದ ಒಂದು ತಿಂಗಳಿಂದ ಅಭಿಯಾನದ ರೂಪದಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡಿದ್ದರಿಂದ ಪ್ರಸಕ್ತ ಸಾಲಿನಲ್ಲಿ ತಾಲೂಕಿನ ₹1,57,12,122 ಗಳ ಒಟ್ಟು ಬೇಡಿಕೆಯಲ್ಲಿ 1,18,02,648 ಕರ ವಸೂಲಿಯಾಗಿ ಪ್ರಸ್ತುತ ಶೇ. 75.57ರಷ್ಟು ಕರ ವಸೂಲಾತಿಯಾಗಿದೆ ಎಂದರು.
ಆನ್‌ಲೈನ್ ಪಾವತಿ ವ್ಯವಸ್ಥೆ ಹಾಗೂ ಡಿಜಿಟಲ್ ಸೇವೆಗಳ ಅನುಷ್ಠಾನದಿಂದ ತೆರಿಗೆ ಪಾವತಿ ಸುಲಭವಾಗಿ ಸಮಯಕ್ಕೆ ಸರಿಯಾಗಿ ನಡೆಯಬೇಕು. ತೆರಿಗೆ ಬಾಕಿದಾರರ ಕುರಿತು ಜಾಗೃತಿ ಅಭಿಯಾನ, ಮನೆ ಮನೆಗೆ ಭೇಟಿ ಹಾಗೂ ಸಭೆಗಳ ಮೂಲಕ ಸಾರ್ವಜನಿಕರಲ್ಲಿ ತೆರಿಗೆ ಪಾವತಿಯ ಮಹತ್ವವನ್ನು ಅರಿವು ಮೂಡಿಸಬೇಕು ಎಂದರು.ಅಭಿಯಾನದ ವಿಶೇಷತೆ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಠ 200 ಆಸ್ತಿ ಮಾಲೀಕರನ್ನು ಗುರುತಿಸಿ ಅವರಿಗೆ ತಗಾದೆ ನೋಟಿಸು ನೀಡಿ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ, ಸಂಪೂರ್ಣ ಮೊತ್ತ ಪಾವತಿಸಿಕೊಳ್ಳುವುದು. ತೆರಿಗೆ ಪಾವತಿ ಬಾಕಿ ಹೊಂದಿರುವ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರರಿಗೆ ನೋಟಿಸ್ ನೀಡಿ ಶೇ. 100ರಷ್ಟು ಬಾಕಿ ವಸೂಲಿ ಮಾಡಲು ಸೂಚಿಸಲಾಗಿತ್ತು. ಅದರಂತೆ ಅಭಿಯಾನದ ದಿನದಂದು ಕರ ವಸೂಲಿ ಮಾಡಲಾಗಿದೆ. ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿ ಹಾಗೂ ಕರ ವಸೂಲಾತಿಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಪ್ರಸಕ್ತ ಆರ್ಥಿಕ ವರ್ಷದ ಮುಕ್ತಾಯಕ್ಕೆ ಪೂರ್ವ ಶೇ. 100ರಷ್ಟು ಪ್ರಗತಿ ಸಾಧಿಸಲು ತಿಳಿಸಿದರು.