ಸಮಸ್ಯೆ ನಿವಾರಣೆಗಾಗಿ ವಿಶೇಷ ಕಾರ್ಯಾಗಾರ: ಪ್ರಾಚಾರ್ಯ ಶ್ರೀಶೈಲ

| Published : Jul 10 2024, 12:40 AM IST

ಸಾರಾಂಶ

ಬಳ್ಳಾರಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಶಾಲಾ ಶಿಕ್ಷಣ ಇಲಾಖೆ ಹಾಗೂ ಶ್ರೀ ಚೈತನ್ಯ ಪಪೂ ಕಾಲೇಜು ಸಹಯೋಗದಲ್ಲಿ ತಾಳೂರು ರಸ್ತೆಯಲ್ಲಿರುವ ಚೈತನ್ಯ ಕಾಲೇಜಿನ‌ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯರ ಸಂಘದ ಅಧ್ಯಕ್ಷರು ಹಾಗೂ ಉ.ಜ.ಸಿ. ಪಪೂ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಅವರು, ಇತ್ತೀಚಿನ ವರ್ಷಗಳಲ್ಲಿ ಬಳ್ಳಾರಿ ಜಿಲ್ಲೆಯ ಫಲಿತಾಂಶ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಾಗಿದೆ. ಹಾಗೆಯೇ ನಗರದ ಮಕ್ಕಳಿಗೆ ಕನ್ನಡ ಅಕ್ಷರಗಳನ್ನು ತಪ್ಪಿಲ್ಲದಂತೆ ಬರೆಯುವುದು ಬಹು ತ್ರಾಸದಾಯಕವಾಗಿದೆ. ಈ ನಿಟ್ಟಿನಲ್ಲಿ ಭಾಷಾ ಉಪನ್ಯಾಸಕರ ವಿಶೇಷ ಕಾರ್ಯಗಾರ ಏರ್ಪಡಿಸಿ ಇದಕ್ಕೆ ಕಾರಣ ಪರಿಹಾರ ಮುಂತಾದ ವಿಚಾರಗಳನ್ನು ಚರ್ಚಿಸಲಿಕ್ಕೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು ಸದುಪಯೋಗವನ್ನು ಉಪನ್ಯಾಸಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶ್ರೀಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ‌ನಿರ್ದೇಶಕ ಡಾ. ಪಿ. ರಾಧಾಕೃಷ್ಣ ಮಾತನಾಡಿ, ಶಿಕ್ಷಣ ಇಲಾಖೆಯ ಯಾವುದೇ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ನಮ್ಮ ಸಂಸ್ಥೆ ಸದಾ ಸಿದ್ದವಿದೆ ಎಂದರಲ್ಲದೆ, ಬಳ್ಳಾರಿ ಜಿಲ್ಲೆಯ ಫಲಿತಾಂಶ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸುಧಾರಿಸಬೇಕಾಗಿದೆ. ಇಂತಹ ವಿಷಯಗಳು ಈ ಕಾರ್ಯಾಗಾರದಲ್ಲಿ ಚರ್ಚೆಯಾಗಲಿ ಎಂದು ಆಶಿಸಿದರು.

ಮುಖ್ಯ ಅಥಿಗಳಾಗಿ ಪಾಲ್ಗೊಂಡಿದ್ದ ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ಸಣ್ಣ ಶಿವರಾಂ, ಕಾರ್ಯಾಗಾರದಲ್ಲಿ ಬದಲಾದ ಶಿಕ್ಷಣ ಕ್ರಮ, ಪ್ರಶ್ನೆ ಪತ್ರಿಕೆ ಮಾದರಿ, ವಾರ್ಷಿಕ ಪಠ್ಯ ಯೋಜನೆ ಈ ವಿಚಾರಗಳನ್ನು ಕುರಿತು ಚರ್ಚಿಸಿಲಾಗುವುದು ಎಂದರು.

ಕಾರ್ಯಕ್ರಮದ ಅಥಿತಿಗಳಾಗಿ ಕನ್ನಡ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಡಾ. ವೇಣುಗೋಪಾಲ್, ಇಂಗ್ಲಿಷ್ ಫೋರಂ ನ ಅಧ್ಯಕ್ಷ ವಿಕ್ಟರ್ ಎಮ್ಯಾನುಯೆಲ್, ಶ್ರೀ ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ರಾಘವೇಂದ್ರ, ಶ್ರೀ ಚೈತನ್ಯ ಪದವಿ ಕಾಲೇಜಿನ ಪ್ರಾಚಾರ್ಯ ಸಂದೀಪ್ ಆಚಾರ್ಯ, ಪ್ರಾಚಾರ್ಯರ ಸಂಘದ ಖಜಾಂಚಿ ರೋಸಲೀನ್ ಹಾಗೂ ಚೈತನ್ಯ ಪಪೂ ಕಾಲೇಜಿನ ಪ್ರಾಚಾರ್ಯ ಘಯಾಜ್ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಸುಂಕಪ್ಪ, ಭೀಮಣ್ಣ ಜಿ.ಪಿ., ವೀ.ವಿ. ಸಂಘದ ಸ್ವತಂತ್ರ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಹಾಗೂ ಬಿ.ಪಿ.ಎಸ್.ಸಿ. ಕಾಲೇಜಿನ ಕನ್ನಡ ಉಪನ್ಯಾಸಕ ಪ್ರಭಾಕರ ಜೋಯಿಸ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಉಪನ್ಯಾಸಕರು ಪಾಲ್ಗೊಂಡಿದ್ದರು.