ಗಣಿ ಜಿಲ್ಲೆ ಬಳ್ಳಾರಿಯಲ್ಲಿ 41,144 ಮತದಾರರು ಮೃತಪಟ್ಟಿದ್ದಾರೆ. 1,02,151 ಜನ ಮತದಾರರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಇನ್ನು 49,700 ಮತದಾರರು ಪತ್ತೆಯೇ ಆಗಿಲ್ಲ!
ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ 41,144 ಮತದಾರರು ಮೃತಪಟ್ಟಿದ್ದಾರೆ. 1,02,151 ಜನ ಮತದಾರರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಇನ್ನು 49,700 ಮತದಾರರು ಪತ್ತೆಯೇ ಆಗಿಲ್ಲ! ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಹೊರಬಿದ್ದ ಚಿತ್ರಣವಿದು.
‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ ಅಂಗವಾಗಿ ಕರಡು ಮತದಾರರ ಪಟ್ಟಿ ಪ್ರಕಟ ಕುರಿತು ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿವಿವರಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೂತನ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಪಟ್ಟಿಯು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಜಿಲ್ಲೆಯ ಎಲ್ಲ ನಿಗದಿತ ಸ್ಥಳಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಅಥವಾ ತಿದ್ದುಪಡಿಗಳಿದ್ದಲ್ಲಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಚುನಾವಣಾ ವಿಭಾಗದ ಪ್ರಕ್ರಿಯೆಗಳು ಪಾರದರ್ಶಕವಾಗಿದ್ದು, ಸ್ವೀಕೃತವಾಗುವ ಪ್ರತಿಯೊಂದು ಆಕ್ಷೇಪಣೆ ಹಾಗೂ ಮನವಿಯನ್ನು ನಿಗದಿತ ಕಾನೂನು ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳ ಅನ್ವಯವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
33 ಹೆಚ್ಚುವರಿ ಮತಗಟ್ಟೆಗಳು ಹೆಚ್ಚಳಈ ಹಿಂದೆ ಜಿಲ್ಲೆಯಲ್ಲಿ 12,29,586 ಮತದಾರರಿದ್ದರು. ಪ್ರಸ್ತುತ ಕರಡು ಪಟ್ಟಿಯ ಪ್ರಕಾರ ಒಟ್ಟು 10,06,307 ಮತದಾರರಿದ್ದಾರೆ. ಅಂದರೆ ಶೇ. 81.84ರಷ್ಟು ಮತದಾರರು ನೇರವಾಗಿ ಎಸ್‌ಐಆರ್ ಪ್ರಕ್ರಿಯೆ ಪರಿಶೀಲನೆಗೆ ಒಳಗಾಗಿದ್ದಾರೆ. ಈ ಹಿಂದೆ 1,227 ಮತಗಟ್ಟೆಗಳಿದ್ದವು. 1,200ಕ್ಕಿಂತ ಹೆಚ್ಚು ಮತದಾರರಿರುವ ಕಡೆ 33 ಹೆಚ್ಚುವರಿ ಮತಗಟ್ಟೆಗಳನ್ನು ಗುರುತಿಸಲಾಗಿದದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1,260ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 23ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 24ರಿಂದ ಯಾವುದೇ ಹೊಸ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ನೋಟಿಸ್ ಜಾರಿಯಾದ 7 ದಿನಗಳ ಕನಿಷ್ಟ ಕಾಲಾವಕಾಶದ ನಂತರ ಆಕ್ಷೇಪಣೆಗಳ ಪರಿಶೀಲನೆ ಆರಂಭವಾಗಲಿದ್ದು, ಅಕ್ಟೋಬರ್ 22ರ ವರೆಗೆ ವಿಲೇವಾರಿ ಕಾರ್ಯ ನಡೆಯಲಿದೆ.
ಮತದಾರರ ಪಟ್ಟಿಯ ಮ್ಯಾಪಿಂಗ್ ಆಗದ 11,914 ಹಾಗೂ ದೋಷಪೂರಿತ 25,958 ಪ್ರಕರಣಗಳು ಸೇರಿದಂತೆ ಒಟ್ಟು 37,872 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ನೋಟಿಸ್ ತಲುಪಿದ ಮತದಾರರಿಗೆ ತಮ್ಮ ದಾಖಲೆಗಳನ್ನು ಹಾಜರುಪಡಿಸಲು ಕನಿಷ್ಠ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಮುಂದಿನ ತಿಂಗಳ 1ನೇ ತಾರೀಖಿನಿಂದ ಮತದಾರರ ವಿಚಾರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕಾಗಿ 69 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.ಪೂರಕ ದಾಖಲೆ ಸಲ್ಲಿಕೆ ಕಡ್ಡಾಯ
ಮತದಾರರು ತಮ್ಮ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಜೊತೆಗೆ ಚುನಾವಣಾ ಆಯೋಗ ಸೂಚಿಸಿದ ಪಟ್ಟಿಯ ಯಾವುದೇ2 ಪೂರಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಕರಡು ಪಟ್ಟಿ ಕುರಿತು ಸಾರ್ವಜನಿಕರು ಅಥವಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಹೆಸರು ಕೈಬಿಟ್ಟಿರುವ ಅಥವಾ ತಪ್ಪಾಗಿರುವ ಕುರಿತು ಸಹಾಯಕ ನೋಂದಣಾಧಿಕಾರಿಗಳು ಸ್ಪಷ್ಟ ಕಾರಣಗಳನ್ನೊಳಗೊಂಡ ಆದೇಶ ಹೊರಡಿಸಲಿದ್ದಾರೆ. ಅಧಿಕಾರಿಯ ಆದೇಶಕ್ಕೆ ತೃಪ್ತರಾಗದಿದ್ದರೆ ಮೊದಲ ಮೇಲ್ಮನವಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ (ಜಿಲ್ಲಾಧಿಕಾರಿ) ಹಾಗೂ ಎರಡನೇ ಮೇಲ್ಮನವಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ (ಸಿಇಒ) ಸಲ್ಲಿಸಲು ಅವಕಾಶವಿದೆ.
ಮರಣ ಹೊಂದಿದ್ದಾರೆ ಎಂದು ಗುರುತಿಸಲಾದ 41,164 ಮತದಾರರ ಪೈಕಿ ಯಾರಾದರೂ ಜೀವಂತವಿದ್ದು, ತಪ್ಪಾಗಿ ಹೆಸರು ಕೈಬಿಡಲಾಗಿದ್ದರೆ ಅಂತಹವರು ಸೂಕ್ತ ದಾಖಲೆಗಳೊಂದಿಗೆ ಬಂದು ಸ್ವಯಂಪ್ರೇರಿತರಾಗಿ ಅರ್ಜಿ ಸಲ್ಲಿಸಿ ಹೆಸರು ಮರುಸೇರ್ಪಡೆ ಮಾಡಿಕೊಳ್ಳಬಹುದು. ಕರಡು ಪಟ್ಟಿಯ ಪ್ರಕ್ರಿಯೆಯ ನಂತರ ಬರುವ ಜನವರಿಯಲ್ಲಿ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಅಲ್ಲಿ ವರೆಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿ ಪಟ್ಟಿಯನ್ನು ಸರಿಪಡಿಸಿಕೊಳ್ಳಬಹುದಾಗಿದೆ.ಮತದಾರರ ಪಟ್ಟಿಯಿಂದ ಅಕಸ್ಮಾತ್ ಅರ್ಹರು ಯಾರಾದರೂ ಹೊರಗುಳಿದಿದ್ದರೆ ಅವರನ್ನು ಪಟ್ಟಿಗೆ ಸೇರಿಸುವುದು ಹಾಗೂ ಯಾವುದೇ ಅನರ್ಹರು ಸೇರ್ಪಡೆಗೊಂಡಿದ್ದರೆ ಅಂತಹವರ ಹೆಸರನ್ನು ನಿಯಮಾನುಸಾರ ಪಟ್ಟಿಯಿಂದ ಕೈಬಿಡುವುದು ಚುನಾವಣಾ ವಿಭಾಗದ ಮುಖ್ಯ ಜವಾಬ್ದಾರಿಯಾಗಿದೆ. ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಹಾಗೂ ಯಾವುದೇ ನಕಲಿ ಅಥವಾ ಅನರ್ಹ ಹೆಸರುಗಳು ಪಟ್ಟಿಯಲ್ಲಿ ಉಳಿಯದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರೇಣುಕಾ ಸುದ್ದಿಗೋಷ್ಠಿಯಲ್ಲಿದ್ದರು. ಸಮಗ್ರ ಪರಿಶೀಲನೆ ಬಳಿಕದ ಮಾಹಿತಿಒಟ್ಟು ಮತಗಟ್ಟೆಗಳು: 1260
ಒಟ್ಟು ಮತದಾರರು: 10,06, 307ಪುರುಷರು: 4,94371
ಮಹಿಳೆಯರು: 5,11,740ತೃತೀಯ ಲಿಂಗಿಗಳು: 196
ಕ್ಷೇತ್ರವಾರು ಮತದಾರರ ಸಂಖ್ಯೆ.
ಕ್ಷೇತ್ರ: ಕಂಪ್ಲಿ; ಒಟ್ಟು ಮತದಾರರು 2,04,792ಕ್ಷೇತ್ರ: ಸಿರುಗುಪ್ಪ; ಒಟ್ಟು ಮತದಾರರು 1,96,173
ಕ್ಷೇತ್ರ: ಬಳ್ಳಾರಿ ಗ್ರಾಮೀಣ: ಒಟ್ಟು ಮತದಾರರು 1,99,972ಕ್ಷೇತ್ರ: ಬಳ್ಳಾರಿ ನಗರ: ಒಟ್ಟುಮತದಾರರು 2,02,641
ಕ್ಷೇತ್ರ: ಸಂಡೂರು: ಒಟ್ಟು ಮತದಾರರು 2,02,729